ಕನ್ನಡಪ್ರಭ ವಾರ್ತೆ ಕೊಪ್ಪ
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಹರಿಹರಪುರದ ವತಿಯಿಂದ ಆಯೋಜಿಸಿದ್ಧ ಪ್ರಪ್ರಥಮ ಹರಿಹರಪುರ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಪರಿಪೂರ್ಣವಾದಂತಹ ಎಲ್ಲರನ್ನ ಒಗ್ಗೂಡಿಸುವ ಭಾಷೆಯಾಗಿದೆ. ಜಗತ್ತು ವಿಶೇಷವಾದಂತಹ ಜ್ಞಾನದಿಂದ ಮುನ್ನಡೆಯುತ್ತಿದೆ. ಮನುಷ್ಯ ಸಾಧಿಸಿದ ಎಲ್ಲ ವಿಧದ ಪ್ರಗತಿಗೆ ಜ್ಞಾನವೂ ಮೂಲಾಧಾರವಾಗಿದೆ ಎಂದರು.
ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ ಶೆಟ್ಟಿ ಪುಸ್ತಕ ಮಳಿಗೆ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ವ್ಯಾಕರಣ ಚರಿತ್ರೆ ನಿಘಂಟು ಮರೆಯಾಗುತ್ತಿದೆ. ವಿದೇಶಿ ಸಂಸ್ಕೃತಿ ವ್ಯಾಮೋಹದಿಂದ ಭಾಷೆಗೆ ಕುತ್ತು ಬಂದಿದೆ ಎಂದರು.ಸಮ್ಮೇಳನಾಧ್ಯಕ್ಷೆ ಸಾಹಿತಿ ರೂಪಕಲಾ ಮಾತನಾಡಿ ಸುಂದರ ಪರಿಸರದ ಎಲ್ಲಾ ಆಗುಹೋಗುಗಳ ಬಗ್ಗೆ ವಿಷಯ ತಿಳಿಸಿ ಕಳವಳವನ್ನು ವ್ಯಕ್ತಪಡಿಸಿದರು.
ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳು ಪ್ರತಿ ಹೋಬಳಿ ಗ್ರಾಮ ಮಟ್ಟದಲ್ಲೂ ಕೂಡ ನಿರಂತರವಾಗಿ ನಡೆಯುತ್ತಿರಬೇಕು. ಕನ್ನಡ ಕಟ್ಟುವಂತ ಕೆಲಸದಲ್ಲಿ ಎಲ್ಲರೂ ನಿರಂತರವಾಗಿ ಶ್ರದ್ಧೆಯಿಂದ ಪಾಲ್ಗೊಳ್ಳಬೇಕು ಎಂದರು. ಕಸಾಪ ಹೋಬಳಿ ಅಧ್ಯಕ್ಷ ವೈದ್ಯ ಬಿ.ಆರ್.ಅಂಬರೀಶ ಭಂಡಿಗಡಿ ಪ್ರಪ್ರಥಮ ಹರಿಹರಪುರ ಹೋಬಳಿ ಕನ್ನಡ ಸಮ್ಮೇಳನದ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದರು.ಎಸ್.ಎನ್.ರಾಮಸ್ವಾಮಿ, ಬಿ.ಎಚ್.ದಿವಾಕರ್ ಭಟ್, ಕೆ.ಜಿ.ಶೋಭಿಂತ್ ಸಮ್ಮೇಳನದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಕಲಾ, ರಂಗನಾಥ್ ವಲಯ ಅರಣ್ಯ ಅಧಿಕಾರಿಗಳು, ಎ.ಓ,ವೆಂಕಟೇಶ್, ಸುಮಿತ್ರನಾರಾಯಣ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಾತ್ಮಕ ಹಿಂದಿನ ಕಾಲದ ವಸ್ತುಗಳ ಪ್ರದರ್ಶನ ಹಾಗೂ ಪುರಾತನ ನಾಣ್ಯಗಳ ಪ್ರದರ್ಶನ ಪುಸ್ತಕ ಪ್ರದರ್ಶನಗಳಿದ್ದವು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಈ ಒಂದು ವರ್ಷ ಅವಧಿಯ ಹೆಜ್ಜೆ ಗುರುತು ನೆನಪಿನ ಪುಸ್ತಕ, ವೈದ್ಯ ಬಿ.ಆರ್.ಅಂಬರೀಶ ಭಂಡಿಗಡಿ ಅವರ ಹಾಗೆ ಸುಮ್ಮನೆ ಕೃತಿ, ಸೌಜನ್ಯದಾಸನ ದಾಸನಕೊಡಿಗೆ ಕವನ ಸಂಕಲನ ಬಿಡುಗಡೆ ಆಯಿತು.ಹಿರಿಯ ಸಾಧಕರಾದ ಕೆ.ಜಿ.ಎನ್ ಶಾಸ್ತ್ರಿ, ಮಂಜುನಾಥ್ ಸೆರೆಗಾರ್, ವಿಶ್ವನಾಥ್ ಹಾಲ್ಮೂತ್ತೂರು ಮೆಸ್ಕಾಂ, ಸುವರ್ಣ ಕೇಶವ ಹಾಗೂ ಸರೋಜಾ ರಾಮಕೃಷ್ಣರನ್ನು ಗೌರವಿಸಲಾಯಿತು. ಹರಿಹರಪುರ ಹೋಬಳಿಯ ಹಿರಿಯ ಅಡಿಕೆ ಕೊನೆಗಾರರಿಗೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ವಿಶೇಷವಾಗಿ ಏರ್ಪಡಿಸಲಾಗಿತ್ತು. ಶ್ರೀ ದುರ್ಗಾಪರಮೇಶ್ವರಿ ಭಂಡಿಗಡಿಯ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಹಾಗೂ ಮನು ಹಂದಾಡಿಯವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು. ಶುಕುರ್ ಅಹಮದ್, ರವಿಪ್ರಸಾದ್, ಸವಿತಾ ಶ್ರೀಹರ್ಷ, ರವೀಶ್ ರುದ್ರಾಕ್ಷಿಬೈಲ್, ನಾಗಪ್ಪ ಕೊಡ್ತಾಳ್, ಸರೋಜ ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.