ಚೆಲುವನಾರಾಯಣನಿಗೆ ವಜ್ರ ಖಚಿತ ಶ್ರೀಕೃಷ್ಣರಾಜ ಮುಡಿ ಕಿರೀಟಧಾರಣೆ

KannadaprabhaNewsNetwork | Published : Jul 28, 2024 2:02 AM
Follow Us

ಸಾರಾಂಶ

ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಓಡೆಯರ್ ತಮ್ಮ ಮನೆದೇವರಾದ ಶ್ರೀಚೆಲುವನಾರಾಯಣ ಸ್ವಾಮಿಗೆ ಭಕ್ತಿಯಿಂದ ಅರ್ಪಿಸಿರುವ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾಂಛನವುಳ್ಳ ಕೃಷ್ಣರಾಜಮುಡಿ ಮತ್ತು ಗಂಡು ಭೇರುಂಡ ಪದಕ ದರ್ಶನ ಭಕ್ತರಿಗೆ ಉಲ್ಲಾಸ ನೀಡಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಕೊರೆಯುವ ಚಳಿ, ತುಂತುರು ಮಳೆ ವಾತಾವರಣದ ನಡುವೆ ಐತಿಹಾಸಿಕ ಮಹತ್ವದ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿತು.

ಆಷಾಢ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಶುಕ್ರವಾರ ರಾತ್ರಿ 7.30ಕ್ಕೆ ಶ್ರೀಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟ ತೊಡಿಸಿ ವೈಭವದಿಂದ ತಿರುವೀದಿಗಳಲ್ಲಿ ವಿಜೃಭಣೆಯಿಂದ ಉತ್ಸವ ನೆರವೇರಿಸಲಾಯಿತು.

ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ತಂದ ಶ್ರೀ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಮಳೆ ನೀರು ನಿಂತಿದ್ದ ಕಾರಣ ದೇಶಿಕರ ಸನ್ನಿಧಿ ಬದಲು ದೇವಾಲಯದಲ್ಲೇ ಪಾರ್ಕಾವಣೆ ಮಾಡಿ ತೆರೆದು ವಜ್ರಖಚಿತ ಕೃಷ್ಣರಾಜಮುಡಿ ಮತ್ತು ಗಂಡು ಬೇರುಂಡ ಪದಕವನ್ನು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಸ್ಥಾನೀಕರು, ಅರ್ಚಕ ಪರಿಚಾರಕರ ಸಮ್ಮುಖದಲ್ಲಿ ಪರಿಶೀಲನೆ ಮಾಡಿದರು.

ನಂತರ ಅರ್ಧಚಂದ್ರ ಪ್ರಭಾವಳಿಯಲ್ಲಿ ಭವ್ಯ ಪುಪ್ಪಗಳಿಂದ ಅಲಂಕೃತನಾಗಿ ಶ್ರೀದೇವಿಭೂದೇವಿ ಅಮ್ಮನವರ ಸಮೇತ ಗರುಡರೂಢನಾದ ಶ್ರೀ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಶ್ರೀಕೃಷ್ಣರಾಜಮುಡಿ ಕಿರೀಟಧಾರಣೆ ಮಾಡಲಾಯಿತು.

ಇದೇ ವೇಳೆ ಗಂಡುಬೇರುಂಡ ಪದಕ ಹಾಗೂ ಇತರ ಅಭರಣಗಳನ್ನು ತೊಡಿಸಿ ಮಹಾಮಂಗಳಾರತಿ ನೆರವೇರಿಸಿ ಶ್ರೀ ಕೃಷ್ಣ ರಾಜಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಳೆ ಕಾರಣ ವೇದಾಂತ ದೇಶಿಕರ ಸನ್ನಿದಿ ಬದಲು ಈ ವರ್ಷ ರಾಮಾನುಜಾಚಾರ್ಯರ ಸನ್ನಿಧಿಯಲ್ಲೇ ಕಿರೀಟಧಾರಣ ಮಹೋತ್ಸವ ನಡೆಸಲಾಯಿತು. ದಿವ್ಯಪ್ರಬಂಧ ಹಾಗೂ ಮಂಗಳವಾದ್ಯದೊಂದಿಗೆ ರಾಜಬೀದಿಯಲ್ಲಿ ಕೃಷ್ಣರಾಜಮುಡಿ ಉತ್ಸವ ವಿಜೃಭಣೆಯಿಂದ ನೆರವೇರಿತು.

ಈ ವೇಳೆ ಉಪವಿಭಾಗಾಧಿಕಾರಿ ನಂದೀಶ್, ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಮಹೇಶ್, ಕೆಚ್ಚೆದೆಯ ಕನ್ನಡತಿ ಅನುಅಕ್ಕ, ಪಾರುಪತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ಎಂ.ಎನ್ ಪಾರ್ಥಸಾರಥಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ರಾತ್ರಿ 10ಗಂಟೆವರೆಗೆ ನಡೆದ ಉತ್ಸವ ಭಕ್ತರ ಮನಸೂರೆಗೊಂಡಿತು. ಕೃಷ್ಣರಾಜಮುಡಿ ಉತ್ಸವಕ್ಕೂ ಮುನ್ನ ಸಂಜೆ ನಾಗವಲ್ಲಿ ಮಹೋತ್ಸವದ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನೆರವೇರಿತು. ಉತ್ಸವದ ನಂತರ ಮೇಲುಕೋಟೆಯಲ್ಲಿ ಹಲವು ಸಮಯ ಧಾರಾಕಾರ ಮಳೆ ಸುರಿಯಿತು.

ಭಕ್ತರ ಮನಸೆಳೆದ ಆಭರಣ:

ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಓಡೆಯರ್ ತಮ್ಮ ಮನೆದೇವರಾದ ಶ್ರೀಚೆಲುವನಾರಾಯಣ ಸ್ವಾಮಿಗೆ ಭಕ್ತಿಯಿಂದ ಅರ್ಪಿಸಿರುವ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾಂಛನವುಳ್ಳ ಕೃಷ್ಣರಾಜಮುಡಿ ಮತ್ತು ಗಂಡು ಭೇರುಂಡ ಪದಕ ದರ್ಶನ ಭಕ್ತರಿಗೆ ಉಲ್ಲಾಸ ನೀಡಿತು.

ಜಿಲ್ಲಾ ಖಜಾನೆಯಲ್ಲಿದ್ದ ಶ್ರೀ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಮಂಡ್ಯ ತಾಲೂಕು ಶಿವಳ್ಳಿ ಮಾರ್ಗವಾಗಿ ಮೇಲುಕೋಟೆಗೆ ತಂದು ವೀರಾಂಜನೇಯ ಸ್ವಾಮಿಗುಡಿಯಲ್ಲಿ ವಿಶೇಷ ಪೂಜಿಸಿ ಸಲ್ಲಿಸಿ ಪಲ್ಲಕಿಯಲ್ಲಿಟ್ಟು ಶ್ವೇತಛತ್ರಿ ಮತ್ತು ಮಂಗಳ ವಾದ್ಯದೊಂದಿಗೆ ದೇವಾಲಯಕ್ಕೆ ಮೆರವಣಿಗೆ ಮೂಲಕ ತರಲಾಯಿತು.

ಕೃಷ್ಣರಾಜಮುಡಿ ಕಿರೀಟ ಜುಲೈ 30 ರವರೆಗೆ ಪ್ರತಿ ದಿನ ಸಂಜೆ ವಿವಿಧ ಉತ್ಸವದಲ್ಲಿ ಚೆಲುವರಾಯ ಸ್ವಾಮಿಯನ್ನು ಅಲಂಕರಿಸಲಾಗುತ್ತದೆ. ಮುಮ್ಮಡಿ ಕೃಷ್ಣರಾಜಓಡೆಯರು 18ನೇ ಶತಮಾನದಲ್ಲಿ ಆರಂಭಿಸಿದ ಈ ಬ್ರಹ್ಮೋತ್ಸವ ಅನುಚಾನವಾಗಿ ನಡೆಯುತ್ತಾ ಬಂದಿದ್ದು ಈ ವರ್ಷವೂ ಆಡಂಬವಿಲ್ಲದೇ ನೆರವೇರಿತು. ದೀಪಾಲಂಕಾರ ಇಲ್ಲ:

ಮಾಜಿ ಸಚಿವ ಸಿ.ಎಸ್.ಪುಟ್ಟರಾಜುರವರ ಸೂಚನೆಯಂತೆ ಕಳೆದ ಮೂರು ವರ್ಷಗಳಿಂದ ಮೈಸೂರಸರ ಹೆಸರಲ್ಲಿ ನಡೆಯುವ ಹತ್ತು ದಿನಗಳ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ದೇವಾಲಯದ ರಾಜಗೋಪುರ ಹಾಗೂ ರಾಜಬೀದಿಗೆ ಸರಳ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಸರಳ ದೀಪಾಲಂಕಾರ ಕಂಡುಬರದೆ ಭಕ್ತರ ಬೇಸರಕ್ಕೆ ಕಾರಣವಾಗಿತ್ತು.