ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಭೇಟಿ, ಎಸ್‌ಐಆರ್ ಪ್ರಗತಿಗೆ ಮೆಚ್ಚುಗೆ

KannadaprabhaNewsNetwork |  
Published : Jul 21, 2026, 02:15 AM IST
ಶಿಗ್ಗಾಂವಿಯ ಪ್ರವಾಸಿ ಮಂದಿರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ-2026 ಕಾರ್ಯಚಟುವಟಿಕೆಗಳ ಕುರಿತು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೋಮವಾರ ಶಿಗ್ಗಾಂವಿಗೆ ಭೇಟಿ ನೀಡಿ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ-2026 ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಹಾವೇರಿ: ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸೋಮವಾರ ಶಿಗ್ಗಾಂವಿಗೆ ಭೇಟಿ ನೀಡಿ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ-2026 ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹಾವೇರಿ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯುತ್ತಮ ಪ್ರಗತಿ ಸಾಧಿಸಿದ್ದು, ಈ ಯಶಸ್ಸಿಗಾಗಿ ಶ್ರಮಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಮುಖ್ಯ ಚುನಾವಣಾಧಿಕಾರಿಗಳು ಶ್ಲಾಘಿಸಿದರು.

ಪಾರದರ್ಶಕತೆಗೆ ಸೂಚನೆ..

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಮತ್ತು ಪ್ರಕ್ರಿಯೆಗಳ ಪ್ರಗತಿಯನ್ನು ಸಾರ್ವಜನಿಕರಿಗೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನಿರಂತರವಾಗಿ ತಲುಪಿಸಬೇಕು. ಈ ಮೂಲಕ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಲಹೆಗಳಿಗೆ ಸ್ಪಂದನೆ..

ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ಸ್ವೀಕರಿಸಲಾಗುವ ಕುಂದುಕೊರತೆಗಳು, ಸಲಹೆ ಮತ್ತು ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಆಯೋಗದ ನಿಯಮಾವಳಿಗಳಂತೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮತದಾರರಿಗೆ ವಿನಂತಿ: ಅರ್ಹ ಮತದಾರರು, ವಿಶೇಷವಾಗಿ 18 ವರ್ಷ ತುಂಬಿದ ಹೊಸ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಹೆಸರು ತೆಗೆದುಹಾಕಲು ಇರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಹಾಗೂ ಚುನಾವಣಾ ವಿಭಾಗ ಮನವಿ ಮಾಡಿದೆ.ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತಿ ಸಿಇಒ ದಲ್ಜಿತ್‌ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸೇರಿದಂತೆ ಜಿಲ್ಲೆಯ ಎಲ್ಲಾ ಮತದಾರರ ನೋಂದಣಾಧಿಕಾರಿಗಳು ಭಾಗವಹಿಸಿದ್ದರು.

ಎಸ್‌ಐಆರ್: 10.86 ಲಕ್ಷ ಗಣಕೀಕರಣ: ಹಾವೇರಿ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜು.20ರ ಸಂಜೆ 4 ಗಂಟೆವರೆಗೆ 10,86,980 ಗಣಕೀಕರಣ ಮಾಡಲಾಗಿದೆ. ನೂರಕ್ಕೆ ನೂರರಷ್ಟು ಎನುಮರೇಷನ್ ನಮೂನೆಗಳನ್ನು ವಿತರಣೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಜೂ.16ರವರೆಗೆ ಹೊಂದಿರುವ ಒಟ್ಟು ಮತದಾರರು 13,35,342 ಇದ್ದು, ಬಿ.ಎಲ್.ಒ.ಗಳ ಮನೆ ಮನೆ ಭೇಟಿ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಆಗಸ್ಟ್ 8ರ ವರೆಗೆ ಜರುಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಆರೋಪದ ಹಿನ್ನೆಲೆಯಲ್ಲಿ ಭೇಟಿ ಸಾಧ್ಯತೆ: ಹಾವೇರಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸವಣೂರು ಹಾಗೂ ಬಂಕಾಪುರ ಪಟ್ಟಣಗಳಲ್ಲಿ ಮತಗಟ್ಟೆ ಅಧಿಕಾರಿಗಳು ನಿಯಮಾವಳಿ ಗಾಳಿಗೆ ತೂರಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮನೆಮನೆ ಭೇಟಿ ನೀಡಬೇಕಾದ ಬಿಎಲ್‌ಒಗಳು, ಮಸೀದಿ ಹಾಗೂ ಮುಸ್ಲಿಂ ಮುಖಂಡರ ಮನೆಗಳಲ್ಲಿ ಕುಳಿತು ಪ್ರಕ್ರಿಯೆ ನಡೆಸಿದ್ದ ಪೋಟೊ, ವಿಡಿಯೋಗಳು ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಚುನಾವಣಾಧಿಗಳು ಶಿಗ್ಗಾವಿಗೆ ಭೇಟಿ ನೀಡಿ ಪರಿಶೀಲಿಸಿದರು ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾರದೊಳಗೆ ಕೂಲಿಕಾರರಿಗೆ ತುರ್ತು ಕೆಲಸ ನೀಡಿ: ಡಾ. ಚಂದ್ರು ಕೆ. ಲಮಾಣಿ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹ