112.14 ಕೋಟಿ ರು. ಆದಾಯ ನಿರೀಕ್ಷೆ, ಆದಾಯದಲ್ಲಿ ಶೇ. 40 ರಷ್ಟು ಹೆಚ್ಚಳ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅವರಿಂದ ಬಜೆಟ್ ಮಂಡನೆ
ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ₹5.12 ಕೋಟಿ ಗಳ ಉಳಿತಾಯ ಬಜೆಟ್ ಮಂಡಿಸಿದರು.
ಪ್ರಾರಂಭ ಶಿಲ್ಕು ₹16.90 ಕೋಟಿ 2025-26ನೇ ಸಾಲಿನಲ್ಲಿ ₹112.14 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಅಂದರೆ, ಒಟ್ಟು ₹129.04 ಕೋಟಿ ಆದಾಯದಲ್ಲಿ ₹123.92 ಕೋಟಿ ವೆಚ್ಚ ಮಾಡಲಾಗುವುದು. ₹5.12 ಕೋಟಿ ಉಳಿಕೆಯಾಗಲಿದೆ.ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಗಳು, ಡಿಜಿಲೀಕರಣ ಮಾಡಲಾದ ಸರ್ಕಾರಿ ಹಾಗೂ ಅರೆ ಸರ್ಕಾರಿ ಆಸ್ತಿಗಳಿಂದಾಗಿ ನಗರಸಭೆಯ ಆದಾಯ ಹಿಂದಿನ ಸಾಲುಗಳಿಗೆ ಹೋಲಿಸಿದರೆ ಶೇ. 40 ರಷ್ಟು ಹೆಚ್ಚಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಪೌರಾಡಳಿತ ನಿರ್ದೇಶನಾಲಯದಿಂದ ಕೇಂದ್ರ ಸರ್ಕಾರದ ಯೋಜನೆ ರಾಷ್ಟ್ರೀಯ ಜಿಯೋ ಸ್ಪೇಷಿಯಲ್ ಜ್ಞಾನ ಆಧಾರಿತ ನಗರ ವಸತಿಗಳ ಭೂ ಸಮೀಕ್ಷೆ (ನಕ್ಷಾ ಯೋಜನೆ) ಯನ್ನು ಪ್ರಾಯೋಗಿಕವಾಗಿ ಕರ್ನಾಟಕ ರಾಜ್ಯದ 10 ನಗರ, ಪಟ್ಟಣ ಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ ಚಿಕ್ಕಮಗಳೂರು ನಗರಸಭೆ ಆಯ್ಕೆಗೊಂಡಿದೆ. ನಗರಸಭೆ ಹಾಗೂ ಸಾರ್ವಜನಿಕ ಆಸ್ತಿ ಸೇರಿದಂತೆ ಎಲ್ಲಾ ನಿಖರವಾದ ಸರ್ವೆ ಕಾರ್ಯವನ್ನು ಭೂ ಮಾಪನ ಇಲಾಖೆ ಹಾಗೂ ನಗರಸಭೆ ಜಂಟಿ ಸಹಯೋಗದೊಂದಿಗೆ ಕೈಗೊಳ್ಳಲಾಗುತ್ತಿದೆ.
ಮಯೂರಾ ಹೋಟೆಲ್ ಪಕ್ಕದಲ್ಲಿ ಇರುವ ಹಿಂದೂ ಮುಸಾಫಿರ್ ಜಾಗದಲ್ಲಿ ಸುಮಾರು ₹34 ಕೋಟಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಮಲ್ಟಿಪಲ್ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಣಿಜ್ಯ ಮಳಿಗೆ ನಿರ್ಮಿಸಲು ಡಿಪಿಆರ್ ತಯಾರಿಸಲಾಗಿದ್ದು, ಸದ್ಯದಲ್ಲೇ ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲು ಕ್ರಮ ವಹಿಸಲಾಗುವುದು. ಹೆಸರಿ ಆಸ್ಪತ್ರೆ ಮುಂಭಾಗದಲ್ಲಿರುವ ನಗರಸಭೆ ಜಾಗದಲ್ಲಿರುವ ವಸತಿ ಗೃಹಗಳನ್ನು ತೆರವುಗೊಳಿಸಿ ₹1.30 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೂವು ಮತ್ತು ಹಣ್ಣಿನ ಮಾರುಕಟ್ಟೆ ಮತ್ತು ಮಳಿಗೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
15 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯೆ ಕವಿತಾ ಶೇಖರ್ ಮಾತನಾಡಿದರು. ಸದಸ್ಯರಾದ ಟಿ. ರಾಜಶೇಖರ್, ಮಧುಕುಮಾರ್ ರಾಜ್ ಅರಸ್ ಇದ್ದರು.