ಶಿರಸಿ: ಹಳ್ಳಿಯಲ್ಲಿದ್ದೂ ಸಾಧನೆ ಮಾಡಲಾಗದು ಎಂಬ ಮನಸ್ಥಿತಿಯವರಿಗೆ ರಾಣಿ ಚೆನ್ನಭೈರಾದೇವಿ ಅವರ ದಿಟ್ಟ ಸಾಧನೆ ನಮಗೆ ಮಾದರಿಯಾಗುತ್ತದೆ. ಅಂಥ ಪಟ್ಟಣವಲ್ಲದ ಊರಿನಲ್ಲೂ ಆ ಕಾಲದಲ್ಲೇ ನೆಲದ ಅಸ್ಮತೆ ಉಳಿಸಿಕೊಟ್ಟವಳು ಚೆನ್ನಭೈರಾದೇವಿ ಎಂದು ಖ್ಯಾತ ಕಾದಂಬರಿಕಾರ, ಚೆನ್ನಭೈರಾದೇವಿ ಕಾದಂಬರಿಯ ಕರ್ತೃ ಗಜಾನನ ಶರ್ಮಾ ತಿಳಿಸಿದರು.
ಸಿಕ್ಕ ಮಾಹಿತಿ ಬಳಸಿಕೊಂಡು ಬರೆದರೂ ಒಂದಿಷ್ಟು ಕಾದಂಬರಿಯಲ್ಲಿ ಉಳಿಯುತ್ತದೆ ಹಾಗೂ ಕಾದಂಬರಿಯಲ್ಲಿ ಒಂದಿಷ್ಟು ಉಳಿಸಿಕೊಳ್ಳಬೇಕಿದೆ ಎಂದ ಅವರು, ಚೆನ್ನಭೈರಾದೇವಿ ಅವಳ ವೈಯಕ್ತಿಕ ಬದುಕು ಅವಳ ಸಾಧನೆ ಮುಂದೆ ಅವೆಲ್ಲ ಏನೂ ಅಲ್ಲ. ನಮ್ಮ ನೆಲ, ನಮ್ಮ ಅಸ್ಮಿತೆ ಉಳಿಸಿಕೊಡುವಲ್ಲಿ ಚೆನ್ನಭೈರಾದೇವಿ ಕೊಡುಗೆ ದೊಡ್ಡದು ಎಂದರು.
ಚೆನ್ನಭೈರಾದೇವಿ ೧೬ನೇ ಶತಮಾನದ ಹಾಡುವಳ್ಳಿ, ಗೇರುಸೊಪ್ಪೆ ಕೇಂದ್ರವಾಗಿಟ್ಟುಕೊಂಡು ಆಳಿದವಳು. ಕರಿಮೆಣಸಿನ ಮೇಲೆ ಹಿಡಿತ ಸಾಧಿಸಿದ ಮಹಿಳೆ. ಬಂಗಾರದ ಮೂಲಕ ವ್ಯವಹಾರ ಮಾಡುತ್ತಿದ್ದ ಕಾಲದಲ್ಲಿ ಬೆಳ್ಳಿ ಮೂಲಕ ವ್ಯವಹಾರ ಮಾಡಿದ್ದಳು. ವಿಜಯನಗರದ ಸಾಮ್ರಾಜ್ಯಕ್ಕೆ ಅನೇಕ ಸರಕು ಕೊಡುತ್ತಿದ್ದವಳು ಇವಳು. ೫೪ ವರ್ಷ ಆಳಿದಾಕೆ. ೧೮ ವರ್ಷದ ಹಳ್ಳಿ ಹೆಣ್ಣುಮಗಳು ರಾಜ್ಯ ಆಳಲು ಆರಂಭಿಸಿದವಳು. ಯುರೋಪಿನಲ್ಲಿ ರಾಣಿ ಜತೆಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ, ಗೌರವದಿಂದ ಮಾಡುವಂತೆ ಸೂಚಿಸುತ್ತಿದ್ದರು ಎಂದರು.ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಸಮಾಜದ ಕಡೆಯ ವ್ಯಕ್ತಿ, ರಾಷ್ಟ್ರಪತಿಗಳ ಜತೆಗೂ ಕುಳಿತು ಮಾತನಾಡುವ ಅವಕಾಶ ಇರುವುದು ಪತ್ರಕರ್ತರಿಗೆ ಮಾತ್ರ. ಇತಿಹಾಸ, ವರ್ತಮಾನ, ಭವಿಷ್ಯದ ಅರಿವು ಇರಬೇಕು ಎಂದು ನಮ್ಮ ಯಕ್ಷಗಾನ ಕಲ್ಪನೆ ಕಲಿಸಿದೆ. ಪತ್ರಕರ್ತರಾಗಬೇಕಾದವರು ಓದುವ ಕ್ರಿಯೆಗೆ ಒಪ್ಪಿಸಿಕೊಳ್ಳಬೇಕು ಎಂದರು.
ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್.ಕೆ. ಭಾಗ್ವತ್ ಮಾತನಾಡಿ, ನಮಗೆ ನಮ್ಮ ನೆಲದ ಸಾಹಸಗಾಥೆ ಚೆನ್ನಭೈರಾದೇವಿ ಕಾದಂಬರಿ ನೀಡಿದೆ ಎಂದರು.
ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಇತರರು ಇದ್ದರು. ಕಾರ್ಯಕ್ರಮಕ್ಕೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಇತಿಹಾಸ ವಿಭಾಗ ಸಹಕಾರ ನೀಡಿತ್ತು.