ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟನೆ
ಚೆಸ್ ಕ್ರೀಡೆ ಎಂಬುದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಅನಕೂಲವಾಗಲಿದ್ದು, ಮುಂದಿನ ಭವಿಷ್ಯಕ್ಕೆ ಉತ್ತಮವಾದ ಭದ್ರ ಬುನಾದಿ ಆಗಲಿದೆ ಎಂದು ಎ.ವಿ.ಕೆ. ಪಿಯು ಕಾಲೇಜು ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.
ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಎ.ವಿ.ಕೆ.ಕಾಲೇಜು ಸಭಾಂಗಣದಲ್ಲಿ ಕದಂಬ ಚೆಸ್ ಅಕಾಡೆಮಿ ಹಾಗೂ ಶಿಕ್ಷಣ ಸಂಸ್ಥೆಯ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯನ್ನು ಚೆಸ್ ಆಟ ಆಡುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಚೆಸ್ ಎಂಬುದು ಮಕ್ಕಳಲ್ಲಿ ಬಲವಾದ ನಂಬಿಕೆ ಮೂಡಿಸುತ್ತದೆ. ರಾಮಾಯಣ ಮತ್ತು ಮಹಾಭಾರತದ ಮೂಲಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅದೇ ರೀತಿ ಚೆಸ್ ಎಂಬುದು ಕೂಡ ಜೀವನದ ಭರವಸೆಯನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಮಕ್ಕಳಲ್ಲಿ ವೈಜ್ಞಾನಿಕ ಆಲೋಚನೆಯನ್ನು ಬೆಳೆಸಲು ಅನುಕೂಲವಾಗಲಿದೆ’ ಎಂದು ಹೇಳಿದರು.‘ಚೆಸ್ ಎಂಬುದು ಮಕ್ಕಳಲ್ಲಿ ಒಳ್ಳೆಯ ಆಲೋಚನೆಗಳನ್ನು ಉದ್ಭವಿಸುತ್ತದೆ. ಈ ಸ್ಪರ್ದಾತ್ಮಕ ಯುಗದಲ್ಲಿ ಚೆಸ್ ಆಟ ಆಡುವುದರಿಂದ ಅನುಕೂಲವಾಗಲಿದೆ. ಪರೀಕ್ಷೆ ಬರೆಯುವ ವೇಗಕ್ಕೆ ಇದು ನಿಮಗೆ ಸಹಕಾರಿ ಆಗಲಿದೆ. ಈ ಆಟವು ಮುಂದಿನ ಜೀವನದ ಸ್ಪೂತಿ ಆಗಬೇಕು. ಕ್ರಿಕೆಟ್ ಆಟಕ್ಕೆ ಪ್ರಾಮುಖ್ಯತೆ ಕೊಟ್ಟಂತೆ ಚೆಸ್ ಆಟಕ್ಕೂ ಪೋಷಕರು ಪ್ರೋತ್ಸಾಹಿಸಬೇಕು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದಾಗ ಬೀಗದೇ, ಸೋತಾಗ ಕುಗ್ಗದೆ ಮುಂದೆ ಸಾಗಬೇಕು’ ಎಂದು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಉದಾಹರಣೆ ನೀಡಿದರು.
ಜನಮಿತ್ರ ಕನ್ನಡ ದಿನಪತ್ರಿಕೆ ಸಂಪಾದಕ ನವೀನ್ ಕುಮಾರ್ ಮಾತನಾಡಿ, ಯಾವುದೇ ಕ್ರೀಡೆ ಆಗಿರಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಜತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ ಎಂದು ಹೇಳಿದರು.