ಎಸ್ಎಲ್‌ವಿ ಸ್ಟೋನ್ ಕ್ರಷರ್‌ನಲ್ಲಿ 4 ಬಾಲ ಕಾರ್ಮಿಕರು ಪತ್ತೆ

KannadaprabhaNewsNetwork |  
Published : Aug 19, 2025, 01:00 AM IST
ಎಸ್ಎಲ್ ವಿ ಸ್ಟೋನ್ ಕ್ರಷರ್‌ನಲ್ಲಿ ೪ ಬಾಲ ಕಾರ್ಮಿಕರ - ಲೀಡ್‌ ಸುದ್ದಿ | Kannada Prabha

ಸಾರಾಂಶ

ತಾಲೂಕಿನ ಬೇಗೂರು ಪೊಲೀಸ್‌ ಠಾಣಾ ಸರಹದ್ದಿನ ಹಿರೀಕಾಟಿ ಗೇಟ್‌ ಬಳಿಯ ಉದ್ಯಮಿ ಹಿರೀಕಾಟಿ ಆರ್.ಯಶವಂತ್‌ ಕುಮಾರ್‌ಗೆ ಸೇರಿದ ಎಸ್ಎಲ್ ವಿ ಸ್ಟೋನ್ ಕ್ರಷರ್‌ನಲ್ಲಿ ನಾಲ್ವರು ಬಾಲ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ತಾಲೂಕಿನ ಬೇಗೂರು ಪೊಲೀಸ್‌ ಠಾಣಾ ಸರಹದ್ದಿನ ಹಿರೀಕಾಟಿ ಗೇಟ್‌ ಬಳಿಯ ಉದ್ಯಮಿ ಹಿರೀಕಾಟಿ ಆರ್.ಯಶವಂತ್‌ ಕುಮಾರ್‌ಗೆ ಸೇರಿದ ಎಸ್ಎಲ್ ವಿ ಸ್ಟೋನ್ ಕ್ರಷರ್‌ನಲ್ಲಿ ನಾಲ್ವರು ಬಾಲ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬಾಲ ಕಾರ್ಮಿಕರ ಬಳಕೆ ಸಂಬಂಧ ದೂರಿನ ಆಧಾರದ ಮೇರೆಗೆ ಗುಂಡ್ಲುಪೇಟೆ ತಹಸೀಲ್ದಾರ್ ತನ್ಮಯ್ ಎಂ.ಎಸ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕ ನಾರಾಯಣಮೂರ್ತಿ ಪೊಲೀಸರ ಸಹಕಾರ ಪಡೆದು ಎಸ್‌ಎಲ್‌ವಿ ಕ್ರಷರ್‌ ಮೇಲೆ ದಾಳಿ ಮಾಡಿದಾಗ ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಂದೀಪ್ ದುಲೈ, ಸಿಬು, ಗೌರವ್ ದುಲೈ, ಸುಜಿತ್ ದುಲೈ ಬಾಲ ಕಾರ್ಮಿಕರು ಎಂದು ಗುರುತಿಸಲಾಗಿದೆ.

ಎಸ್‌ಎಲ್‌ವಿ ಕ್ರಷರ್‌ ಮಾಲೀಕ ಹಿರೀಕಾಟಿ ಆರ್.ಯಶವಂತಕುಮಾರ್‌ ಗೆ ಸೇರಿದ ಕ್ರಷರ್‌ನಲ್ಲಿ ಹತ್ತಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರಲ್ಲಿ ೪ ಮಂದಿ ಬಾಲ ಕಾರ್ಮಿಕರು ಇರುವುದು ದೃಢಪಟ್ಟ ಹಿನ್ನಲೆ ನಾಲ್ವರು ಬಾಲಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಕ್ರಷರ್‌ ಮಾಲೀಕ ಆರ್.ಯಶವಂತಕುಮಾರ್‌ ಹಾಗೂ ಕ್ರಸರ್ ವ್ಯವಸ್ಥಾಪಕ ಭರತ್, ಗುತ್ತಿಗೆದಾರ ತ್ಯಾಗರಾಜ್ ಮೇಲೆ ಬಾಲ ಕಾರ್ಮಿಕ ನಿಷೇಧ ಕಾಯಿದೆಯಡಿ ಬೇಗೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ ಎನ್ನಲಾಗಿದೆ.

ಜಿಲ್ಲಾ ಕಾರ್ಮಿಕ‌ ಅಧಿಕಾರಿ ರಾಮಚಂದ್ರಯ್ಯ ಘಟನೆ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಕಳೆದ ತಿಂಗಳು ಸಹ ಉದ್ಯಮಿ ಹಿರೀಕಾಟಿ ಆರ್.ಯಶವಂತ್ ಕುಮಾರ್‌ಗೆ ಸೇರಿದ ಎರಡು ಟಿಪ್ಪರ್‌ ಗಳಲ್ಲಿ ಪರ್ಮಿಟ್‌ ಇಲ್ಲದೆ ಎಂ.ಸ್ಯಾಂಡ್ ಕದ್ದು ಸಾಗಿಸುವಾಗ ಸಿಕ್ಕಿ ಬಿದ್ದು ಲಕ್ಷಾಂತರ ದಂಡ ಕಟ್ಟಿದ್ದನ್ನು ಸ್ಮರಿಸಬಹುದು.

ತಹಸೀಲ್ದಾರ್‌ ತನ್ಮಯ್‌ ಎಂ.ಎಸ್‌, ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ ಅವರ ಕಾಳಜಿಯಿಂದ ನಾಲ್ವರು ಬಾಲ ಕಾರ್ಮಿಕರನ್ನು ಆಪತ್ತಿನಿಂದ ಹೊರ ತಂದಿದ್ದಾರೆ ಈ ಸಂಬಂಧ ತನಿಖೆ ಮುಂದುವರಿದಿದೆ.

ಎಸ್‌ಎಲ್‌ವಿ ಕ್ರಸರ್ ಮಾಲೀಕ ಹಿರೀಕಾಟಿ ಆರ್.ಯಶವಂತಕುಮಾರ್‌ಗೆ ಸೇರಿದ ಕ್ರಷರ್‌ನಲ್ಲಿ ಬಾಲ ಕಾರ್ಮಿಕರ ಬಳಕೆ ಮಾಡಿಕೊಳ್ಳುತ್ತಿರುವ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ