ಮಂಗಳೂರಲ್ಲಿ ಕರ್ನಾಟಕ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork | Published : Jan 18, 2025 12:46 AM

ಸಾರಾಂಶ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ, ದ.ಕ., ಉಡುಪಿ ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ವರ್ಣರಂಜಿತವಾಗಿ ಸಜ್ಜುಗೊಂಡ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಶುಕ್ರವಾರ ‘ಕರ್ನಾಟಕ ಕ್ರೀಡಾಕೂಟ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಧೂರಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಮತ್ತು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ‘ಕರ್ನಾಟಕ ಕ್ರೀಡಾಕೂಟ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಕ್ರೀಡಾಪಟುಗಳಿಗೆ ಬಂಪರ್‌ ಕೊಡುಗೆಗಳನ್ನು ಘೋಷಿಸಿದ್ದಾರೆ. ಉದ್ಯೋಗದಲ್ಲಿ ಮೀಸಲಾತಿ, ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಭಾರೀ ನಗದು ಬಹುಮಾನ, ಗ್ರೇಸ್‌ ಮಾರ್ಕ್‌ ಸೇರಿದಂತೆ ಹಲವು ಘೋಷಣೆಗಳನ್ನು ಪ್ರಕಟಿಸಿದ್ದಾರೆ.

‘‘ಹಣ- ಸವಲತ್ತು ಎಷ್ಟು ಬೇಕಾದರೂ ಕೇಳಿ ಕೊಡುತ್ತೇನೆ, ಅದಕ್ಕೆ ಪ್ರತಿಯಾಗಿ ರಾಜ್ಯದ ಕ್ರೀಡಾಪಟುಗಳು ರಿಸಲ್ಟ್‌ ಕೊಡುವ ಜವಾಬ್ದಾರಿ ವಹಿಸಿ. ದೇಶಕ್ಕಾಗಿ ಒಲಿಪಿಕ್ಸ್‌ನಲ್ಲಿ ಮೆಡಲ್‌ ತನ್ನಿ. ಈ ಕೊಡುಗೆಗಳು ಎಲ್ಲ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿ” ಎಂದು ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕ್ರೀಡಾಪಟುಗಳನ್ನು ಸಿಎಂ ಹುರಿದುಂಬಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್‌ ಸಂಸ್ಥೆ, ದ.ಕ., ಉಡುಪಿ ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ವರ್ಣರಂಜಿತವಾಗಿ ಸಜ್ಜುಗೊಂಡ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಶುಕ್ರವಾರ ‘ಕರ್ನಾಟಕ ಕ್ರೀಡಾಕೂಟ’ಕ್ಕೆ ಅದ್ಧೂರಿ ಚಾಲನೆ ನೀಡಿ ಅವರು ಮಾತನಾಡಿದರು.

ಏನೇನು ಕೊಡುಗೆಗಳು?:

ಇನ್ಮುಂದೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಕ್ರೀಡಾಪಟುಗಳಿಗೆ ಒಟ್ಟಾರೆಯಾಗಿ ಶೇ.2ರಷ್ಟು ಉದ್ಯೋಗ ಮೀಸಲಾತಿ, ಅದರಲ್ಲೂ ಪೊಲೀಸ್, ಅರಣ್ಯ ಇಲಾಖೆ ಇತ್ಯಾದಿ ಯೂನಿಫಾರಂನ ಸರ್ಕಾರಿ ಹುದ್ದೆಗಳಿಗೆ ಶೇ.3ರಷ್ಟು ಮೀಸಲಾತಿ ನೀಡಲಾಗುವುದು. ಒಲಿಂಪಿಕ್ಸ್‌ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರು. ಕೊಡ್ತೀವಿ. ಅದೇ ರೀತಿ, ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಪದಕ ಪಡೆದವರಿಗೆ 50 ಲಕ್ಷ ರು. ನೀಡಲಾಗುವುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಗವಹಿಸುವ ಕ್ರೀಡಾಪಟುಗಳಿಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ‘ಗ್ರೇಸ್‌ ಮಾರ್ಕ್‌’ ಮತ್ತು ಹಾಜರಾತಿ ನೀಡಲಿದ್ದೇವೆ. ಕರ್ನಾಟಕ ಕ್ರೀಡಾಕೂಟ ನಡೆಯುತ್ತಿರುವ ಮಂಗಳೂರು ಮತ್ತು ಉಡುಪಿಯ ಕ್ರೀಡಾಂಗಣ ಅಭಿವೃದ್ಧಿಗೆ ತಲಾ 3 ಕೋಟಿ ರು. ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

ಪ್ರತಿವರ್ಷ ಕ್ರೀಡಾಕೂಟ:

ಕ್ರೀಡೆಯಲ್ಲಿ ಸೋಲು- ಗೆಲುವು ಸ್ವಾಭಾವಿಕ. ಆದರೆ ಭಾಗವಹಿಸುವಿಕೆ ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಎಲ್ಲಕ್ಕಿಂತಲೂ ಮುಖ್ಯ. ಕ್ರೀಡಾಪಟುಗಳಿಗೆ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷವೂ ಇಂಥ ಕ್ರೀಡಾಕೂಟಗಳನ್ನು ಏರ್ಪಡಿಸಿ ಅವಕಾಶ ಒದಗಿಸುವ ಕಾರ್ಯವನ್ನು ಸರ್ಕಾರ ಮಾಡಲಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಮಿನಿ ಒಲಿಂಪಿಕ್ಸ್‌ನಲ್ಲಿ 5 ಸಾವಿರದಷ್ಟು ಕ್ರೀಡಾಪಟುಗಳು ಭಾಗವಹಿಸಿದ್ದರು. ಈಗ ಕರ್ನಾಟಕ ಕ್ರೀಡಾಕೂಟದಲ್ಲಿ 4,500ರಷ್ಟು ಮಂದಿ ಪಾಲ್ಗೊಂಡಿದ್ದಾರೆ. ಕ್ರೀಡಾಪಟುಗಳ ಸಂಖ್ಯೆ ಇನ್ನೂ ಏರಿಕೆಯಾಗಬೇಕು. ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು ಎಂದು ಆಶಿಸಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಕ್ರೀಡಾಕೂಟಕ್ಕೆ 5 ಕೋಟಿ ರು. ಅನುದಾನ ನೀಡಿದ್ದೇನೆ. ಕ್ರೀಡೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಪ್ರೋತ್ಸಾಹ, ಸಹಕಾರ ನೀಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಕ್ರೀಡಾಪಟುಗಳು ಇತರರಿಗಿಂತ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಹಾಗಾಗಿ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಂಡು ಆರೋಗ್ಯ ಕಾಪಾಡಿಕೊಳ್ಳುವಂತಾಗಬೇಕು. ಇದನ್ನು ಸರ್ವ ರೀತಿಯಲ್ಲೂ ಉತ್ತೇಜಿಸಲು ನಮ್ಮ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.

ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಕ್ರೀಡೆಗಳಿಗೆ ಸರ್ಕಾರದ ನೆರವು ಸದಾ ಕಾಲವೂ ಸಿಗಲಿದೆ. ಸ್ವತಃ ಸಿಎಂ ಅವರೇ ಬಂದು ಕರ್ನಾಟಕ ಕ್ರೀಡಾಕೂಟ ಉದ್ಘಾಟನೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಫರೀದ್‌ ಅವರು ಕ್ರೀಡಾ ಧ್ವಜಾರೋಹಣ ಮಾಡಿದರು. ಇದೇ ವೇಳೆ ಕ್ರೀಡಾ ಜ್ಯೋತಿಯನ್ನು ಪ್ರಜ್ವಲಿಸಿ ವಿಧ್ಯುಕ್ತ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ. ಗೋವಿಂದರಾಜ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮಂಗಳೂರು ಮೇಯರ್ ಮನೋಜ್ ಕುಮಾರ್‌, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಣದೀಪ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್‌ ಆರ್‌. ಮತ್ತಿತರರು ಇದ್ದರು.

...................

ಒಲಿಂಪಿಕ್ಸ್‌ನಂತೆ ವರ್ಣರಂಜಿತ ಚಾಲನೆ

ಕರ್ನಾಟಕ ಕ್ರೀಡಾಕೂಟಕ್ಕೆ ಒಲಿಂಪಿಕ್ಸ್‌ ಮಾದರಿಯಲ್ಲೇ ಅದ್ಧೂರಿಯಾಗಿ ವರ್ಣರಂಚಿತ ಚಾಲನೆ ದೊರೆತು ಕ್ರೀಡಾಪ್ರೇಮಿಗಳನ್ನು ಪುಳಕಗೊಳಿಸಿತು. ಸಿಎಂ ಚಾಲನೆ ನೀಡಿದ ಬಳಿಕ ಗಣ್ಯರ ಸಮ್ಮುಖದಲ್ಲಿ ವಿವಿಧ ಕ್ರೀಡಾ ತಂಡಗಳಿಂದ ಕ್ರೀಡಾ ಪಥ ಸಂಚಲನ, ಬಳಿಕ ಮಲ್ಲಕಂಬ ಸೇರಿದಂತೆ ಕಸರತ್ತು ಪ್ರದರ್ಶನ, ನಾಡಿನೆಲ್ಲೆಡೆಗಳ ಕಲಾತಂಡಗಳಿಂದ ಜಾನಪದ ಕಲಾ ರಸದೌತಣ ನೋಡುಗರನ್ನು ರಂಜಿಸಿತು. ಬಳಿಕ ಇಡೀ ಕ್ರೀಡಾಂಗಣದ ಬೆಳಕು ಆರಿಸಿ ಅದ್ಧೂರಿಯಾಗಿ ನಡೆದ ಧ್ವನಿ ಮತ್ತು ಬೆಳಕಿನ ಮೋಡಿ ಪ್ರದರ್ಶನ ಬೇರೆಯೇ ಲೋಕಕ್ಕೆ ಕರೆದೊಯ್ದಿತು. ಇದರ ಜತೆ ಜತೆಗೇ ಬಾನಗಲ ಮಿಂಚಿದ ಭಾರೀ ಸಿಡಿಮದ್ದು ಅತ್ಯಾಕರ್ಷಕವಾಗಿತ್ತು.

ಉದ್ಘಾಟನಾ ಸಮಾರಂಭದ ಬಳಿಕ ಕ್ರೀಡಾಪಟುಗಳ ಪ್ರಮಾಣವಚನ, ಸಂಗೀತ ನಿರ್ದೇಶಕ ಗುರುಕಿರಣ್‌ ಅವರ ತಂಡದಿಂದ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು.................

ಸ್ಥಳದಲ್ಲೇ ಮಂಗಳೂರು, ಉಡುಪಿ ಕ್ರೀಡಾಂಗಣ

ಅಭಿವೃದ್ಧಿಗೆ ಕೊಡುಗೆ ಘೋಷಿಸಿದ ಮುಖ್ಯಮಂತ್ರಿ

ಮಂಗಳೂರು ಮತ್ತು ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಕ್ರೀಡಾಕೂಟ ಆಯೋಜನೆಯಾಗುವುದರೊಂದಿಗೆ ಎರಡು ಜಿಲ್ಲೆಗಳ ಕ್ರೀಡಾಂಗಣ ಅಭಿವೃದ್ಧಿಗೆ ತಲಾ 3 ಕೋಟಿ ರು.ಗಳನ್ನು ಸಿಎಂ ಸ್ಥಳದಲ್ಲೇ ಘೋಷಣೆ ಮಾಡಿದ್ದು ವಿಶೇಷವಾಗಿತ್ತು. ಸಿಎಂ ಭಾಷಣಕ್ಕೂ ಮೊದಲು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್‌ ಈ ಕುರಿತು ಮನವಿ ಮಾಡಿದ್ದರು. ಅದನ್ನು ಉಲ್ಲೇಖಿಸಿದ ಸಿಎಂ ಸ್ಥಳದಲ್ಲೇ ಅನುದಾನ ಘೋಷಿಸಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು. ಕರಾವಳಿಯಲ್ಲಿ ಕ್ರೀಡಾಕೂಟ ಆಯೋಜನೆಯಾಗಿದ್ದು ಉಭಯ ಜಿಲ್ಲೆಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

Share this article