ಗದಗ: ದೇಶದ ಕಾನೂನು ಬಗ್ಗೆ ಅರಿಯಬೇಕಾದರೆ ಮೊದಲು ಆದೇಶದ ಮಹಿಳೆಯರು ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ನೋಡಬೇಕು. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ಚೆನ್ನಮ್ಮ ಪಡೆ ಇದೆ. ಈ ಪಡೆಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ ತಿಳಿಸಿದರು.
ನಗರದ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮಹಿಳಾ ಸಬಲೀಕರಣ, ಮಾದಕವಸ್ತು ಕಳ್ಳಸಾಗಣೆ ತಡೆಗಟ್ಟುವುದು ಮತ್ತು ಪೋಕ್ಸೋ ಅಡಿಯಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುವ ಕುರಿತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ವಿವಿಧ ತರಹದ ಅಪರಾಧಗಳು ನಡೆಯುತ್ತಿವೆ. ಮಹಿಳೆಯರ, ಬಾಲಕಿಯರ ಅತ್ಯಾಚಾರ, ಸೈಬರ್ ಕ್ರೈಂ ಜಾಲಕ್ಕೆ ಸಿಲುಕಿ ನೋವು ಅನುಭವಿಸುತ್ತಿದ್ದಾರೆ. ಮೊಬೈಲ್‌ಗಳನ್ನು ಬಳಸುವಾಗ ಜಾಗೃತರಾಗಿರಬೇಕು. ವಿದ್ಯಾರ್ಥಿನಿಯರು ವಿಡಿಯೋ ಕರೆಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಒಂದು ವೇಳೆ ಸೈಬರ್ ಜಾಲದಲ್ಲಿ ಸಿಲುಕಿದರೇ ತತಕ್ಷಣ 112ಕ್ಕೆ ಕರೆ ಮಾಡಿ ದೂರು ನೀಡಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು.ಮಹಿಳೆ ಎಂದಿಗೂ ಅಬಲೆಯಲ್ಲ ಸಬಲೆಯಾಗಿದ್ದಾಳೆ. ಮಹಿಳೆಯರ ಸುರಕ್ಷತೆಗಾಗಿ 1091 ದೂರವಾಣಿ ಸಂಖ್ಯೆ ಇದ್ದು, ಯಾವುದೇ ಸಮಯದಲ್ಲಿ ಕರೆ ಮಾಡಿ ದೂರನ್ನು ನೀಡಬಹುದು. ಸಂತ್ರಸ್ತ ಮಹಿಳೆಯರು ಹೆದರದೆ ಧೈರ್ಯವಾಗಿ ದೂರು ನೀಡಿದರೆ ಶ್ರೀಘ್ರದಲ್ಲೇ ಆರೋಪಿಯನ್ನು ಸೆರೆ ಹಿಡಿಯಲು ಸಹಾಯವಾಗುತ್ತದೆ ಎಂದರು. ಮಕ್ಕಳಿಗಾಗಿ ಎಂದು 1098 ಸಹಾಯವಾಣಿ ಇದ್ದು, ಕರೆ ಮಾಡಿ ದೂರು ನೀಡಬಹುದು. ಸಂತ್ರಸ್ತ ಮಕ್ಕಳಿಗೆ ನ್ಯಾಯ ದೊರಕಿಸಲು 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದ್ದು, ಇದು ತುಂಬಾ ಕಠಿಣವಾದ ಕಾಯ್ದೆಯಾಗಿದೆ. ಪೋಕ್ಸೋ ಪ್ರಕರಣದ ಅಡಿಯಲ್ಲಿ ದಾಖಲಾದ ಪ್ರಕರಣವು ಗೌಪ್ಯವಾಗಿರುತ್ತದೆ ಮತ್ತು ತಂತ್ರಸ್ತರ ಮಾಹಿತಿ ಬಹಿರಂಗವಾಗುವುದಿಲ್ಲ ಎಂದರು.ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಹೆಚ್ಚುತ್ತಿದೆ. ವಿದ್ಯಾವಂತರೇ ಹೆಚ್ಚು ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ನಿಮ್ಮ ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬ್ಯಾಂಕಿನ ಅಧಿಕಾರಿಗಳು ಫೋನ್ ಮತ್ತು ಮೇಸೆಜ್ ಮೂಲಕ ನಿಮ್ಮ ಖಾಸಗಿ ಮಾಹಿತಿಯನ್ನು ಕೇಳುವುದಿಲ್ಲ. ಆನ್‌ಲೈನ್ ಹಣದ ವಹಿವಾಟು ಮಾಡುವಾಗ ಜಾಗೃತರಾಗಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಪಿ.ಜಿ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸೌಂದರ್ಯ ಕೊಪ್ಪಳ ಪ್ರಾರ್ಥಿಸಿದರು. ಸಾನಿಯಾ ದೊಡ್ಡಮನಿ ನಿರೂಪಿಸಿದರು. ಪ್ರಾ. ಪ್ರೊ. ಎಸ್.ಬಿ. ಹಾವೇರಿ ಸ್ವಾಗತಿಸಿದರು. ಡಾ. ಲಕ್ಷ್ಮಿ ಎಸ್. ಕಿಲ್ಲೇದಾರ ವಂದಿಸಿದರು.