ಯಾದಗಿರಿಯಲ್ಲಿ ಬಾಲ್ಯ ವಿವಾಹ ಶೇ.33ಕ್ಕೇರಿಕೆ!

KannadaprabhaNewsNetwork |  
Published : Jul 20, 2026, 12:45 AM IST
Yadgir

ಸಾರಾಂಶ

ಜಿಲ್ಲೆಯಲ್ಲಿ ದಾಖಲಾದ ಗರ್ಭಪಾತಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಸಾಕ್ಷ್ಯಾಧಾರಿತ ವಿಚಾರಣೆಯನ್ನು ನಡೆಸಲು ರಚಿಸಿದ ರಾಜ್ಯ ಮಟ್ಟದ ಬಹುಶಿಸ್ತೀಯ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿನ ಅಂಶಗಳು ಆಘಾತ ಮೂಡಿಸುತ್ತವೆ.

ಆನಂದ್‌ ಎಂ.ಸೌದಿ

 ಯಾದಗಿರಿ :  ಜಿಲ್ಲೆಯಲ್ಲಿ ದಾಖಲಾದ ಗರ್ಭಪಾತಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಸಾಕ್ಷ್ಯಾಧಾರಿತ ವಿಚಾರಣೆಯನ್ನು ನಡೆಸಲು ರಚಿಸಿದ ರಾಜ್ಯ ಮಟ್ಟದ ಬಹುಶಿಸ್ತೀಯ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿನ ಅಂಶಗಳು ಆಘಾತ ಮೂಡಿಸುತ್ತವೆ.

ಅಂಕಿ-ಅಂಶಗಳ ಪ್ರಕಾರ, ಯಾದಗಿರಿಯಲ್ಲಿ 20ರಿಂದ 24 ವರ್ಷದ ಒಳಗಿನ ಮಹಿಳೆಯರಲ್ಲಿ ಶೇಕಡಾ 33.2ರಷ್ಟು ಮಹಿಳೆಯರಿಗೆ 18 ವರ್ಷ ತುಂಬುವ ಮುಂಚೆಯೇ ವಿವಾಹವಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹಗಳು ಹಾಗೂ ಬಾಲ ಗರ್ಭಿಣಿಯರ ವಯಸ್ಸಿನ ನಿಖರತೆ ಮರೆಮಾಚಲು ಹುಟ್ಟಿದ ದಿನಾಂಕದ ನಕಲಿ ನಮೂದು ಮಾಡಲಾಗುತ್ತಿದೆ. ಗರ್ಭಿಣಿಯರ ಹುಟ್ಟಿದ ದಿನಾಂಕದ ದಾಖಲೆಗಳಲ್ಲಿ ಜನವರಿ 1 (1/1/ವರ್ಷ) ಎಂದು ನಕಲಿ ದಿನಾಂಕವನ್ನು ನಮೂದಿಸಿರುವ ಪ್ರಕರಣಗಳ ಪ್ರಮಾಣವು 2021-22ರಲ್ಲಿ ಶೇಕಡ 14.4ರಷ್ಟಿತ್ತು. 2023-24 ಮತ್ತು 2024-25ರ ವೇಳೆಗೆ ಶೇ.31ಕ್ಕೇರಿದೆ. ಅಂದರೆ ಸರಿಸುಮಾರು ದುಪ್ಪಟ್ಟಾಗಿದೆ, ಇದು ವಯಸ್ಸಿನ ನಿಖರತೆಯನ್ನು ಮರೆಮಾಚುತ್ತದೆ.

ಗರ್ಭಪಾತದ ಪ್ರಮಾಣದಲ್ಲಿ ತೀವ್ರ ಏರಿಕೆ:

ಅಧಿಕೃತವಾಗಿ ದಾಖಲಾದ ಗರ್ಭಪಾತಗಳ ಸಂಖ್ಯೆಯು ಕೇವಲ ಒಂದೇ ವರ್ಷದಲ್ಲಿ ಶೇಕಡಾ 88.6ರಷ್ಟು ಭಾರಿ ಏರಿಕೆ ಕಂಡಿದ್ದು, 2023-24ರಲ್ಲಿ 673 ಇದ್ದ ಪ್ರಕರಣಗಳು 2024-25ರ ವೇಳೆಗೆ 1,269ಕ್ಕೆ ತಲುಪಿವೆ. ಗರ್ಭಪಾತದ ಈ ದರವು ಶೇ.2.76ರಿಂದ ಶೇ.4.41ಕ್ಕೆ ಜಿಗಿದಿದೆ. ಜಿಲ್ಲೆಯಾದ್ಯಂತ ಲಭ್ಯವಿರುವ 2025-26ರ ದತ್ತಾಂಶದ ಪ್ರಕಾರ, ದಾಖಲಾದ ಒಟ್ಟು ಗರ್ಭಪಾತಗಳಲ್ಲಿ ಶೇಕಡ 18.9ರಷ್ಟು (123/652) ಗರ್ಭಪಾತಗಳು ಈಗಾಗಲೇ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳನ್ನು ಹೊಂದಿರುವ ಮಹಿಳೆಯರಲ್ಲಿ ನಡೆದಿವೆ. ಜಿಲ್ಲೆಯ ಅಧಿಕೃತ ದಾಖಲೆಗಳ ಪ್ರಕಾರ 372 ಗರ್ಭಪಾತಗಳು ಜಿಲ್ಲೆಯಿಂದ ಹೊರಗೆ ನಡೆದಿರುವುದು ದಾಖಲಾಗಿದೆ.

2025-26ರ ಭಾಗಶಃ ವರ್ಷದ ಅಂಕಿ-ಅಂಶಗಳ ಪ್ರಕಾರ ಈಗಾಗಲೇ 786 ಗರ್ಭಪಾತಗಳು ದಾಖಲಾಗಿದ್ದು, ಇದನ್ನು ಇಡೀ ವರ್ಷಕ್ಕೆ ಅನ್ವಯಿಸಿ ಲೆಕ್ಕ ಹಾಕಿದರೆ ವರ್ಷದ ಕೊನೆಗೆ ಈ ಸಂಖ್ಯೆ ಸುಮಾರು 1,000 ತಲುಪುವ ಸಾಧ್ಯತೆಯಿದೆ. ಇದು ಗರ್ಭಪಾತದ ಈ ಹೆಚ್ಚಿನ ದರವು ನಿರಂತರವಾಗಿ ಮುಂದುವರಿಯುತ್ತಿರುವುದನ್ನು ಸೂಚಿಸುತ್ತದೆ.

ಯಾದಗಿರಿ ಜಿಲ್ಲೆಯಾದ್ಯಂತ ಗಣನೀಯ ಪ್ರಮಾಣದಲ್ಲಿ ಲಿಂಗ ತಾರತಮ್ಯ

ಯಾದಗಿರಿ ಜಿಲ್ಲೆಯಾದ್ಯಂತ ಗಣನೀಯ ಪ್ರಮಾಣದಲ್ಲಿ ಲಿಂಗ ತಾರತಮ್ಯದ ಆಧಾರಿತ ಭ್ರೂಣ ಹತ್ಯೆ ನಡೆಯುತ್ತಿದೆ. ಇದು ವಿಶೇಷವಾಗಿ ಈಗಾಗಲೇ ಮೂರು ಅಥವಾ ಅದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬಗಳಲ್ಲಿ ಕೇಂದ್ರೀಕೃತವಾಗಿದೆ. ಅಲ್ಲದೆ, ಇವು ಸರ್ಕಾರದ ನಿಗಾ ವ್ಯವಸ್ಥೆಯ ಕಣ್ಣಿಗೆ ಬೀಳದಂತೆ, ನೆರೆಯ ಜಿಲ್ಲೆ ಹಾಗೂ ವಿವಿಧೆಡೆ ಖಾಸಗಿ ಆಸ್ಪತ್ರೆಗಳ ಮೂಲಕ ಅತ್ಯಂತ ರಹಸ್ಯವಾಗಿ ನಡೆಯುತ್ತಿವೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜನರ ಗುಳೆ ತಪ್ಪಿಸಲು ಜಿರಾಮ್‌ಜಿ ಅಡಿ ನೌಕರಿ ಕೊಡಿ
ಗೃಹಲಕ್ಷ್ಮಿ ಫಲಾನುಭವಿಗಳ ಪುನರ್‌ ಪರಿಶೀಲನೆಗೆ ಸಂಪುಟ ನಿರ್ಧಾರ