ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿ ವಿಧಾನಸೌಧದಲ್ಲಿ ಮತ್ತು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಭಾವಚಿತ್ರ ತೆಗೆದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಡೆ ಖಂಡಿಸಿ ಮತ್ತು ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿಯವರು ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪುತ್ಥಳಿ ಬಳಿ ಮಂಗಳವಾರ ಸಂಜೆ ಪ್ರತಿಭಟಿಸಿದರು.ಈ ವೇಳೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್. ಭಾಸ್ಕರ್ ಮಾತನಾಡಿ, ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾದ ಎರಡೇ ದಿನಕ್ಕೆ ದೆಹಲಿ ವಿಧಾನಸೌಧ ಸಭಾಂಗಣ ಮತ್ತು ತಮ್ಮ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿ ಮತ್ತು ಆರ್.ಎಸ್.ಎಸ್ ಮನಸ್ಥಿತಿ ಏನು ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ ಎಂದು ಕಿಡಿಕಾರಿದರು.
ಡಾ. ಅಂಬೇಡ್ಕರ್ ಭಾವಚಿತ್ರ ತೆಗೆದಿರುವ ಬಗ್ಗೆ ಬಿಜೆಪಿಯಲ್ಲಿರುವ ದಲಿತ ಮುಖಂಡರು ಮಾತನಾಡಬೇಕಿದೆ. ಬಿಜೆಪಿ ಗುಲಾಮಗಿರಿ ಮಾಡುತ್ತಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಈಗ ಮಾತನಾಡಲಿ ಎಂದು ಅವರು ಸವಾಲು ಹಾಕಿದರು.ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ದೆಹಲಿ ಸಿಎಂ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರ ತೆಗೆಯುವ ಮೂಲಕ ಬಿಜೆಪಿ ತನ್ನ ಮನುಸ್ಮೃತಿ ಸಂಸ್ಕೃತಿಯನ್ನು ಎತ್ತಿ ತೋರಿಸಿದೆ. ದಲಿತರನ್ನು ಒಡೆಯಲು ದಲಿತರನ್ನೇ ಎತ್ತಿಕಟ್ಟಿ ಅವರ ಮೂಲಕವೇ ಹೇಳಿಕೆಗಳನ್ನು ಕೊಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯವರಿಗೆ ದಲಿತರನ್ನು ಹೇಗೆ ಒಡೆಯಬೇಕು ಎಂಬುದ ಗೊತ್ತು. ಅದಕ್ಕಾಗಿ ಹಲವಾರು ತಂತ್ರಗಳನ್ನು ಮಾಡುತ್ತಿದ್ದಾರೆ. ಈಗ ಮುಸ್ಲಿಮರನ್ನು ಹೊಡೆಯಬೇಕು ಎಂದು ನಿರಂತರವಾಗಿ ಪ್ರಯತ್ನ ಪಡುತ್ತಿದ್ದಾರೆ. ಅದಕ್ಕಾಗಿಯೇ ಉದಯಗಿರಿ ಗಲಭೆ ನಿಂತಿದ್ದರೂ ಅದಕ್ಕೆ ಮತ್ತೆ ಮತ್ತೆ ಚಾಲನೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ವಕೀಲರಾದ ಪುಟ್ಟಸಿದ್ದೇಗೌಡ, ಚಂದ್ರಶೇಖರ್, ಕಾಂತರಾಜು, ಪರಂಜ್ಯೋತಿ, ತನುಜಾ ಮಹೇಶ, ಕೋಮಲಾ, ಮುಖಂಡರಾದ ಸುಬ್ಬಯ್ಯ, ಈಶ್ವರ್ ಚಕ್ಕಡಿ, ರಾಜೇಶ್, ಚಂದ್ರಶೇಖರ್, ದ್ಯಾವಪ್ಪನಾಯಕ, ಚನ್ನಕೇಶವಮೂರ್ತಿ, ಮುರಳಿ, ಮುದ್ದುಮಾದಯ್ಯ, ಸೋಮರಾಜ, ಜಯಸುಂದರ್, ಲೋಕೇಶ್ ಕುಮಾರ್ ಮೊದಲಾದವರು ಇದ್ದರು.