ಕುಂದಾಪುರ: ಹೇಳಿಕೆಗಳನ್ನು ತಿರುಚಿ ಬರೆದರೆ ಅದನ್ನು ಸರಿಪಡಿಸುವುದು ಅಷ್ಟು ಸುಲಭವಲ್ಲ. ಮಾಧ್ಯಮಗಳ ಅಭಿಪ್ರಾಯದ ಮೇಲೆ ಜನಾಭಿಪ್ರಾಯ ಮೂಡಲಿದ್ದು, ಇಲ್ಲಿ ಪ್ರಕಟವಾಗುವ ಸುದ್ದಿಗಳು ಸಾರ್ವಕಾಲಿಕ ದಾಖಲೆಗಳಾಗಿ ಉಳಿಯುತ್ತವೆ. ವಾಸ್ತವಾಂಶ ಬರೆಯುವ ಮೂಲಕ ಪತ್ರಿಕೋದ್ಯಮ ದಾರಿ ತಪ್ಪದಂತೆ ಎಚ್ಚರ ವಹಿಸಿ ಎಂದು ಮಾಜಿ ಸಚಿವ ಕೊರ್ಗಿ ಜಯಪ್ರಕಾಶ ಹೆಗ್ಡೆ ಸಲಹೆ ನೀಡಿದ್ದಾರೆ.ಸಾಸ್ತಾನ ಪಾಂಡೇಶ್ವರದ ಕೋಸ್ಟಲ್ ಪ್ಯಾರಡೈಸ್ ಅನುಗ್ರಹ ಸಭಾಂಗಣದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೈಕಂಪಾಡಿ ಅವರು, ವಡ್ಡರ್ಸೆಯವರೊಂದಿಗಿನ ಒಡನಾಟ ಒಂದು ವಿಶ್ವವಿದ್ಯಾಲಯದ ಪಾಠವಿದ್ದಂತೆ. ಬಡವರು, ಹಿಂದುಳಿದವರ ಬಗ್ಗೆ ಅವರಿಗಿದ್ದ ಪ್ರೀತಿ ಹಾಗೂ ಸಮಾಜ ಪರಿವರ್ತನೆಯಲ್ಲಿ ಅವರಿಗಿದ್ದ ಕಾಳಜಿ ಅಪಾರವಾದದ್ದು ಎಂದರು.ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿದರು. ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಚಿತ್ತೂರು ಪ್ರಭಾಕರ ಆಚಾರ್ಯ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಪ್ರವೀಣ್ ಮುದ್ದೂರು, ಮೋಹನ್ ಉಡುಪ ಅವರನ್ನು ಗೌರವಿಸಲಾಯಿತು.ಬ್ರಹ್ಮಾವರ ಬಂಟರ ಸಂಘದ ಸಂಚಾಲಕ ಬಿ. ಭುಜಂಗ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಆಸ್ಟ್ರೋ ಮೋಹನ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಇದ್ದರು.ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕ ಕಾರ್ಯಕ್ರಮ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ ಕಿರಣ್ ತುಂಗ ವಂದಿಸಿದರು.