ಕನ್ನಡಪ್ರಭ ವಾರ್ತೆ ದಾವಣಗೆರೆ
ಶರಣ್ ನಾಯಕರಾಗಿ ಅಭಿನಯಿಸಿದ್ದ ಅಧ್ಯಕ್ಷ ಚಿತ್ರ ದಶಕದ ಹಿಂದೆ ಬಿಡುಗಡೆಯಾಗಿ ಜನಪ್ರಿಯವಾಗಿದ್ದು, 12 ವರ್ಷದ ಬಳಿಕ ಅದರ ಸೀಕ್ವೆಲ್ ಅಂದರೆ ಮುಂದು ವರಿದ ಭಾಗವಾಗಿ ನಿರ್ಮಾಣವಾದ ಉಪಾಧ್ಯಕ್ಷ ಸಿನಿಮಾ ಜ.26ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಅನಿಲಕುಮಾರ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಗೌಡ ಉಪಾಧ್ಯಕ್ಷ ಚಿತ್ರ ನಿರ್ಮಿಸಿದ್ದು, ಉಮಾಪತಿ ಗೌಡ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಶಕ್ತಿ, ರ್‍ಯಾಂಬೋ- 2, ಕೃಷ್ಣ-ರುಕ್ಕು ಖ್ಯಾತಿಯ ಅನಿಲಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿ ಗೆ ಚಿಕ್ಕಣ್ಣ ನಾಯಕನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಅಧ್ಯಕ್ಷ ಸಿನಿಮಾದ ಮುಂದುವರಿದ ಭಾಗವಾದ ಉಪಾಧ್ಯಕ್ಷ ಸಿನಿಮಾ ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದೆ. ನಾಯಕನಾಗಿ ಚಿಕ್ಕಣ್ಣ ಗೆಲ್ಲಬೇಕೆಂಬುದೇ ನಮ್ಮೆಲ್ಲರ ಉದ್ದೇಶವಾಗಿದೆ. ಕೊರೋಾ ಲಾಕ್ ಡೌನ್ ವೇಳೆ ಚಂದ್ರಮೋಹನ್ ಚಿತ್ರದ ಕಥೆ ಹೇಳಿದ್ದರು. ನಂತರ ನಿರ್ಮಾಪತಿ ಉಮಾಪತಿ ಕಥೆಯನ್ನು ಇಷ್ಟಪಟ್ಟು ಚಿತ್ರವನ್ನು ನಿರ್ಮಿಸಿ, ಉಪಾಧ್ಯಕ್ಷ ಎಂಬ ಟೈಟಲ್ ಸಹ ಇಟ್ಟಿದ್ದಾರೆ. ಅಧ್ಯಕ್ಷದಲ್ಲಿ ಗೌಡರ ಪಾತ್ರ ನಿರ್ವಹಿಸಿದ್ದ ರವಿಶಂಕರ ಉಪಾಧ್ಯಕ್ಷದಲ್ಲೂ ಶಿವರುದ್ರೇಗೌಡರಾಗಿ ನಟಿಸಿದ್ದಾರೆ ಎಂದು ಅವರು ಹೇಳಿದರು.ಹಿಂದೆ ಅಧ್ಯಕ್ಷ ಸಿನಿಮಾದ ಕಥೆ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಉಪಾಧ್ಯಕ್ಷನ ಕಥೆಯು ಶುರುವಾಗುತ್ತದೆ. ಅಧ್ಯಕ್ಷ ಸಿನಿಮಾದ ಮುಂದುವರಿದ ಭಾಗವಾಗಿ ಉಪಾ ಧ್ಯಕ್ಷ ಚಿತ್ರವು ಸಹ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಚಿಕ್ಕಣ್ಣನಿಗೆ ನಾಯಕನಾಗಿ ಈ ಚಿತ್ರವು ಹೊಸ ಇಮೇಜ್ ನೀಡಲಿದೆ ಎಂಬ ವಿಶ್ವಾಸವಿದೆ. ನಾಯಕಿಯಾಗಿ ಇದೇ ಊರಿನ ಹುಡುಗಿ ಮಲೈಕಾ ವಸುಪಾಲ್ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರಚಂದ್ರ ಛಾಯಾಗ್ರಹಣ, ರಾಜಶೇಖರ್‌ರ ಸಂಭಾಷಣೆ, ಕೆ.ಎಂ.ಪ್ರಕಾಶ್‌ರ ಸಂಕಲನ, ಮೋಹನ್ ಬಿ.ಕೆರೆ ಕಲಾ ನಿರ್ದೇಶನವಿದೆ. ಸಾಧು ಕೋಕಿಲ, ಧರ್ಮಣ್ಣ ಉಳಿದ ಪಾತ್ರ ವರ್ಗದಲ್ಲಿದ್ದಾರೆ ಎಂದು ಅವರು ತಿಳಿಸಿದರು.
ನಾಯಕ ನಟಿ, ದಾವಣಗೆರೆ ಹುಡುಗಿ ಮಲೈಕಾ ವಸುಪಾಲ್ ಮಾತನಾಡಿ, ಇಡೀ ಉಪಾಧ್ಯಕ್ಷ ಸಿನಿಮಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಜೀವನದಲ್ಲಿ ಎಷ್ಟೇ ಒತ್ತಡವಿದ್ದರೂ ಉಪಾಧ್ಯಕ್ಷನ ನೋಡಿದರೆ ಅದೆಲ್ಲಾ ನೋವು ಮರೆತು ಹೋಗುತ್ತದೆ. ಚಿಕ್ಕಣ್ಣನವರಿಗೆ ಇದು ತುಂಬಾ ವಿಶೇಷ ಸಿನಿಮಾ ಆಗಿದೆ. ಕಿರಿಯರು, ಹಿರಿಯರು ಎಲ್ಲರೂ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ಇದು. ಹೆಚ್ಚು ಮನರಂಜನೆ ನೀಡುವ ಕಥೆ ಇದಾಗಿದೆ ಎಂದು ತಿಳಿಸಿದರು. ನಟ ಧರ್ಮಣ್ಣ ಮಾತನಾಡಿ, ಗಾರೆ ಕೆಲಸವನ್ನು ಮಾಡಿಕೊಂಡಿದ್ದ ಹುಡುಗನೊಬ್ಬ ಚಿತ್ರ ರಂಗವನ್ನು ಸೇರಿಕೊಂಡು, 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟ ನಾಗಿ, ಇದೀಗ ನಾಯಕ ನಟನಾಗುತ್ತಿದ್ದಾನೆಂದರೆ ಅದೇನು ಸುಲಭದ ಮಾತಲ್ಲ. ಅದೇ ರೀತಿ ದಾವಣಗೆರೆಯ ಮಲೈಕಾ ವಸುಪಾಲ್ ಚಿತ್ರದ ನಾಯಕಿ ಯಾಗಿದ್ದಾರೆ. ತಂಡದ ಪ್ರಯತ್ನಕ್ಕೆ ಜನ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಪಾಲಿಕೆ ಸದಸ್ಯ ಆರ್.ಎಲ್.ಶಿವಪ್ರಕಾಶ ಇತರರು ಇದ್ದರು.ಕಳ್ಳಿ ಸೊಗಡಿನ ಕಥಾಹಂದರ: ಚಿಕ್ಕಣ್ಣ
ಚಿತ್ರದ ನಾಯಕ ಚಿಕ್ಕಣ್ಣ ಮಾತನಾಡಿ, 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಈವರೆಗೆ ನಟಿಸಿದ್ದು, ನಾಯಕನಾಗಿ ಇದೇ ಮೊದಲ ಸಿನಿಮಾ ನನಗೆ. ಉಪಾಧ್ಯಕ್ಷ ಚಿತ್ರವನ್ನು ಕುಟುಂಬ ಸಮೇತರಾಗಿ ಯಾವುದೇ ಮುಜುಗರವಿಲ್ಲದೇ ನೋಡಬಹುದಾಗಿದೆ. ಹಳ್ಳಿ ಸೊಗಡಿನ ಕಥಾ ಹಂದರದ ಉಪಾಧ್ಯಕ್ಷ ಸಿನಿಮಾವು ಅಧ್ಯಕ್ಷ ಚಿತ್ರ ನೋಡದ ವರಿಗೂ ಅರ್ಥವಾಗುವಂತಿದೆ. ಅಧ್ಯಕ್ಷ ಚಿತ್ರದ ಕಥೆ ತೋರಿಸಿಯೇ, ಉಪಾಧ್ಯಕ್ಷನ ಚಿತ್ರ ಮುಂದುವರಿದಿದೆ ಎಂದರು.