ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ದಿನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬಾಲ ಕಾರ್ಮಿಕ ಪದ್ದತಿ ದೊಡ್ಡ ಸಾಮಾಜಿಕ ಪಿಡುಗಾಗಿದೆ ಎಂದು ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ತಿಳಿಸಿದರು.
ಮಂಗಳವಾರ ಸೌತಿಕೆರೆ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಶಾಲೆಗೆ ಕಳಿಸಿ, ಕೂಲಿಗೆ ಕಳಿಸ ಬೇಡಿ ಎಂಬ ಧ್ಯೇಯದೊಂದಿಗೆ ಬಾಲ ಕಾರ್ಮಿಕ ವಿರೋಧಿ ದಿನ ಆಚರಿಸಲಾಗುತ್ತಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜನರಲ್ಲಿ ಅರಿವು ಮೂಡಿಸಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಹೆಣ್ಣು ಮಕ್ಕಳಿಗೆ ಅಮ್ಮನ ಭ್ರೂಣದಿಂದಲೇ ಅವರ ರಕ್ಷಣೆಗಾಗಿ ಅನೇಕ ಕಾಯ್ದೆಗಳನ್ನು ಮಾಡಲಾಗಿದೆ. ಪ್ರತಿ ಹೆಣ್ಣು ಮಕ್ಕಳು ಈ ಕಾನೂನಿನ ಬಗ್ಗೆ ಅರಿವು ಪಡೆದು ಅಗತ್ಯವಿದ್ದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬೇಕು ಎಂದು ಸಲಹೆ ನೀಡಿದರು.ವಕೀಲರ ಸಂಘದ ಖಜಾಂಚಿ ಬಸವರಾಜ್ ಮುಖ್ಯ ಉಪನ್ಯಾಸ ನೀಡಿ, 2002 ರಿಂದ ಪ್ರತಿ ವರ್ಷ ಬಾಲ ಕಾರ್ಮಿಕ ವಿರೋಧಿ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿ ಕೊಳ್ಳುವುದು ಕಾನೂನು ಬಾಹಿರ. ಬಾಲ ಕಾರ್ಮಿಕರು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಆ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬಾಲ ಕಾರ್ಮಿಕರಾಗಿ ದುಡಿಯು ತ್ತಿರುವ ಮಕ್ಕಳು ಈ ಕೆಟ್ಟ ವ್ಯವಸ್ಥೆಯಿಂದ ಹೊರ ಬಂದು ತಮ್ಮ ಹಕ್ಕುಗಳ ಕುರಿತು ಜಾಗೃತಿ ಹೊಂದಿ ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು. ಮಕ್ಕಳನ್ನು ದುಡಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮ, ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಭೆ ಅಧ್ಯಕ್ಷತೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ ವಹಿಸಿದ್ದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್, ವಕೀಲ ಶಿವಪ್ರಸಾದ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ನ್ಯಾಯಾಂಗ ಇಲಾಖೆ ಶ್ವೇತ , ಸುಹಾಸಿನಿ, ಅಪೂರ್ವ , ವಿಶ್ವನಾಥ್ ಇದ್ದರು.