ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜಾಚಾರ್ಯರು ಯದುಗಿರಿಯ ಬೆಟ್ಟದ ಮೇಲೆ ಕಗ್ಗತ್ತಲ ಕಾಡಿನ ಮಧ್ಯೆ ಇದ್ದ ಹುತ್ತ ಕರಗಿಸಿ ಚೆಲುವನಾರಾಯಣ ಸ್ವಾಮಿಯ ದಿವ್ಯ ಮಂಗಳ ರೂಪವನ್ನು ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ಜಗತ್ತಿಗೆ ಪ್ರಕಾಶಪಡಿಸಿ ಕರ್ನಾಟಕದ ಧೀಮಂತ ಅರಸ ವಿಷ್ಣುವರ್ಘನನಿಂದ ದೇಗುಲ ನಿರ್ಮಿಸಿದ್ದರು. ಈ ಕಾರಣ ಪ್ರತಿವರ್ಷ ತೈ ಪುನರ್ವಸು ಉತ್ಸವ ನಡೆಯುತ್ತಾ ಬಂದಿದೆ.ಪುನರ್ವಸು ಅಂಗವಾಗಿ ಮೇಲಕೋಟೆ ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ. ಶ್ರೀ ಭಾಷ್ಯಕಾರ ಸನ್ನಿಧಿ ವಂಗೀಪುರಂ ನಂಬಿ ಮನೆತನ ಪ್ರತಿವರ್ಷ ಈ ಮಹೋತ್ಸವವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿದೆ. ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ
ಸೋಮವಾರ ಬೆಳಗ್ಗೆ 4 ಗಂಟೆಗೆ ರಾಮಾನುಜರಿಗೆ ಅಭಿಷೇಕ 6 ಗಂಟೆಗೆ ಕಲ್ಯಾಣಿಗೆ ಉತ್ಸವ, 8.30ಕ್ಕೆ ಶ್ವೇತವಸ್ತ್ರಧಾರಣೆ ಗಧ್ಯತ್ರಯಗೋಷ್ಟಿ ತಿರುಪ್ಪಾವೈ ಶಾತ್ತುಮೊರೆ ನಡೆದು 9 ಗಂಟೆಗೆ ದೇವಾಲಯಕ್ಕೆ ರಾಮಾನುಜರ ಉತ್ಸವ ಆರಂಭವಾಗಲಿದೆ.11 ಗಂಟೆಗೆ ದೇವಾಲಯದ ರಾಜಗೋಪುರದ ಬಳಿ ರಾಮಾನುಜ ನೂತ್ತಂದಾದಿ ಶಾತ್ತುಮೊರೆ ರಾಮಾನುಜರು ತಿರುನಾರಾಯಣನನ್ನು ಕಂಡು ನಿಜವಾದ ಬೆಳಕುಕಂಡೆ ನಾರಾಯಣನ ದರ್ಶನ ಮಾಡಿದೆ ಎಂದು ಸ್ತುತಿಸಿದ ಪಾಶುರದ ಪಾರಾಯಣ ನಡೆಯಲಿದೆ.
ಫೆ.10 ಭಕ್ತರಿಗೆ ದೇವರದರ್ಶನ ಇಲ್ಲ