ಜಿ.ದೇವರಾಜ ನಾಯ್ಡು
ಪವಾಡಗಳ ಸಿದ್ಧಪುರುಷ ಘನ ನೀಲಿ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆಯಲ್ಲಿ ವಿವಿಧ ಉತ್ಸವಗಳು ಸಂಭ್ರಮ ಸಡಗರದಿಂದ ವೈಭವವಾಗಿ ನಡೆದವು. 5ನೇ ದಿನದಂದು ಶುಕ್ರವಾರ ಮುತ್ತತ್ತಿರಾಯನ ಸೇವೆಯನ್ನು ಮಾಡುವ ಮೂಲಕ ಐದು ದಿನಗಳ ಜಾತ್ರೆ ಮಹೋತ್ಸವಕ್ಕೆ ತೆರೆ ಬಿದ್ದಿತು.
ಹನೂರು ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಸಿದ್ದಪ್ಪಾಜಿ ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿ ವಿವಿಧ ಉತ್ಸವಗಳಾದ ಚಂದ್ರಮಂಡಲ, ಉತ್ಸವ ಹುಲಿವಾಹನ ಉತ್ಸವ, ಮುಡಿಸೇವೆ, ಪಂಕ್ತಿ ಸೇವೆ ಸೇರಿದಂತೆ ಕಂಡಾಯಗಳ ಉತ್ಸವ ಕೊನೆಯ ದಿನ ಮುತ್ತತ್ತಿರಾಯನ ಸೇವೆಯನ್ನು ಅದ್ಧೂರಿಯಾಗಿ ನೆರವೇರಿಸಿದರು.ಚಿಕ್ಕಲ್ಲೂರು ಪುಣ್ಯಕ್ಷೇತ್ರ ಸಮೀಪದ ಕಾವೇರಿ ನದಿ ಎಡದಂಡೆಗೆ ಮುತ್ತತ್ತಿರಾಯನ ವೈಷ್ಣವಿ ಕೇಂದ್ರವಿದ್ದು ಹಲಗೂರಿಗೆ ಸಿದ್ದಪ್ಪಾಜಿ ಭಿಕ್ಷೆಗೆ ಹೋಗುವಾಗ ಮುತ್ತತ್ತಿರಾಯ ಸಿದ್ದಪ್ಪಾಜಿ ಪವಾಡಗಳಿಗೆ ಸಾಕ್ಷಿಯಾಗಿರುತ್ತಾನೆ. ಇವರಿಬ್ಬರ ಸ್ನೇಹದ ಕುರುಹಾಗಿ ಚಿಕ್ಕಲ್ಲೂರು ಜಾತ್ರೆಯ ಕಡೆಯ ದಿನ ಮುತ್ತತ್ತಿರಾಯನ ಸೇವೆ ಜರುಗಲಿದೆ. ವಿಶೇಷವೇನೆಂದರೆ ಈ ದಿನ ನೀಲಗಾರರು ಶ್ರೀ ವೈಷ್ಣವ ಬಿರುದಾರರ ದಾಸಯ್ಯರನ್ನು ಪೂಜಾ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಸಸ್ಯಹಾರಿ ಹಾಗೂ ಮಾಂಸಹಾರದ ಅಡುಗೆ ಮಾಡಿ ಅವರ ದಂಡ ಕೋಲು, ಕಣಜ, ಅರಿವೆಗಳಿಗೆ, ಎಡೆ ಇಟ್ಟು ಸಾಂಪ್ರದಾಯವಾಗಿ ಪೂಜೆ ಸಲ್ಲಿಸುತ್ತಾರೆ. ಈ ವೇಳೆ ನೀಲಗಾರರು ಸಹ ನೆತ್ತಿಗೆ ಮೂರು ನಾಮವನ್ನು ಹಾಕಿಕೊಂಡು ಮುತ್ತತ್ತಿರಾಯನ ಭಕ್ತಿ ಪರಾಕಾಷ್ಠೆ ಮೆರೆಯುತ್ತಾರೆ.
ಸಿದ್ದಪ್ಪಾಜಿ ಹಾಗೂ ಮುತ್ತತ್ತಿರಾಯನ ಪರಂಪರೆಯಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಉತ್ಸವ ಮೂರ್ತಿಗಳನ್ನು ಹಾಗೂ ಕರಿಯಣ್ಣ ಕೆಂಚಣ್ಣ ದೇವರನ್ನು ಅಲಂಕೃತಗೊಳಿಸಿ ಧಾರ್ಮಿಕವಾಗಿ ಪೂಜಾ ಕಾರ್ಯಕ್ರಮಗಳನ್ನು ವಿಧಿ ವಿಧಾನಗಳೊಂದಿಗೆ ಮತ್ತು ವಾದ್ಯ ಮೇಳಗಳ ಮೂಲಕ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಸಿದ್ದಪ್ಪಾಜಿ ಮತ್ತು ಮುತ್ತತ್ತಿರಾಯನ ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷತೆಯಾಗಿದೆ. ಜೊತೆಗೆ ಚಿಕ್ಕಲ್ಲೂರು ಜಾತ್ರೆಯ ಐದನೇ ದಿನ ಕೊನೆಯ ದಿನವಾದ ಶುಕ್ರವಾರ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಸಿದ್ದಪ್ಪಾಜಿಗೆ ಪೂಜೆ ಸಲ್ಲಿಸಿ ನಂತರ ಮುತ್ತತ್ತಿರಾಯನ ಸೇವೆ ಮಾಡುವ ಮೂಲಕ ತಮ್ಮೆಲ್ಲ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವಂತೆ ನಿವೇದನೆ ಮಾಡುವ ಮೂಲಕ ವಿಜೃಂಭಣೆಯ ಜಾತ್ರೆಗೆ ತೆರೆ ಬಿದ್ದಿತು.
ಮುತ್ತತ್ತಿರಾಯನ ವೈಷ್ಣವಿ ಪಂಥಕ್ಕೆ ಸೇರಿದ್ದು ದಾಸಯ್ಯನವರು ಪಾಲಿಸುವ ಅಪರ ಗೋಪುರವನ್ನು ಶುಕ್ರವಾರ ಚಿಕ್ಕಲ್ಲೂರು ಶ್ರೀ ಕ್ಷೇತ್ರದಲ್ಲಿ ಭಾರಿ ವಿಜೃಂಭಣೆಯಿಂದ ಅಪಾರ ಭಕ್ತಸ್ತೋಮದ ನಡುವೆ ನಡೆಯಿತು. ಕರಿಯಣ್ಣ-ಕೆಂಚಣ್ಣ ದೇವರ ಮೂರ್ತಿಗಳನ್ನು ದಾಸಯ್ಯನವರು ಹೊತ್ತು ವಾದ್ಯ ಮೇಳಗಳ ತಾಳಕ್ಕೆ ಆಪರ ಗೋಪರ ಎಂದು ಕೂಗುತ್ತಾ ಕುಣಿಯುತ್ತಾರೆ. ಇದೇ ವೇಳೆ (ಅಪರಗೋಪುರ) ಕಡಲೆಪುರಿ, ತೆಂಗಿನಕಾಯಿ ಚೂರುಗಳು ಮತ್ತು ಬೆಲ್ಲ ಮಿಶ್ರಿತ ಪದಾರ್ಥಗಳನ್ನು ಗೋಪುರ ರೀತಿಯಲ್ಲಿ ಗುಡ್ಡೆ ಹಾಕಿ ಅದನ್ನು ಕೈಯಲ್ಲಿ ಮುಟ್ಟದೆ ಬಾಯಿಂದಲೇ ಪದಾರ್ಥಗಳನ್ನು ಮುಗಿಬಿದ್ದು ತಿನ್ನುವ ಮೂಲಕ ಕರಿಯಣ್ಣ ಮತ್ತು ಕೆಂಚಣ್ಣ ದೇವರನ್ನು ತೃಪ್ತಿ ಪಡಿಸುವ ಸಂಕೇತವಾಗಿ ಸಂಪ್ರದಾಯವನ್ನು ಪಾಲಿಸಿದರು.
ಬಿಗಿ ಪೊಲೀಸ್ ಭದ್ರತೆ: