ನಾಳೆಯಿಂದ ನಾಪೋಕ್ಲುವಿನಲ್ಲಿ ಚೇನಂಡ ಹಾಕಿ ಉತ್ಸವ

KannadaprabhaNewsNetwork |  
Published : Apr 04, 2026, 02:45 AM IST
ಚಿತ್ರ :  3ಎಂಡಿಕೆ4 : ಕೊಡವ ಹಾಕಿ ಅಕಾಡೆಮಿ ಹಾಗೂ ಚೇನಂಡ ಕುಟುಂಬದ ಪ್ರಮುಖರು.  | Kannada Prabha

ಸಾರಾಂಶ

ಕೊಡವ ಕುಟುಂಬಗಳ ನಡುವಿನ 26ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯವನ್ನು ಈ ಬಾರಿ ಚೇನಂಡ ಕುಟುಂಬ ವಹಿಸಿದ್ದು, ಏ. 5ರಿಂದ ಮೇ 2ರವರೆಗೆ ನಾಪೋಕ್ಲುವಿನಲ್ಲಿ ಒಂದು ತಿಂಗಳ ಕಾಲ ಹಾಕಿ ಪಂದ್ಯಾವಳಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕೊಡವ ಕುಟುಂಬಗಳ ನಡುವಿನ 26ನೇ ವರ್ಷದ ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯವನ್ನು ಈ ಬಾರಿ ಚೇನಂಡ ಕುಟುಂಬ ವಹಿಸಿದ್ದು, ಏ. 5ರಿಂದ ಮೇ 2ರವರೆಗೆ ನಾಪೋಕ್ಲುವಿನಲ್ಲಿ ಒಂದು ತಿಂಗಳ ಕಾಲ ಹಾಕಿ ಪಂದ್ಯಾವಳಿ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊಡವ ಹಾಕಿ ಅಕಾಡೆಮಿ ಮಾರ್ಗದರ್ಶನದಲ್ಲಿ ಹಾಕಿ ಉತ್ಸವ ನಡೆಯಲಿದ್ದು, ಈ ಬಾರಿ ಸುಮಾರು 382 ಕೊಡವ ಕುಟುಂಬಗಳು ಪಾಲ್ಗೊಳ್ಳಲಿವೆ. ಕೊಡವ ಹಾಕಿ ಇತಿಹಾಸದಲ್ಲೇ ಅತಿ ಹೆಚ್ಚು ತಂಡಗಳು ನೋಂದಣಿಯಾದ ಎರಡನೇ ಉತ್ಸವ ಇದಾಗಿದೆ. 2025ರಲ್ಲಿ ಮಡಿಕೇರಿಯಲ್ಲಿ ನಡೆದ ಮುದ್ದಂಡ ಹಾಕಿ ಉತ್ಸವದಲ್ಲಿ ಸುಮಾರು 396 ತಂಡಗಳು ನೋಂದಾಯಿಸಿಕೊಂಡಿದ್ದವು.

ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಚೇನಂಡ ಕಪ್ ಹಾಕಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಗ್ಯಾಲರಿ ನಿರ್ಮಾಣ ಮತ್ತು ಮೈದಾನ ಸಿದ್ಧತಾ ಕೆಲಸಗಳು ನಡೆಯುತ್ತಿವೆ.

ಪಂದ್ಯಾವಳಿಗಾಗಿ ನಾಲ್ಕು ಮೈದಾನಗಳನ್ನು ಸಿದ್ಧಗೊಳಿಸಲಾಗುತ್ತದೆ. ಆ ಪೈಕಿ ಕುಂಡೋಳಂಡ ಕುಟುಂಬಸ್ಥರು ಸ್ವ ಇಚ್ಛೆಯಿಂದ ಒಂದು ಮೈದಾನದ ಸಿದ್ಧತಾ ಕಾರ್ಯ ನಡೆಸಿಕೊಡುತ್ತಿದ್ದಾರೆ. ಉಳಿದ ಮೂರು ಮೈದಾನಗಳನ್ನು ಚೀನಂಡ ಕುಟುಂಬಸ್ಥರು ಸಿದ್ಧಪಡಿಸಲಿದ್ದಾರೆ. ಮೈದಾನದ ಸುತ್ತಲೂ ೧೨ ಹಂತಗಳ ಗ್ಯಾಲರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಸುಮಾರು 20 ಸಾವಿರ ಮಂದಿ ಏಕ ಕಾಲದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಕೊಡವ ಹಾಕಿ ಉತ್ಸವವನ್ನು ಈವರೆಗೂ ಆಯೋಜಿಸಿರುವ ಎಲ್ಲ ಕುಟುಂಬಗಳ ಐನ್‌ ಮನೆಗಳಿಗೆ ಚೇನಂಡ ಕುಟುಂಬಸ್ಥರು ಭೇಟಿ ನೀಡಿ, ಅವರನ್ನು ಪಂದ್ಯಾವಳಿಗೆ ಆಹ್ವಾನಿಸಿ, ಅವರ ಅಯೋಜನೆಯಲ್ಲಿ ನಡೆದ ಪಂದ್ಯಾವಳಿಯ ಮಾಹಿತಿ ಪಡೆದು, ಅದನ್ನು ಸಾಕ್ಷ ಚಿತ್ರದಂತೆ ತಯಾರಿಸಿ ಪಂದ್ಯಾವಳಿ ವೇಳೆ ಬೃಹತ್ ಎಲ್‌ಇಡಿ ಪರದೆಯಲ್ಲಿ ಪ್ರದರ್ಶನಗೊಳಿಸಲಾಗುತ್ತದೆ.

ಮೈದಾನದ ಆವರಣದಲ್ಲಿ ಚೇನಂಡ ಕುಟುಂಬದ ಮಾಹಿತಿ, ಈತನಕದ ಹಾಕಿ ಹಬ್ಬದ ಮಾಹಿತಿ, ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರ ಪುತ್ಥಳಿ ಕೂಡ ಇರಲಿದೆ. ಏ.5ರಂದು ಜೈನ್ ಕಾಲೇಜು ಹಾಗೂ ಎಂಇಜಿ ನಡುವೆ ಹಾಗೂ ಯುಎಇ ತಂಡ ಹಾಗೂ ತವರು ಮನೆ ತಂಡದ ನಡುವೆ ಪ್ರದರ್ಶನ ಪಂದ್ಯಗಳು ಇರಲಿವೆ.

2000ಕ್ಕೂ ಅಧಿಕ ಗಿಡ:

ಒಂದು ತಿಂಗಳ ಹಾಕಿ ಉತ್ಸವದಲ್ಲಿ ಸುಮಾರು 2000ಕ್ಕೂ ಅಧಿಕ ಗೋಲು ದಾಖಲಾಗುವ ಸಾಧ್ಯತೆ ಇರುವುದರಿಂದ ಒಂದು ಗೋಲಿಗೆ ಒಂದು ಗಿಡ ನೆಡುವ ಕಾರ್ಯಕ್ರಮವನ್ನು ಚೇನಂಡ ಕುಟುಂಬ ಹಮ್ಮಿಕೊಂಡಿದೆ. ಶೆಟ್ಟಿಗೇರಿಯ ದೇವರ ಕಾಡುಗಳಲ್ಲಿ 1700 ಗಿಡ ನೆಡುವ ವ್ಯವಸ್ಥೆ ಇರಲಿದೆ. ಅರಣ್ಯ ಇಲಾಖೆ, ಗೋಣಿಕೊಪ್ಪ ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಸಹಕಾರ ನೀಡಲಿದ್ದಾರೆ. ಮಲೆತಿರಿಕೆ, ಕೋಪಟ್ಟಿ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.

ಟಾರ್ಪಲಿನ್ ಸಂಸ್ಥೆಯೊಂದರ ಸಹಯೋಗದಲ್ಲಿ ಮಳೆಯಿಂದ ಮೈದಾನ ಹಾಳಾಗದಂತೆ ಸಂಪೂರ್ಣ ಮುಚ್ಚುವ ಚಿಂತನೆ ನಡೆಸಲಾಗಿದೆ. ಮಳೆ ಬಂದಾಗ ಕ್ರಿಕೆಟ್‌ನಲ್ಲಿ ಪಿಚ್ ರಕ್ಷಣೆ ಮಾಡುವಂತೆ ಇಡೀ ಮೈದಾನಕ್ಕೆ ಚಾರ್ಪಲ್ ಹೊದಿಕೆಯ ರಕ್ಷಣೆ ನೀಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ.

ಉದ್ಘಾಟನೆ ಪಂದ್ಯದಂದು ಸಂಸದರಾದ ಯದುವೀರ್ ಒಡೆಯರ್‌, ಜಿಲ್ಲೆಯ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ,, ಎಂಎಲ್ಸಿ ಸುಜಾ ಕುಶಾಲಪ್ಪ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.ಪ್ರಮುಖ ವಿಶೇಷತೆ:

*ಕೊಡವ ಕೌಟುಂಬಿಕ ಹಾಕಿ ಉತ್ಸವದ ಸ್ಥಾಪಕ ಪಾಂಡಂಡ ಕುಟ್ಟಪ್ಪ ಅವರ ಸ್ಮರಣಾರ್ಥ ಕೆಎಚ್ಎ ವಿಜೇತರಿಗೆ 1 ಕೆಜಿ ಸಿಲ್ವರ್ ರೋಲಿಂಗ್ ಟ್ರೋಫಿ ದೊರಕಲಿದೆ.

*ಸತತ 3ನೇ ವರ್ಷವೂ ಸ್ಕೂಟಿ ಕಂಪನಿಯ ಪ್ರಾಯೋಜಕತ್ವದಲ್ಲಿ ಇವಿ ಸ್ಕೂಟರ್ ಅನ್ನು ಅತ್ಯುತ್ತಮ ಆಟಗಾರನಿಗೆ ನೀಡಲಾಗುತ್ತಿದೆ.

*2026-27ರ ಶೈಕ್ಷಣಿಕ ವರ್ಷಕ್ಕೆ ಕೊಡವ ಹಾಕಿ ಅಕಾಡೆಮಿಯಿಂದ ಶಿಫಾರಸು ಮಾಡಲಾಗುವ ಪ್ರತಿಭಾನ್ವಿತ ಆಟಗಾರರಿಗೆ ಪದವಿ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಶೈಕ್ಷಣಿಕ ಶುಲ್ಕದಲ್ಲಿ ಮೈಸೂರಿನ ಆರ್.ವಿ. ವಿಶ್ವವಿದ್ಯಾಲಯವು ಶೇ. 100ರವರೆಗೆ ವಿದ್ಯಾರ್ಥಿವೇತನ ಘೋಷಿಸಿದೆ.

ಏ. 5ರಿಂದ ಒಂದು ತಿಂಗಳ ಕಾಲ ನಾಪೋಕ್ಲುವಿನಲ್ಲಿ ಕೊಡವ ಹಾಕಿ ಅಕಾಡೆಮಿ ಸಹಕಾರದಲ್ಲಿ ನಮ್ಮ ಕುಟುಂಬದ ಮುಂದಾಳತ್ವದಲ್ಲಿ ಹಾಕಿ ಉತ್ಸವ ನಡೆಯಲಿದ್ದು, ಈ ಬಾರಿ ಹಲವು ವಿಶೇಷತೆಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಕಿ ಉತ್ಸವಕ್ಕೆ 3 ಕೋಟಿ ರು. ವೆಚ್ಚವಾಗುವ ಸಾಧ್ಯತೆ ಇದ್ದು, ಹಲವರ ಸಹಕಾರ ಪಡೆಯಲಾಗಿದೆ. ಪಂದ್ಯದಲ್ಲಿ ಸುಮಾರು 2000ಕ್ಕೂ ಅಧಿಕ ಗೋಲು ದಾಖಲಾಗಲಿದ್ದು, ಒಂದು ಗೋಲಿಗೆ ಒಂದು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

-ಚೇನಂಡ ದೀನಾ ಚಂಗಪ್ಪ, ಕಾರ್ಯಾಧ್ಯಕ್ಷ ಚೇನಂಡ ಹಾಕಿ ಉತ್ಸವನಾಪೋಕ್ಲುವಿನಲ್ಲಿ 26ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಮ್ಮ ಕುಟುಂಬ ಆತಿಥ್ಯ ವಹಿಸಿಕೊಂಡಿದ್ದು, ಈಗಾಗಲೇ ಹಾಕಿ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 20 ಸಾವಿರ ಮಂದಿ ಕುಳಿತುಕೊಳ್ಳಲು ಮೈದಾನದಲ್ಲಿ ಗ್ಯಾಲರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

-ಕಂಬಣಿ ಕರುಂಬಯ್ಯ, ಅಧ್ಯಕ್ಷ ಚೇನಂಡ ಹಾಕಿ ಉತ್ಸವ

ಕರಡ ಗ್ರಾಮದಲ್ಲಿ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರು 1997ರಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆರಂಭಿಸಿದ್ದರು. ಇದೀಗ 26ನೇ ವರ್ಷ ಯಶಸ್ವಿಯಾಗಿ ಹಾಕಿ ಉತ್ಸವ ನಡೆಯುತ್ತಿದೆ. ದೇಶ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚದುರಿ ಹೋಗಿರುವ ಕೊಡವರನ್ನು ಒಂದು ಗೂಡಿಸಲು ಈ ಹಾಕಿ ಉತ್ಸವ ಕಾರಣವಾಗಲಿದೆ.

-ಪಾಂಡಂಡ ಬೋಪಣ್ಣ, ಅಧ್ಯಕ್ಷ ಕೊಡವ ಹಾಕಿ ಅಕಾಡೆಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ವರ್ಷದಲ್ಲಿ 2809 ಜನ ರೈತರ ಸಾವು: ಕೇಂದ್ರ ಸಚಿವ ಸೋಮಣ್ಣ
ಕಾಂಗ್ರೆಸ್‌ನಷ್ಟು ಲಜ್ಜೆಗೇಡಿ ಸರ್ಕಾರ ನಾನು ನೋಡಿಲ್ಲ: ಸಂಸದ ಜಿಗಜಿಣಗಿ