ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ರಾಮ ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರೆದಿದೆ.ಇಂದು ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ನಗರ ಮತ್ತು ಗ್ರಾಮಾಂತರದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಇದರಿಂದ ನಗರದ ಕೆಲವು ಬಡಾವಣೆಗಳು ಜಲಾವೃತಗೊಂಡಿವೆ.
ಕೆರೆಯಂತಾದ ಹೆದ್ದಾರಿಗಳುನಗರದಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದೆ. ನಗರದ ಬಜಾರ್ ರಸ್ತೆ,ಎಂಜಿ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 69 ರಲ್ಲಿ ರಸ್ತೆಗಳು ಕೆರೆ ಮತ್ತು ನದಿಗಳಾಗಿ ಮಾರ್ಪಟ್ಟಿದ್ದವು. ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಹೆದ್ದಾರಿ ಅಗಲೀಕರಣಕ್ಕಾಗಿ ಎಂಜಿ ರಸ್ತೆಯಲ್ಲಿ ಕಟ್ಟಡಗಳ ತೆರವು ಮಾಡುತ್ತಿರುವುದರಿಂದ ಕಟ್ಟಡಗಳ ಅವಶೇಷಗಳು ಮತ್ತು ಮಳೆ ನೀರು ಸೇರಿ ರಸ್ತೆ ಕೆಸರು ಗದ್ದೆಗಯಾಗಿದೆ .
ನಗರ ಪ್ರದೇಶದಲ್ಲಿ ಸೋಮವಾರ ಮುಂಜಾನೆಯಿಂದ ಸತತವಾಗಿ ಮಳೆ ಬೀಳುತ್ತಿದ್ದು, ಆಗೋಮ್ಮೆ ಈಗೊಮ್ಮೆ ಬಿಡುವು ನೀಡಿ ಮತ್ತು ಸುರಿಯುತ್ತಿದೆ. ಮಂಗಳವಾರ ಇದೇ ವಾತಾವರಣ ಮುಂದುವರೆದಿದ್ದು, ಮಳೆಯಿಂದ ನಗರದ ಸಾಕಷ್ಟು ಪ್ರದೇಶಗಳಲ್ಲಿ ಮನೆಗಳಿಗೆ ಮಳೆ ನೀರು ಬಂದಿದೆ.ಸುಮಾರು ದಿನಗಳಿಂದ ಚರಂಡಿಗಳನ್ನು ಸ್ವಚ್ಛತೆ ಮಾಡಿ ಅಂತ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯಾಧಿಕಾರಿಗೆ ಫೋನ್ 4 ಬಾರಿ ಮಾಡಿದರು ಫೋನ್ ರಿಸೀವ್ ಮಾಡುವುದಿಲ್ಲ. ನಗರಸಭೆ ಆಧಿಕಾರಿಗಳು ಇತ್ತ ಗಮನಹರಿಸಬೇಕಾಗಿ ನಿವಾಸಿ ರಾಮಕೃಷ್ಣಪ್ಪ ಮನವಿ ಮಾಡಿದ್ದಾರೆ. ಬಸ್ ನಿಲ್ದಾಣ ಜಲಾವೃತಮಳೆಯಿಂದಾಗಿ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಪರದಾಡಬೇಕಾಯಿತು. ವಾಹನ ಸಂಚಾರಕ್ಕೂ ಸಮಸ್ಯೆಯಾಗಿತ್ತು. ಜೋರು ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಜಿಲ್ಲೆಯಾದ್ಯಂತ ಸೋಮವಾರ ಮುಂಜಾನೆಯಿಂದ ಸತತವಾಗಿ ಬಿಟ್ಟು ಬಿಟ್ಟು ಮಳೆ ಸುರಿಯಿತ್ತಿದೆ.ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನರ ನೆಮ್ಮದಿ ಭಂಗವಾಗಿದೆ ಇನ್ನೂ ರೈತರ ಸ್ಥಿತಿ ಕೇಳುವ ಹಾಗೆ ಇಲ್ಲ.
ಮಳೆಯಿಂದಾಗಿ ಸಣ್ಣ ಪುಟ್ಟ ಕೆರೆಗಳು, ಕುಂಟೆಗಳು ಮತ್ತು ಚೆಕ್ ಡ್ಯಾಂಗಳು ಮೈದುಂಬಿ ಹರಿಯುತ್ತಿದ್ದು, ಮಳೆನಾಡಿನ ವೈಭವ ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಬರದಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಈಗ ಕೆರೆ, ಕುಂಟೆಗಳಿಗೆ ನೀರು ಬರುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.ಮಳೆ ಆರ್ಭಟದಿಂದಾಗಿ ಚಿಕ್ಕಬಳ್ಳಾಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅನೇಕ ರೀತಿಯ ಸಂಕಷ್ಟಗಳನ್ನು ತಂದೊಡ್ಡಿದೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ ಇನ್ನೂ ಒಳ್ಳೆಯ ಮನೆಗಳು ಸಹ ಜಡಿ ಮತ್ತು ಧಾರಾಕಾರ ಮಳೆಯಿಂದ ಸುರಿಯಲು ಆರಂಭಿಸಿವೆ ಇದರಿಂದ ನಾಗರೀಕರು ಆತಂಕಗೊಂಡಿದ್ದಾರೆ.
ಅ.17ರ ಬೆಳಗ್ಗೆ 8.30 ರಿಂದ ಅ. 18ರ ಬೆಳಗ್ಗೆ 8.30 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಳಾದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಹಾಗೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.