ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಚೆಕ್ಕೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದೊಂದಿಗೆ 23 ನೇ ವರ್ಷದ ಪ್ರತಿಷ್ಠಿತ ಚೆಕ್ಕೇರ ಕ್ರಿಕೆಟ್ ನಮ್ಮೆಗೆ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನ ಹಾಗೂ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ಕ್ರಿಕೆಟ್ ನಮ್ಮೆಗೆ ಚಾಲನೆ ನೀಡಿದರು.
ಮೆರವಣಿಗೆ ಮೈದಾನ ಪ್ರವೇಶ ಮಾಡಿದ ತರುವಾಯ ಚೆಕ್ಕೇರ ಕುಟುಂಬಸ್ಥರ ಹಾಗೂ ಕ್ರಿಕೆಟ್ ಅಕಾಡೆಮಿ ಧ್ವಜವನ್ನು ಗಣ್ಯರು ಹಾರಿಸಿದರು. ನಂತರ ಸಾಂಪ್ರದಾಯಿಕವಾಗಿ ಕುಶಲ ತೋಪುಗಳನ್ನು ಒಂದು ಸುತ್ತು ಹಾರಿಸಲಾಯಿತು.ಈ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಸಂಪ್ರದಾಯದ ಭಾಗವಾಗಿ ಹಾಕಿ, ಕ್ರಿಕೆಟ್ ಮತ್ತು ಇತರೆ ಕ್ರೀಡೆಯನ್ನು ಆಯೋಜಿಸಲಾಗುತ್ತಿದೆ. ಕೊಡವ ಜನಾಂಗ ಬಿಟ್ಟು ಇತಿಹಾಸ ಬರೆಯಲು ಸಾಧ್ಯವಿಲ್ಲ. ಇದು ಕ್ರೀಡೆಗೆ ಕೊಡವರ ಕೊಡುಗೆಯಾಗಿದೆ. ಮೈದಾನದ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ 25 ಲಕ್ಷ ಅನುದಾನ ನೀಡಿರುವೆ. ಇದರಿಂದ ಕ್ರೀಡೆಗೆ ಪ್ರೋತ್ಸಾಹ ನೀಡಿರುವೆ. ಮಕ್ಕಳಿಗೆ ಪ್ರೋತ್ಸಾಹ ಸಿಗುವಂತಾಗಬೇಕು, ಸಮಾಜಕ್ಕೆ ಚೆಕ್ಕೇರ ಕುಟುಂಬಸ್ತರ ಕೊಡುಗೆ ಅಪಾರವಾಗಿದೆ ಎಂದ ಇವರು ಚೆಕ್ಕೇರ ಮೋಟಯ್ಯನವರು ನ್ಯಾಯಂಗ ವ್ಯವಸ್ಥೆಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದರು.
ಕ್ರಿಕೆಟ್ ನಮ್ಮೆಯ ಅಧ್ಯಕ್ಷ ಚೆಕ್ಕೇರ ಚಂದ್ರಪ್ರಕಾಶ್ ಮಾತನಾಡಿ ಎಂಟು ಬಾರಿ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದೇವೆ. ಹಾಕಿ ನಮ್ಮೆ ನಡೆಸಿ ಯಶಸ್ವಿಯಾಗಿದ್ದೆವು. ಅಂಜಿಕೇರಿ ಮಕ್ಕಳು ಇದಕ್ಕೆ ಬೆಂಬಲವಾಗಿ ನಿಂತರು. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅತೀ ಹೆಚ್ಚು ಅನುದಾನ ನೀಡುವ ಮೂಲಕ ಸಹಕಾರ ಮಾಡಿದರು. ಕುಟುಂಬಸ್ಥರ ಅಪಾರ ಸಹಕಾರ ಕ್ರಿಕೆಟ್ ಆಯೋಜನೆಗೆ ಸಹಕಾರಿಯಾಯಿತು ಎಂದರು.ಕರ್ನಾಟಕ ಸರ್ಕಾರದ ಚೀಫ್ ಇಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಲಂಪಿಯನ್ ಬಾಳೆಯಡ ಸುಬ್ರಹ್ಮಣಿ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.