ತುಳಿಕ್ಕೊಳಗಾದ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಕಲ್ಪಿಸಿಕೊಡಬೇಕೆಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದ್ದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಕಲ್ಪಿಸಲು ಮೀನಾಮೇಷ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಒಳಮೀಸಲಾತಿ ವಿಭಾಗದ ರಾಜ್ಯಾಧ್ಯಕ್ಷ ವೈ. ರಾಜಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ತುಳಿಕ್ಕೊಳಗಾದ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಕಲ್ಪಿಸಿಕೊಡಬೇಕೆಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದ್ದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಕಲ್ಪಿಸಲು ಮೀನಾಮೇಷ ಮಾಡುತ್ತಿದೆ ಎಂದು ದಲಿತ ಸಂಘರ್ಷ ಸಮಿತಿಯ ಒಳಮೀಸಲಾತಿ ವಿಭಾಗದ ರಾಜ್ಯಾಧ್ಯಕ್ಷ ವೈ. ರಾಜಣ್ಣ ಹೇಳಿದರು.ಸಿರಿಗೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಮಾದಿಗ ಸಮುದಾಯ ಸಮಾಜದ ವತಿಯಿಂದ ಇಂದು ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ತುಳಿತಕ್ಕೆ ಒಳಪಟ್ಟ ಸಮುದಾಯಗಳ ನೆರವಿಗೆ ಬರಬೇಕಾದುದು ಸರ್ಕಾರದ ಕರ್ತವ್ಯ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಮೌನ ತಾಳಿದ ಎಂದರು.ಶತಮಾನಗಳ ಕಾಲದಿಂದ ನೊಂದ ಸಮುದಾಯಕ್ಕೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಆಶಾದಾಯಕವಾಗಿದೆ. ಮಾದಿಗ ಸಮುದಾಯದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಲಕ್ಷೆ ಮಾಡಡುತ್ತಿದ್ದಾರೆ. ಈ ಪ್ರಕರಣವನ್ನು ಓಟಿನ ರಾಜಕಾರಣಕ್ಕೆ ಬಳಸಿಕೊಳ್ಳದೆ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.ಸರ್ಕಾರವು ನಿಧಾನ ಪ್ರವೃತ್ತಿಯನ್ನು ಪ್ರದರ್ಶಿಸಿದರೆ ಈ ಹೋರಾಟ ರಾಜ್ಯದಾದ್ಯಂತ ಹುಟ್ಟಿಕೊಳ್ಳುತ್ತದೆ. ವಿಶ್ವಬಂಧು ಮರುಳಸಿದ್ಧರ ನೆಲೆಯಾದ ಸಿರಿಗೆರೆಯಲ್ಲಿ ಪ್ರತಿಭಟನೆಗೆ ಶಕ್ತಿ ದೊರಕಿದೆ ಎಂದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾದಿಗ ಸಮುದಾಯದ ಮುಖಂಡ ಸೀಗೇಹಳ್ಳಿಯ ರಾಜು ಮಾತನಾಡಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿಯಲ್ಲಿ ಮಾದಿಗ ಸಮುದಾಯ ನಡೆದುಕೊಳ್ಳುತ್ತಿದೆ. ಶಾಂತಿ ಸಹನೆಯನ್ನು ಮೈಗೂಡಿಸಿಕೊಂಡು ಶತಮಾನಗಳಿಂದ ನೊಂದಿದ್ದೇವೆ. ಸರ್ವೋಚ್ಛ ನ್ಯಾಯಾಲಯದ ತೀರ್ಪು ನಮ್ಮ ಸಮುದಾಯಗಳಿಗೆ ಬೆಳಕಾಗಿದೆ ಎಂದರು.ಗ್ರಾಪ೦ ಸದಸ್ಯ ಸಿದ್ದಾಪುರದ ಬಸವರಾಜ್, ಹೊಸರಂಗಾಪುರದ ಅಂಜಿನಪ್ಪ, ನಾಗರಾಜ್, ಸಿರಿಗೆರೆಯ ಜಯಸಿಂಹ, ಹಳೇರಂಗಾಪುರದ ಚಂದ್ರಪ್ಪ, ದುರುಗೇಶ್, ಮಮತಾ ಕೋಟಿ, ವೀರಬಸಪ್ಪ, ಶಿವಣ್ಣ, ಮಲ್ಲಿಕಾರ್ಜುನ್, ಕರಿಯಪ್ಪ, ಮಲ್ಲೇಶ್ ಮುಂತಾದವರು ಭಾಗವಹಿಸಿದ್ದರು.ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಸಾಗಿದ ಸಮುದಾಯದ ಜನರು ಗ್ರಾಪಂ ಕಚೇರಿಯಲ್ಲಿ ಪಿಡಿಓ ಹನ್ಸಿರಾ ಬಾನು ಅವರಿಗೆ ಮನವಿ ಪತ್ರ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.