ತುಮಕೂರಿನಲ್ಲಿ 9 ಮಕ್ಕಳ ಮಾರಿದ್ದ ಗ್ಯಾಂಗ್‌ ಪತ್ತೆ: 7 ಮಂದಿ ಅರೆಸ್ಟ್‌

KannadaprabhaNewsNetwork | Updated : Jun 27 2024, 05:34 AM IST

ಸಾರಾಂಶ

ಮಗುವೊಂದರ ಅಪಹರಣ ಪ್ರಕರಣದ ಬೆನ್ನುಬಿದ್ದ ಪೊಲೀಸರು ತುಮಕೂರಲ್ಲಿ ಬಹುದೊಡ್ಡ ಮಕ್ಕಳ ಮಾರಾಟ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.  

 ತುಮಕೂರು : ಮಗುವೊಂದರ ಅಪಹರಣ ಪ್ರಕರಣದ ಬೆನ್ನುಬಿದ್ದ ಪೊಲೀಸರು ತುಮಕೂರಲ್ಲಿ ಬಹುದೊಡ್ಡ ಮಕ್ಕಳ ಮಾರಾಟ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಾಗಿ ಅಕ್ರಮ ಸಂಬಂಧದಿಂದ ಹುಟ್ಟುವ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಜಾಲದ ಏಳು ಆರೋಪಿಗಳನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಆರೋಪಿಗಳು ಮಾರಾಟ ಮಾಡಿದ್ದ ಐದು ಮಕ್ಕಳನ್ನೂ ರಕ್ಷಿಸಿದ್ದಾರೆ.

ಸದ್ಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ತುಮಕೂರಿನ ಅಶೋಕ ನಗರದ 2ನೇ ಕ್ರಾಸ್ ನಿವಾಸಿ ಮಹೇಶ್ ಯು.ಡಿ (39), ಹುಳಿಯಾರಿನ ಫಾರ್ಮಾಸಿಸ್ಟ್ ಮೆಹಬೂಬ್ ಷರೀಫ್ (52), ಜಾತ್ರೆಗಳಲ್ಲಿ ಟ್ಯಾಟೂ ಹಾಕುವ ಗುಬ್ಬಿ ತಾಲೂಕಿನ ಬಿಕ್ಕೇಗುಡ್ಡ ಗ್ರಾಮದ ಕೆ.ಎನ್.ರಾಮಕೃಷ್ಣ (53), ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು (45), ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರಿನ ಮುಬಾರಕ್ ಪಾಷ (44), ಮಧುಗಿರಿ ತಾಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿದ್ದ ಪೂರ್ಣಿಮಾ ಎನ್ (39) ಹಾಗೂ ಶಿರಾ ಜ್ಯೋತಿನಗರ ನಿವಾಸಿ ಹಂಗಾಮಿ ನರ್ಸ್ ಸೌಜನ್ಯ (48) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, 50 ಸಾವಿರ ನಗದು, 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಶೋಕ್ ಕೆ.ವಿ. ಮಾಹಿತಿ ನೀಡಿದರು.

ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಬೆಳ್ಳೂರು ಕ್ರಾಸ್‌ನಲ್ಲಿ ರಾಕಿ (11 ತಿಂಗಳ ಗಂಡು ಮಗು), ಹುಳಿಯಾರು ಬಳಿ ಟಿ.ವಿ. ಭಕ್ತಿ (1.6 ವರ್ಷ), ಹಾಸನ ಜಿಲ್ಲೆ ಸಾಣೆಹಳ್ಳಿ ಬಳಿ ಕೃತಿ (1.3 ವರ್ಷ), ಬೆಂಗಳೂರಿನ ಸಿಂಗಾಪುರ ಲೇಔಟ್‌ನಲ್ಲಿದ್ದ ವರ್ಷಿತ್ ಕಿಶನ್ ಆಚಾರ್ಯ (2.6 ವರ್ಷ) ಹಾಗೂ ಮಧುಗಿರಿ ತಾಲೂಕು ಎಸ್.ಎಂ. ಗೊಲ್ಲಹಳ್ಳಿಯಲ್ಲಿ ಮೈಥಿಲಿ (1.3 ವರ್ಷ) ಎಂಬ ಮಕ್ಕಳನ್ನು ಪತ್ತೆ ಮಾಡಿ ರಕ್ಷಿಸಿದ್ದು, ಈ ಪೈಕಿ ಒಂದು ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಉಳಿದ 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ದತ್ತು ಸ್ವೀಕಾರ ಕೇಂದ್ರದಲ್ಲಿರಿಸಲಾಗಿದೆ ಎಂದು ತಿಳಿಸಿದರು.

ಒಟ್ಟು 9 ಮಕ್ಕಳನ್ನು ಆರೋಪಿಗಳು ಇದೇ ರೀತಿ ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಒಂದು ಮಗು ಮೃತಪಟ್ಟಿದ್ದು, ಉಳಿದ ಮೂವರು ಮಕ್ಕಳ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಕಿಡ್ನಾಪ್‌ ಕೇಸ್‌ನಿಂದಾಗಿ ಬೆಳಕಿಗೆ:

ಇದೇ ಜೂ.6 ರಂದು ರಾತ್ರಿ ಗುಬ್ಬಿ ಪಟ್ಟಣದ ಚನ್ನಬಸವೇಶ್ವರ ದೇವಾಲಯದ ಬಳಿ ಮಹಾದೇವಿ ಎಂಬುವರು ತನ್ನ ಕುಟುಂಬದೊಂದಿಗೆ ಮಲಗಿದ್ದಾಗ ಇವರ 11 ತಿಂಗಳ ಗಂಡು ಮಗುವನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದರು. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ಎಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್, ಶಿರಾ ಉಪವಿಭಾಗದ ಡಿವೈಎಸ್ಪಿ ಬಿ.ಕೆ.ಶೇಖರ್, ಗುಬ್ಬಿ ಸಿಪಿಐ ಗೋಪಿನಾಥ್, ಪಿಎಸ್‌ಐ ಸುನೀಲ್‌ ಕುಮಾರ್ ಹಾಗೂ ಸಿಬ್ಬಂದಿ ನವೀನ್‌ಕುಮಾರ್ ವಿಜಯಕುಮಾರ್, ಮಧುಸೂಧನ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ದುಶ್ಯಂತ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಮಗುವನ್ನು ಕಳ್ಳತನ ಮಾಡಿದ್ದ ಗುಬ್ಬಿ ತಾಲೂಕು ಬಿಕ್ಕೇಗುಡ್ಡ ನಿವಾಸಿ ರಾಮಕೃಷ್ಣ ಹಾಗೂ ತುಮಕೂರಿನ ಭಾರತಿ ನಗರದ ವಾಸಿ ಹನುಮಂತರಾಜು ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ನೀಡಿದ ಮಾಹಿತಿಯಂತೆ ಆರೋಪಿ ಮಹೇಶ್‌ನನ್ನು ಬಂಧಿಸಲಾಯಿತು. ಆತನ ವಿಚಾರಣೆ ವೇಳೆ ಮಗುವನ್ನು 1.75 ಲಕ್ಷಕ್ಕೆ ಮಗುವನ್ನು ಬೆಳ್ಳೂರು ಕ್ರಾಸ್ ಮುಬಾರಕ್ ಎಂಬುವರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ಇದೇ ರೀತಿ ಹಲವು ಮಕ್ಕಳನ್ನು ಮಾರಾಟ ಮಾಡಿರುವುದು ತಿಳಿದು ಬಂದಿದೆ. ಹೆಚ್ಚಾಗಿ ಅಕ್ರಮ ಸಂಬಂಧದಿಂದ ಹುಟ್ಟುವ ಮಕ್ಕಳನ್ನು ಇವರು 2 ರಿಂದ 3 ಲಕ್ಷ ರು. ವರೆಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಸಂಬಂಧ ಆರೋಪಿಗಳಿಂದ ಮಕ್ಕಳನ್ನು ಹಣ ಕೊಟ್ಟು ಖರೀದಿಸಿದವರನ್ನೂ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಸಹಕರಿಸಿರುವ ಬಂಧಿತ ಆರೋಪಿ ಮೆಹಬೂಬ್ ಷರೀಫ್ ತನ್ನ ಪತ್ನಿಯ ಹೆಸರಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾನೆ ಎಂದು ಮಾಹಿತಿ ನೀಡಿದರು.

ಆರೋಪಿಗಳಾದ ಮಹೇಶ್‌ ಮತ್ತು ಷರೀಫ್‌ ಸ್ನೇಹಿತರಾಗಿದ್ದು, ಆರೋಪಿ ಮಹೇಶ್‌ ಗರ್ಭಧರಿಸಿದ ಅವಿವಾಹಿತ ಮಹಿಳೆಯರನ್ನು ಗುರುತಿಸಿ ಅವರ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡುತ್ತಿದ್ದ. ಕೆಲ ಪ್ರಕರಣಗಳಲ್ಲಿ ಮಕ್ಕಳ ಅವಶ್ಯಕತೆ ಇರುವ ಮಹಿಳೆಯರನ್ನು ಗರ್ಭವತಿಯಾಗಿದ್ದಾರೆಂದು ಹೇಳಿ ಹುಳಿಯಾರಿನ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸುತ್ತಿದ್ದರು. ಅಲ್ಲಿ ಅಕ್ರಮ ಸಂಬಂಧದಿಂದ ಗರ್ಭವತಿಯಾಗಿರುವ ಯುವತಿಯರಿಗೆ ಹುಟ್ಟುವ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗೆ ನೀಡಿ ನಕಲಿ ಜನನ ದಾಖಲೆ ಸೃಷ್ಟಿಸುತ್ತಿದ್ದರು ಎಂದು ಹೇ‍ಳಲಾಗಿದೆ.

Share this article