ಮಂಜುನಾಥ ಕೆ.ಎಂ.
ಕಳೆದ ಬಾರಿಯಂತೆಯೇ ಈ ಬಾರಿಯೂ ಕೆಲವು ಘೋಷಿತ ಯೋಜನೆಗಳನ್ನು ಬಜೆಟ್‌ನಲ್ಲಿ ಮಂಡಿಸಿದ್ದರೆ, ಈ ಭಾಗದ ಅಭಿವೃದ್ಧಿ ನೆಲೆಯಲ್ಲಿ ಆಗಲೇಬೇಕಾದ ಯೋಜನೆಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ವಿಪರ್ಯಾಸ ಎಂದರೆ ನೆರೆಯ ಕೊಪ್ಪಳ, ರಾಯಚೂರು ಜಿಲ್ಲೆಗೆ ಸಿಕ್ಕ ಆದ್ಯತೆ ಬಳ್ಳಾರಿ ಜಿಲ್ಲೆಗೆ ಸಿಕ್ಕಿಲ್ಲ.
ಪ್ರಮುಖವಾಗಿ ಜೀನ್ಸ್ ಅಪರೆಲ್ ಪಾರ್ಕ್, ಸರ್ಕಾರಿ ಎಂಜಿನಿಯರಿಂಗ್, ತೋಟಗಾರಿಕೆ ಕಾಲೇಜು ಸ್ಥಾಪನೆ, ವಿಮಾನ ನಿಲ್ದಾಣಕ್ಕೆ ಅನುದಾನ, ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಸೇರಿದಂತೆ ನಿರೀಕ್ಷಿತ ಒಂದೇ ಒಂದು ಯೋಜನೆಯ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣು ಹಾಯಿಸಿಲ್ಲ.ಕಳೆದ ಬಾರಿಯ ಬಜೆಟ್‌ನಲ್ಲೂ ಬಳ್ಳಾರಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು. ಆದರೆ, ಈ ಬಾರಿ ಕೆಲವು ಪ್ರಮುಖ ಯೋಜನೆಗಳಿಗೆ ಸಿದ್ದರಾಮಯ್ಯ ಅಸ್ತು ಎನ್ನಲಿದ್ದಾರೆ ಎಂಬ ನಿರೀಕ್ಷೆಗಳು ಬಲವಾಗಿದ್ದವು. ಆದರೆ, ಈ ಬಾರಿಯೂ ಸಹ ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ.
ಕೈ ತೊಳೆದುಕೊಂಡಿದ್ದ ಸರ್ಕಾರ, ಈ ಬಾರಿ ಅನುದಾನ ನಿಗದಿಗೊಳಿಸಲಿದೆ. ಇದರಿಂದ ಬಳ್ಳಾರಿಯ ಜೀನ್ಸ್ ಉದ್ಯಮ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಹಾಕಲಿದೆ ಎಂದು ಇಲ್ಲಿನ ಉದ್ಯಮಿಗಳು ಸಂತಸದಲ್ಲಿದ್ದರು. ಆದರೆ, ಸರ್ಕಾರ ಈ ಬಗ್ಗೆ ಗಮನ ನೀಡದಿರುವುದು ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
ಎಂಜಿನಿಯರಿಂಗ್ ಕಾಲೇಜು: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಳ್ಳಾರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ಆದರೆ, ಸರ್ಕಾರ ಈ ವರೆಗೆ ಯಾವುದೇ ಕ್ರಮದ ಹೆಜ್ಜೆ ಇಟ್ಟಿಲ್ಲ. ಈ ಬಜೆಟ್‌ನಲ್ಲಿ ಕಾಲೇಜು ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಿದೆ ಎಂಬ ನಿರೀಕ್ಷೆ ಹುಸಿಗೊಂಡಿದೆ. ತೋಟಗಾರಿಕೆ ಕಾಲೇಜು ಸ್ಥಾಪನೆ ವಿಚಾರದಲ್ಲೂ ಬಜೆಟ್ ನಿರಾಸೆಗೊಳಿಸಿದೆ.
ಸಿರುಗುಪ್ಪ ಹಾಗೂ ಸಂಡೂರಿನ 100 ಹಾಸಿಗೆಗಳ ತಾಲೂಕು ಆಸ್ಪತ್ರೆಗಳನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂಬುದಷ್ಟೇ ಈ ಬಜೆಟ್‌ನಿಂದ ಜಿಲ್ಲೆಗಾದ ಅನುಕೂಲ. ಬಜೆಟ್‌ನಲ್ಲಿ ಬಳ್ಳಾರಿಗೆ ಈ ಬಾರಿ ಸಿಕ್ಕಿದ್ದೇನು?:
* ಬಳ್ಳಾರಿಯಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆಗೆ ಕ್ರಮ
* ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಕುರುಗೋಡು, ಕಂಪ್ಲಿಯ 100 ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆಯನ್ನಾಗಿ ಪರಿವರ್ತನೆ.
ಬಳ್ಳಾರಿ ಜನರ ಬಜೆಟ್‌ನ ನಿರೀಕ್ಷೆಗಳೇನಿದ್ದವು?:
* ಜೀನ್ಸ್ ಅಪರೆಲ್ ಪಾರ್ಕ್‌ಗೆ ಅನುದಾನ ನೀಡಿ ಚಾಲನೆ ನೀಡಬೇಕು.* ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು.
* ವಿಮಾನ ನಿಲ್ದಾಣಕ್ಕೆ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು.* ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು.
* ಕಂಪ್ಲಿ ತಾಲೂಕು ಮತ್ತು ಕೊಪ್ಪಳ ಜಿಲ್ಲೆ ಗಂಗಾವತಿ ನಡುವಿನ ಸೇತುವೆ ನಿರ್ಮಾಣ ಮಾಡಬೇಕು.* ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಬೇಕು.
* ಬಳ್ಳಾರಿಯ ಐತಿಹಾಸಿಕ ಕೋಟೆಗೆ ರೋಪ್‌ವೇ ನಿರ್ಮಿಸಬೇಕು.