ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಡಿ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದ್ಯಾಂತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.ಮಂಚೇನಹಳ್ಳಿ ತಾಲೂಕಿನ ಮಿಣಕನಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇ ಬುದ್ದಿವಂತನಹಳ್ಳಿ, ಮಿಣಕನಗುರ್ಕಿ, ಎಂ.ಗುಂಡ್ಲಹಳ್ಳಿ, ಎಂ.ನಾಗೇನಹಳ್ಳಿ, ಎಂ.ಹೊಸಹಳ್ಳಿ, ಕಂಬತ್ತನಹಳ್ಳಿ, ದಂಡಿಗಾನಹಳ್ಳಿ, ಪೆದ್ದರೆಡ್ಡಿ ನಾಗೇನಹಳ್ಳಿ, ರಾಯನಕಲ್ಲು, ಕನಗಾನಕೊಪ್ಪ ಗ್ರಾಮಗಳಿಗೆ ಚಳಿಯನ್ನು ಲೆಕ್ಕಿಸದೆ ಸಂಚರಿಸಿ ಜನಸಾಮಾನ್ಯರ ಕಷ್ಟಗಳನ್ನು ಮತ್ತು ಸಮಸ್ಯೆಗಳನ್ನು ಕೇಳಿ ಪರಿಹಾರ ನೀಡುವ ಭರವಸೆ ನೀಡಿದರು.
ಗ್ರಾಮಗಳಿಗೆ ಆಗಮಿಸಿದ ಶಾಸಕರು ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಉತ್ಸಾಹದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ, “ಇಲ್ಲಿ ಯಾವ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಪ್ರತಿಯಾಗಿ, ಗ್ರಾಮಸ್ಥರು ಮೂಲಸೌಕರ್ಯಗಳ ಕೊರತೆ, ಕಂದಾಯ, ಪಿಂಚಣಿ ಸಮಸ್ಯೆಗಳನ್ನು ಸೇರಿದಂತೆ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ಜಾಗದ ಒತ್ತುವರಿ, ಬಸ್ ವ್ಯವಸ್ಥೆ, ಸ್ಮಶಾನದ ಜಾಗ ಮತ್ತು ರಸ್ತೆ, ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಾಣ ಹಾಗೂ ಆರೋಗ್ಯ ಸಮಸ್ಯೆಗಳು ಒಳಗೊಂಡಂತೆ ಹಲವಾರು ಸಮಸ್ಯೆಗಳನ್ನು ಜನರು ಶಾಸಕರ ಬಳಿ ಹೇಳಿಕೊಂಡರು.ಕೆಲ ಸಮಸ್ಯೆಗಳಿಗೆ ಅಲ್ಲೆ ಪರಿಹಾರ ಕಲ್ಪಿಸಿದರೆ ಮತ್ತೆ ಕೆಲವಕ್ಕೆ ಕಾಲಾವಕಾಶ ನಿಗದಿಪಡಿಸಿ, ಅಧಿಕಾರಿಗಳಿಂದ ಆದಷ್ಟು ಬೇಗ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಕಷ್ಟಗಳನ್ನು ಕೇಳುವ ನಿಟ್ಟಿನಲ್ಲಿ ನಮ್ಮೂರಿಗೆ ನಮ್ಮ ಶಾಸಕ ವಿನೂತನ ಕಾರ್ಯಕ್ರಮದಡಿ ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ಅಲ್ಲೆ ಪರಿಹರಿಸಲು ಕ್ರಮ ಕೈಗೊಳ್ಳುವ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಇಂದಿಗೆ ಸರಿಸುಮಾರು ಅರವತ್ತು ಹಳ್ಳಿಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಸಂಕ್ರಾಂತಿ ವೇಳೆಗೆ ಮಂಚೇನಹಳ್ಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ಮುಗಿಸಲು ಪ್ರಯತ್ನ ಮಾಡಲಾಗುವುದು ಎಂದರು.ಬಡವರ ಬದುಕು ಬಹಳಷ್ಟು ಕಷ್ಟಕರವಾಗಿರುತ್ತದೆ. ಸರ್ಕಾರದ ವತಿಯಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸುವುದೆ ನನ್ನ ಏಕೈಕ ಉದ್ದೇಶ. ಜನರಿಗೆ ದೂಡ್ಡ ದೂಡ್ಡ ಕನಸು ತೋರಿಸುವವರು ಒಂದೊಮ್ಮೆ ಹಳ್ಳಿಗಳಿಗೆ ಬಂದು ಬಡವರ ಬದುಕು ನೋಡಲಿ ಬಡತನ ಏನೆಂಬುದನ್ನು ತಿಳಿಯಬಹುದು. ಇನ್ನು ನನ್ನ ಕ್ಷೇತ್ರದ ಜನರಿಗೆ ಶಕ್ತಿ ಮೀರಿ ಸಹಾಯವನ್ನು ಮಾಡುತ್ತಿದ್ದೇನೆ. ವಿದ್ಯಾರ್ಥಿ ವೇತನ, ಅಮ್ಮ ಆ್ಯಂಬುಲೆನ್ಸ್ ನೀಡಿದ್ದು ಪ್ರತಿ ಹಳ್ಳಿಯಲ್ಲಿ ರಸ್ತೆಗಳ ದುರಸ್ತಿ ಚರಂಡಿ ವ್ಯವಸ್ಥೆ ಸರಿಪಡಿಸುವುದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ದಲಿತರ ಸ್ಮಶಾನಗಳಿಗೆ ಜಾಗ, ಸೂರು ಕಲ್ಪಿಸುವುದಾಗಿದೆ. ನನ್ನ ಕ್ಷೇತ್ರದ ಜನರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದೇ ನನ್ನ ಗುರಿ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ ವಕ್ಫ್ ವಿವಾದದ ಬಗ್ಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಅವರು ಇಲ್ಲಿಗೆ ಬಂದು ಬಡವರ ಕಷ್ಟಗಳನ್ನು ಕೇಳಿದರೆ ಉತ್ತಮವಾಗುತ್ತಿತ್ತು ಎಂದರು.ಶಾಸಕರೊಂದಿಗೆ ಕಂದಾಯ, ಆಹಾರ, ಬೆಸ್ಕಾಂ, ಆರೋಗ್ಯ, ಪೋಲಿಸ್ ಇಲಾಖೆಗಳ ತಾಲೂಕು ಪಂಚಾಯತಿ, ಗ್ರಾಮ ಪಂಚಾಯಿತಿ, ಅಧಿಕಾರಿಗಳು, ಮುಖಂಡರು ಇದ್ದರು.ಸಿಕೆಬಿ-1 ಮಿಣಕನಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಜನರ ಸಮಸ್ಯೆ ಆಲಿಸುತ್ತಿರುವುದು.