ಶೀಘ್ರ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಮನೆ ಹಂಚಿಕೆ

KannadaprabhaNewsNetwork | Published : Feb 20, 2025 12:46 AM

ಸಾರಾಂಶ

ಬೆಂಗಳೂರಿನ ಮೆರ್ವಿಕ್ ಕನಸ್ಟ್ರಕ್ಷನ್ ಕಂಪನಿಯು ₹73 ಕೋಟಿ ವೆಚ್ಚದಲ್ಲಿ 1300 ಮನೆಗಳನ್ನು ನಿರ್ಮಾಣ ಮಾಡುತ್ತಿದೆ

ಹುಬ್ಬಳ್ಳಿ: ಈಗಾಗಲೇ 1300 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಸುಮಾರು 1 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.ಅವರು ಹು-ಧಾ ಪೂರ್ವ ಹಾಗೂ ಕೇಂದ್ರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಪರಿವೀಕ್ಷಣೆ ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿ ಮನೆಗಳ ನಿರ್ಮಾಣ ಕಾಮಗಾರಿ ಪರಿವೀಕ್ಷಣೆ ಮತ್ತು ಸಾರ್ವಜನಿಕರ ಕುಂದುಕೊರತೆ ಆಲಿಸಿ ಮಾತನಾಡಿದರು.

ಬೆಂಗಳೂರಿನ ಮೆರ್ವಿಕ್ ಕನಸ್ಟ್ರಕ್ಷನ್ ಕಂಪನಿಯು ₹73 ಕೋಟಿ ವೆಚ್ಚದಲ್ಲಿ 1300 ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ 672 ಮನೆಗಳು ಹಂಚಿಕೆಗೆ ಸಿದ್ಧವಾಗಿವೆ. ಇನ್ನೂ 1 ತಿಂಗಳು ಕಾಲಾವಕಾಶ ಇರುವುದರಿಂದ ಸುಮಾರು 1 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.

1300 ಮನೆಗಳ ಜತೆಗೆ 320 ಮನೆಗಳನ್ನು ಪೌರ ಕಾರ್ಮಿಕರಿಗಾಗಿ ನಿರ್ಮಿಸಲಾಗುತ್ತಿದೆ. ಅಲ್ಲದೇ 260 ಮತ್ತು 780 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ಮನೆಗೆ ₹7.58 ಲಕ್ಷ ವೆಚ್ಚವಾಗಲಿದೆ. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 38 ಸ್ಲಂಗಳಿವೆ. 7358 ಕುಟುಂಬಗಳಿದ್ದು, 1264 ಕುಟುಂಬಗಳಿಗೆ ಮನೆಗಳನ್ನು ನೀಡಲಾಗುವುದು. 2014 ರಿಂದ ಸುಮಾರು 16 ಸಾವಿರ ಅರ್ಜಿಗಳು ಬಂದಿವೆ. ಹಂತ ಹಂತವಾಗಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದರು.

ಈ ವೇಳೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ಅಶೋಕ ಡಿ.ಆರ್, ಮುಖ್ಯ ಎಂಜಿನಿಯರ್ ಎಚ್.ಪಿ.ಸುಧೀರ್, ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ, ಸಹಾಯಕ ನಿರ್ದೇಶಕ ಮಹಾಂತೇಶ ಪಾಟೀಲ, ವಿಶೇಷ ಅಧಿಕಾರಿ ಮುನಿರಾಜ್ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರಿದ್ದರು.

Share this article