ಪದವಿ ವಿದ್ಯಾರ್ಥಿಗಳವರೆಗೆ ಎಲ್ಲರ ಹೃದಯ ತಪಾಸಣೆ ಮಾಡಿ

KannadaprabhaNewsNetwork |  
Published : Jul 15, 2025, 01:00 AM IST

ಸಾರಾಂಶ

ಸರಣಿ ಹೃದಯಾಘಾತ ಸಾವಿನ ಹಿಂದೆ ಆಹಾರ ಅಸುರಕ್ಷತೆಯು ಕಾರಣವಿದೆ. ಈಗ ಶಾಲಾ ಹಂತದಿಂದ ಜೊತೆಗೆ ಅಂತಿಮ ವರ್ಷದ ಬಿಎ ವರೆಗಿನ ವಿದ್ಯಾರ್ಥಿಗಳವರೆಗೂ ಕೂಡ ಹೃದಯ ತಪಾಸಣೆಗೆ ಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿವಿಧ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಹೃದಯಾಘಾತ ತಡೆಗೆ ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ ಮುಂದಾಗಿದ್ದು, ೨೪ ಸಾವಿರ ಮಕ್ಕಳನ್ನ ಸ್ಕ್ರೀನಿಂಗ್ ಮಾಡಲಾಗಿದೆ. ಇದರಲ್ಲಿ ೪೦ ಮಕ್ಕಳಿಗೆ ಸಮಸ್ಯೆ ಇರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನ ಹೆಚ್ಚಿನ ಪರಿಶೀಲನೆ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಸರಣಿ ಹೃದಯಾಘಾತ ಸಾವಿನ ಹಿಂದೆ ಆಹಾರ ಅಸುರಕ್ಷತೆಯು ಕಾರಣವಿದೆ. ಈಗ ಶಾಲಾ ಹಂತದಿಂದ ಜೊತೆಗೆ ಅಂತಿಮ ವರ್ಷದ ಬಿಎ ವರೆಗಿನ ವಿದ್ಯಾರ್ಥಿಗಳವರೆಗೂ ಕೂಡ ಹೃದಯ ತಪಾಸಣೆಗೆ ಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿವಿಧ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಸಾವಿನ ಹಿನ್ನೆಲೆ ಅಸುರಕ್ಷಿತ ಆಹಾರ, ಬೀದಿ ಬದಿ ಆಹಾರಗಳ ಬಗ್ಗೆ ಸರಿಯಾದ ಪರಿಶೀಲನೆ ಆಗಬೇಕು. ಗೋಬಿ ಮಂಚೂರಿಯಲ್ಲಿ ಅತಿ ಹೆಚ್ಚು ಹಾನಿಕಾರಕ ಇರುತ್ತದೆ. ಹೂ ಕೋಸು ಬೆಳೆಯುವಾಗ ಭಾರೀ ಪ್ರಮಾಣದ ಕ್ರಿಮಿನಾಶಕ ಬಳಸುತ್ತಾರೆ. ಇದನ್ನ ಅಡುಗೆ ತಯಾರಿ ಮಾಡುವಾಗ ಸರಿಯಾಗಿ ಬೇಯಿಸೋದಿಲ್ಲ. ಅರ್ಧಂಬರ್ಧ ಬೇಯಿಸಿ ಜನರಿಗೆ ತಿನ್ನಿಸುತ್ತಾರೆ. ಇದನ್ನ ತಿಂದ ಜನರ ಹೊಟ್ಟೆಗೆ ವಿಷ ನೇರವಾಗಿ ಹೋಗುತ್ತದೆ ಎಂದ ಸಚಿವರು, ಜೊತೆಗೆ ನೀರಿನ ಘಟಕಗಳ ಬಗ್ಗೆ ಕೂಡ ಗಮನ ನೀಡಬೇಕಾಗಿದೆ. ಸುರಕ್ಷಿತವಾದ ನೀರು ಕುಡಿಯದೆ ಹೋದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಶುದ್ಧ ನೀರು ತಯಾರಿಸೊ ಕೇಂದ್ರಗಳ ಮೇಲೆ ನಿಗಾ ಇಡಿ ಎಂದು ಸಚಿವರು ಆರೋಗ್ಯ ಇಲಾಖೆ ಸುರಕ್ಷತಾ ಅಧಿಕಾರಿಗಳಿಗೆ ಆದೇಶಿಸಿದರು.೨೪ ಸಾವಿರ ಮಕ್ಕಳ ಸ್ಕ್ರೀನಿಂಗ್:

ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಸಾವು ಪ್ರಕರಣ ವಿಚಾರವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ೪೬ ದಿನಕ್ಕೆ ೨೪ ಜನರ ಸಾವು ಎಂದು ವರದಿ ಆಗಿದೆ. ೨೪ ಜನರಲ್ಲಿ ನಾಲ್ಕು ನಾನ್ ಕಾರ್ಡಿಯಾಕ್ ಸಾವು ಎಂದು ವರದಿ ಇದೆ. ಏಳು ಜನರಲ್ಲಿ ಹೃದಯಾಘಾತ ಸಾವು ಎಂದು ವರದಿ ಇರುವುದಾಗಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಮಾಹಿತಿ ನೀಡಿದರು. ಹೃದಯಾಘಾತ ತಡೆಗೆ ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ ಮುಂದಾಗಿದ್ದು, ೨೪ ಸಾವಿರ ಮಕ್ಕಳನ್ನ ಸ್ಕ್ರೀನಿಂಗ್ ಮಾಡಲಾಗಿದೆ. ಇದರಲ್ಲಿ ೪೦ ಮಕ್ಕಳಿಗೆ ಸಮಸ್ಯೆ ಇರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನ ಹೆಚ್ಚಿನ ಪರಿಶೀಲನೆ ಬಗ್ಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

೯ ಸಾವಿರ ರು. ಹಣ ವಸೂಲಿ:

ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಈ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಇಸಿಜಿ ಒಂದು ರಕ್ತ ಪರೀಕ್ಷೆಗೆ ೯ ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ಶಾಂಕಿಂಗ್ ಮಾಹಿತಿ ನೀಡಿದರು. ಯಾಕೊ ಗ್ಯಾಸ್ಟ್ರಿಕ್ ಆಗಿ ಎದೆ ನೋವು ಬಂದಿತ್ತು. ಯಾವುದಕ್ಕೂ ಇರಲಿ ಎಂದು ಇಸಿಜಿ ಮಾಡಿಸಿದೆ. ಒಂದು ಇಸಿಜಿ ಮತ್ತು ರಕ್ತ ಪರೀಕ್ಷೆಗೆ ೯ ಸಾವಿರ ಬಿಲ್ ಮಾಡಿದರು. ಹಾಗಾಗಿ ನೀವು ಜನರಿಗೆ ಸರ್ಕಾರಿ ಆಸ್ಪತ್ರೆಯಿಂದ ಈ ಪರೀಕ್ಷೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿನ್ನಂತೋರಿಗೆ ಹಿಂಗಾದ್ರೆ ಬೇರೆಯವರ ಕತೆ ಏನು ಎಂದು ಆತಂಕ ವ್ಯಕ್ತಪಡಿಸಿದ ಸಚಿವ ರಾಜಣ್ಣ ಕಳವಳ ವ್ಯಕ್ತಪಡಿಸಿದರು. ಹೃದಯಾಘಾತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಮಾತನಾಡಿ, ಶಾಲಾ ಹಂತದಿಂದ ಅಂತಿಮ ವರ್ಷದ ಬಿಎವರೆಗಿನ ವಿದ್ಯಾರ್ಥಿಗಳವರೆಗೂ ಕೂಡ ಹೃದಯ ತಪಾಸಣೆ ಮಾಡಿಸೊ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಮಾತನಾಡಲಾಗಿದೆ. ಜನರಿಗೆ ತಪ್ಪು ಮಾಹಿತಿ ಹೋಗದಂತೆ ಎಚ್ಚರ ವಹಿಸಿ ಎಂದು ಜನ ಜಾಗೃತಿ ಬಗ್ಗೆ ಸಚಿವರು ಸೂಚಿಸಿದರು. ಮೆಕ್ಕೆ ಜೋಳದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾತನಾಡಿ, ಮೆಕ್ಕೆಜೋಳದಲ್ಲಿ ರೈತರು ನಷ್ಟ ಹೊಂದಿದ್ದಾರೆ. ರೈತರ ರಕ್ಷಣೆಗೆ ಬರುವಂತದ್ದು ವಿಮೆ. ಕಡ್ಡಾಯವಾಗಿ ವಿಮೆ ಮಾಡುವ ಬಗ್ಗೆ ಪ್ರಚಾರ ಮಾಡಿ ರೈತರಿಗೆ ವಿಶ್ವಾಸ ಬರುವ ರೀತಿ ಮನವರಿಕೆ ಮಾಡಿಕೊಡಬೇಕು ಎಂದರು. ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ಸರ್ಕಾರದ ಗ್ರಾಂಟ್ ಏನಿದೆ ಅದರ ಸದುಪಯೋಗವಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಂದುವರಿಯಬೇಕು ಎಂದು ಸಿಡಿಮಿಡಿಗೊಂಡರು. ಸಚಿವ ರಾಜಣ್ಣ ಅವರು ಮಾತನಾಡಿ, ಸರ್ಕಾರದಿಂದ ಕೊಡಲಾಗಿರುವ ಗ್ರಾಂಟ್ ಸದ್ಬಳಕೆ ಆಗಬೇಕು. ಆದರೇ ಇನ್ನು ಆಕ್ಷನ್ ಪ್ಲಾನೇ ಆಗಿರುವುದಿಲ್ಲ. ಹೊಳೆನರಸೀಪುರ ತಾಲೂಕಿನದು ಮಾತ್ರ ಕ್ರಿಯಾ ಯೋಜನೆ ಆಗಿದೆ. ಜಿಲ್ಲೆಯ ವಿವಿಧ ತಾಲೂಕಿನ ನಿರ್ವಹಣಾಧಿಕಾರಿಗಳು ಏನು ಮಾಡುತ್ತಿದ್ದಾರೆ. ಇನ್ನು ನಾಲ್ಕೈದು ತಿಂಗಳುಗಳಿದ್ದು, ಕೆಲಸ ಆಗಬೇಕಾಗಿದೆ. ಸಿಇಒ ಗಮನಕ್ಕೆ ತರಬೇಕು. ಹಣ ಬಿಡುಗಡೆ ಆಗುವುದೇ ಕಷ್ಟ. ಇಲ್ಲಿವರೆಗೂ ಕ್ರಿಯಾ ಯೋಜನೆಗಳೆ ಆಗಿಲ್ಲ ಎಂದು ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳನ್ನು ಕರೆದು ಮಾಹಿತಿ ಕಲೆ ಹಾಕಿದರು.

ಸಂಶೋಧನೆ ಮಾಡಿ:

ಇನ್ನು ತೋಟಗಾರಿಕ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣದಲ್ಲಿ ಹೆಚ್ಚು ತೆಂಗು ಬೆಳೆಗಾರರು ಇದ್ದು, ಕಾಟಚಾರಕ್ಕೆ ನಮಗೆ ಮಾಹಿತಿ ನೀಡಬೇಡಿ. ಒಂದು ತೆಂಗಿನ ಮರದಲ್ಲಿ ಹತ್ತು ಕಾಯಿ ಸಿಗುತ್ತಿಲ್ಲ. ಹೊಂಬಾಳೆ ಒಳಗೆ ಕಪ್ಪಾಗಿ ಹೋಗುತ್ತಿದೆ. ಇಂತಹ ರೋಗ ಜೀವನದಲ್ಲಿ ಬಂದಿರಲಿಲ್ಲ. ನೀವು ಸುಮ್ಮನೆ ಗೌಪ್ಯವಾಗಿ ಕೂರಬೇಡಿ. ಸಂಶೋಧನೆ ಮಾಡಿ ಈ ರೋಗ ನಿಲ್ಲಿಸಲು ಕ್ರಮಕೈಗೊಳ್ಳಿ ಎಂದು ತೋಟಗಾರಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಭೆಗೆ ಯಾವ ಇಲಾಖೆಯ ಅಧಿಕಾರಿಗಳು ಬಂದಿರುವುದಿಲ್ಲ ಮೊದಲು ಹಾಜರಾತಿ ಹಾಕಿ ಎಂದು ಸಭೆ ಆರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ್ ವಿಧಾನ ಪರಿಷತ್ತು ಸದಸ್ಯ ವಿವೇಕಾನಂದ್, ಶಾಸಕ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ, ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಎಡಿಸಿ ಕೆ.ಟಿ. ಶಾಂತಲಾ, ಜಿಪಂ ಆಡಳಿತಾಧಿಕಾರಿ ನವೀನ್ ರಾಜಸಿಂಗ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣೀಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿ ಮೊಹಮ್ಮದ್ ಸುಜೀತಾ ಇತರರು ಉಪಸ್ಥಿತರಿದ್ದರು.

------------------------------------------------------

* ಬಾಕ್ಸ್‌ ನ್ಯೂಸ್‌

ಶುದ್ಧ ಕುಡಿಯುವ ನೀರು ಎಂದು ಜನರಿಗೆ ಅಸುರಕ್ಷಿತ ಕ್ಯಾನ್‌ ನೀರನ್ನು ಕುಡಿಸಲಾಗುತ್ತಿದೆ. ನಗರ ಸೇರಿದಂತೆ ಹಲವೆಡೆಗಳಲ್ಲಿ ಕ್ಯಾನ್‌ ನೀರಿನದ್ದೇ ದಂಧೆಯಾಗಿದೆ. ಮಾಮೂಲಿ ನೀರನ್ನೇ ತುಂಬಿಕೊಂಡು ಬಂದು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಾಗಿ ಇಂತಹ ನೀರಿನ ಘಟಕಗಳ ಮೇಲೆ ದಾಳಿ ಮಾಡಿ ಪರಿಶೀಲಿಸುವಂತೆ ಸಚಿವರು ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!