ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹಲವಾರು ಹೋರಾಟಗಳಿಗೆ ಸಿಕ್ಕ ಪ್ರತಿಫಲ ಹಾಗೂ ಗಡಿನಾಡಿನ ಜನತೆಯ ಬೇಡಿಕೆ ಕೈಗೂಡಿ ಜಿಲ್ಲೆಯಲ್ಲಿ ನೂತನ ಚೇಳೂರು ತಾಲೂಕು ರಚನೆಯಾಯಿತು. ಖಾಸಗಿ ಕಟ್ಟದಲ್ಲಿ ತಾತ್ಕಾಲಿಕವಾಗಿ ತಾಲೂಕು ಕಚೇರಿ ಆರಂಭಿಸಲಾಗಿದೆ.ಆದರೆ, ಒಂದು ವರ್ಷ ಕಳೆಯುತ್ತಾ ಬಂದರು ಇದುವರೆಗೂ ನೂತನ ತಾಲೂಕಿಗೆ ಬೇಕಾದ ಯಾವುದೇ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಕೇವಲ ನಾಡ ಕಚೇರಿ ನಾಮಫಲಕ ಈಗ ತಾಲೂಕು ಕಚೇರಿಯಾಗಿದೆ. ಸಿಬ್ಬಂದಿಯನ್ನೇ ನೇಮಿಸಿಲ್ಲ
ನೂತನ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್ 1ತಹಸೀಲ್ದಾರ್, ಇಬ್ಬರು ಗ್ರೇಡ್ 2 ತಹಸೀಲ್ದಾರರು, ಇಬ್ಬರು ಶಿರಸ್ತೇದಾರರು, ಮೂವರು ಪ್ರಥಮ ದರ್ಜೆ ಸಹಾಯಕರು, ಒಬ್ಬರು ಆಹಾರ ನೀರಿಕ್ಷಕರು, ನಾಲ್ವರು ದ್ವಿತೀಯ ದರ್ಜೆ ಸಹಾಯಕರು, ಒಬ್ಬರು ಡಾಟಾ ಎಂಟ್ರಿ ಅಪರೇಟರ್, ಮೂವರು ಗ್ರೂಪ್ ಡಿ ದರ್ಜೆ ಸಹಾಯಕರು ಸೇರಿ ಒಟ್ಟು 17 ಸಿಬ್ಬಂದಿ ಇರಬೇಕು. ಆದರೆ ಇನ್ನೂ ನೇಮಿಸಿಲ್ಲ.ಆದರೆ ಲೋಕಸಭೆಯ ಚುನಾವಣೆಯ ಸಮಯದಲ್ಲಿ ಮಾತ್ರ ತಹಸೀಲ್ದಾರ್ ನೇಮಕ ಮಾಡಲಾಗಿದೆ, ಆದರೆ ಆಡಳಿತ ಅಧಿಕಾರ ಮಾತ್ರ ಬಾಗೇಪಲ್ಲಿ ತಾಲೂಕಿನ ತಹಸೀಲ್ದಾರರ ಕೈಯಲ್ಲಿದೆ. ಮೊದಲಿಗೆ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡವನ್ನು ತಾಲೂಕು ಕಚೇರಿಗೆ ಬಳಸಲು ಮುಂದಾದರು, ಆದರೆ ಕೆಲ ದಲಿತ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು, ಅಲ್ಲಿಯೇ ಪಕ್ಕದಲ್ಲಿ ಇರುವ ಒಂದು ಖಾಸಗಿ ಕಟ್ಟಡವನ್ನು ಬಾಡಿಗೆ ಪಡೆದು ತಾಲೂಕು ಕಚೇರಿ ಎಂದು ನಾಮಫಲಕ ಬರೆದು ತಾತ್ಕಾಲಿಕವಾಗಿ ಉದ್ಘಾಟನೆ ಮಾಡಲಾಯಿತು. ಕಚೇರಿಗಳು ಅರಂಭವಾಗಿಲ್ಲಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿ ಪ್ರಾರಂಭಿಸಿದ್ದರೂ, ಬಿಇಒ, ಆರಣ್ಯ, ತೋಟಗಾರಿಕೆ, ತಾಪಂ, ಬಿಸಿಎಂ, ಕೃಷಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಕೆಐಆರ್‌ಡಿಎಲ್ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಮೀನುಗಾರಿಕೆ, ಅಬಕಾರಿ. ಸಣ್ಣ ನೀರಾವರಿ, ಅಕ್ಷರ ದಾಸೋಹ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಗಳು ಇನ್ನೂ ಹೊಸ ತಾಲೂಕು ಕೇಂದ್ರದಲ್ಲಿ ಆರಂಭವಾಗಿಲ್ಲ. ನೂತನ ತಾಲೂಕು ಕೇಂದ್ರಗಳ ರಚನೆಗೆ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದ ಸಮಿತಿಗಳು ಸಹ ಇತರೆ ಇಲಾಖೆಗಳ ಕಚೇರಿ ಆರಂಭದ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಆಶ್ಚರ್ಯ ಮೂಡಿಸಿದೆ. ಮೊದಮೊದಲಿಗೆ ಸಂಬಂಧಿತರಿಗೆ ಮನವಿ ಸಲ್ಲಿಸಿದ್ದು ಹೊರತು ಪಡಿಸಿದರೆ ಹೋರಾಟದ ಸ್ವರೂಪ ಪಡೆದುಕೊಂಡಿಲ್ಲ. ಹೀಗಾಗಿ ಸರ್ಕಾರ ಕೂಡ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ವಾದ.