ಮತದಾರರ ನೋಂದಣಿ ಪ್ರಗತಿ ಕಾರ್ಯ ಪರಿಶೀಲಿಸಿ: ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೂಚನೆ

KannadaprabhaNewsNetwork |  
Published : Oct 30, 2025, 02:30 AM IST
ಬಳ್ಳಾರಿಯಲ್ಲಿ ಸೋಮವಾರ ಜರುಗಿದ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಪ್ರಗತಿ ಕುರಿತು ಜರುಗಿದ ಸಭೆಯಲ್ಲಿ ಜಿ.ಪಂ. ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿದರು.  | Kannada Prabha

ಸಾರಾಂಶ

ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮತದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಬಳ್ಳಾರಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಮತದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ನೋಂದಣಿಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕರ್ನಾಟಕ ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026 ಅಂಗವಾಗಿ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಪ್ರಗತಿ ಕುರಿತು ಸೋಮವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೋಂದಣಿ ಕಾರ್ಯದಲ್ಲಿ ಎಲ್ಲ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಪ್ರೌಢಶಾಲೆ, ವಿಶ್ವವಿದ್ಯಾಲಯ, ಕೃಷಿ, ವೈದ್ಯಕೀಯ ಕಾಲೇಜು, ತಾಂತ್ರಿಕ ಕಾಲೇಜು, ಪದವಿ ಪೂರ್ವ, ಪದವಿ ಕಾಲೇಜುಗಳಲ್ಲಿ ವ್ಯಾಪಕ ಪ್ರಚಾರ ಮಾಡಿ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಬೇಕು. ಅಗತ್ಯವಿದ್ದಲ್ಲಿ ಭರ್ತಿ ಮಾಡುವ ವಿಧಾನ ಕುರಿತು ತರಬೇತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಭಾರತ ಚುನಾವಣಾ ಆಯೋಗ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಬರುವ ನವೆಂಬರ್

6 ರೊಳಗೆ ಮತದಾರರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಅಧಿಕಾರಿಗಳು ಯಾವುದೇ ರೀತಿಯಲ್ಲಿ ನಿರ್ಲಕ್ಷಿಸುವಂತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಶಾಲೆ-ಕಾಲೇಜು ಸಮಸ್ಯೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಎಲ್ಲ ಅರ್ಹ ಮತದಾರರ ನೋಂದಣಿಯನ್ನು ಮಾಡಿಸಲು ಅಕ್ಟೋಬರ್ 27, 30 ಹಾಗೂ ನವೆಂಬರ್ 3ರಂದು ಮತದಾರರ ಮಿಂಚಿನ ನೋಂದಣಿ ಅಭಿಯಾನ ಆಯೋಜಿಸಲಾಗಿದೆ. ಅಭಿಯಾನದ ದಿನಗಳಂದು ತಮ್ಮ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳ ಸೇವೆಯನ್ನು ಪಡೆದು ಅರ್ಹ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅಲ್ಲಿ ನೋಂದಣಿಗಾಗಿ ಅರ್ಹರಿರುವ ಮತದಾರರನ್ನು ಕಚೇರಿ ಮುಖ್ಯಸ್ಥರ ಮುಖಾಂತರ ಸಂಪರ್ಕಿಸಿ, ನಿಗದಿಪಡಿಸಿದ ಸಮಯದೊಳಗೆ ನಿಯಮಾನುಸಾರ ನಮೂನೆ-19ರ ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಸ್ವೀಕರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಕುಲಸಚಿವರು ಹಾಗೂ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಿ ಆದೇಶಿಸಲಾಗಿದ್ದು, ಈ ಎಲ್ಲಾ ಅಧಿಕಾರಿಗಳು ಕೂಡಲೇ ಅರ್ಹ ಮತದಾರರನ್ನು ಗುರುತಿಸಿ ನೋಂದಣಿಗಾಗಿ ಅರ್ಜಿಗಳನ್ನು ಸ್ವೀಕರಿಸಲು, ಈ ಕುರಿತು ವ್ಯಾಪಕ ಪ್ರಚಾರ ನೀಡಲು ಮತ್ತು ಅರ್ಜಿ ಸ್ವೀಕೃತಿ ಸಂಖ್ಯೆಯನ್ನು ಹೆಚ್ಚಿಸುವಂತೆ ಎಂದು ತಿಳಿಸಿದರು.

ಜಿಪಂ ಉಪಕಾರ್ಯದರ್ಶಿ ಮಾತನಾಡಿ, ಜಿಲ್ಲೆಯ ಎಲ್ಲ ಶಾಲಾ-ಕಾಲೇಜು, ವಿದ್ಯಾಸಂಸ್ಥೆ, ವಿಶ್ವವಿದ್ಯಾಲಯಗಳಿಗೆ ಈಗಾಗಲೇ ನಮೂನೆ-19 ಅರ್ಜಿಗಳನ್ನು ವಿತರಣೆ ಮಾಡಲಾಗಿದೆ. ತ್ವರಿತವಾಗಿ ಅರ್ಹತೆ ಇರುವ ಎಲ್ಲ ಶಿಕ್ಷಕರನ್ನು ನೋಂದಾಯಿಸಿಕೊಳ್ಳಲು ಸೂಚಿಸಬೇಕು ಎಂದರು.

ಈಶಾನ್ಯ (ಕಲಬುರಗಿ) ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಅರ್ಹ ಶಿಕ್ಷಕರಿಗೆ ಅರ್ಜಿ ನಮೂನೆ-19 ನೀಡಬಹುದಾಗಿದೆ. ಅವರಿಂದ ಭರ್ತಿ ಮಾಡಿಸಿಕೊಂಡು ಅರ್ಜಿ ಸ್ವೀಕರಿಸಬಹುದಾಗಿದೆ. ಉಳಿದ ಜಿಲ್ಲೆ ಹಾಗೂ ಹೊರ ರಾಜ್ಯದವರು ಅನರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿ ಅದರ ವರದಿಯನ್ನು ಕಡ್ಡಾಯ ಸಲ್ಲಿಸಬೇಕು ಎಂದ ಅವರು, ಹಾಗೆಯೇ ನೋಂದಣಿಗೆ ಭರ್ತಿಯಾಗದೇ ಉಳಿದ ಅರ್ಜಿ ನಮೂನೆಗಳನ್ನು ಹಿಂದಿರುಗಿಸಬೇಕು ಎಂದರು.ಡಿಡಿಪಿಐ ಬಿ.ಉಮಾದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗೋಪಾಲಸ್ವಾಮಿ, ಜಿಪಂ ಸಹಾಯಕ ನಿರ್ದೇಶಕ ಬಸವರಾಜ್ ಹಿರೇಮಠ ಸೇರಿದಂತೆ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್ ಪಿ-ಸಿಆರ್ ಪಿ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜು, ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು