ಶಾಲೆಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ ಕಡ್ಡಾಯ: ತಿಪ್ಪೇಸ್ವಾಮಿ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಸರ್ಕಾರಿ, ಖಾಸಗಿ ಎಲ್ಲಾ ಶಾಲೆಗಳಲ್ಲೂ ಮಕ್ಕಳ ಸುರಕ್ಷತಾ ಸಮಿತಿ ರಚನೆ ಕಡ್ಡಾಯವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಮಕ್ಕಳ ರಕ್ಷಣಾ ನೀತಿ 2016 ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳು ಪ್ರಯತ್ನಿಸಿಬೇಕು, ಸರ್ಕಾರಿ, ಖಾಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಡಿ ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚನೆ ಮಾಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು.

ತಾಲೂಕಿನ ಮೆಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ, ಪೋಲಿಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಸಂಭಂಧಪಟ್ಟಂತೆ ಯಾವೆಲ್ಲಾ ಕೆಲಸ ಕಾರ್ಯಗಳು ಆಗುತ್ತಿವೆ, ಕಾಯ್ದೆಗಳು ಮಕ್ಕಳ ಪರವಾಗಿ ಫೋಕ್ಸ್ ಕಾಯ್ದೆ, ಆರ್‌ಟಿಇ ಕಾಯ್ದೆ ಸೇರಿದಂತೆ ಇನ್ನಿತರ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯ ಬಗ್ಗೆ ಆ.1ರಂದು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಲಾಗಿತ್ತು, ಆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದಂತೆ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಹೇಗೆ ಅನುಷ್ಠಾನವಾಗುತ್ತಿದೆ ಎಂಬುದರ ಬಗ್ಗೆ ಪರಿಶೀಲಿಸಲು ಶುಕ್ರವಾರದಿಂದ ತುಮಕೂರು ಜಿಲ್ಲೆಯ ಶಿರಾ, ಪಾವಗಡ, ಕೊರಟಗೆರೆ ತಾಲೂಕಿನಲ್ಲಿ ಪ್ರವಾಸವನ್ನು ನಡೆಸಿದೆ. ಈ ವೇಳೆಯಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

ಮಕ್ಕಳ ರಕ್ಷಣಾ ನೀತಿ ಅನುಷ್ಠಾನದ ಕಾರ್ಯಸೂಚಿಗಳನ್ನು ಈಗಾಗಲೇ ಹೊರಡಿಸಲಾಗಿದೆ, ಪ್ರತಿ ಶಾಲೆಗಳಲ್ಲೂ ಮಕ್ಕಳ ಸುರಕ್ಷತಾ ಸಮಿತಿ, ಮಕ್ಕಳ ಸಹಾಯ ಗುಂಪು ರಚನೆ ಮಾಡಬೇಕು. ಮಕ್ಕಳು ದೂರುಗಳನ್ನು ಸಲ್ಲಿಸಲು ದೂರು ಪೆಟ್ಟಿಗೆಗಳನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಇಡಬೇಕು. ಎಲ್ಲಾ ಖಾಸಗಿ ಶಾಲೆಗಳ ಆರಂಭಕ್ಕೂ ಮುನ್ನಾ ಆಡಳಿತ ಮಂಡಳಿಗಳು ಮಕ್ಕಳ ರಕ್ಷಣಾ ಬದ್ಧತೆ ಪತ್ರಕ್ಕೆ ಸಹಿಯನ್ನು ಕಡ್ಡಾಯವಾಗಿ ಹಾಕಬೇಕು, ಮುಂದಿನ ಸಭೆಯಲ್ಲಿ ಇಂದು ಚರ್ಚಿಸಲಾದ ವಿಷಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದು ನಿರಂತರ ಪ್ರಗತಿ ಪರಿಶೀಲನಾ ಸಭೆ ನಡೆಸುವುದು ಅಷ್ಟೇ ಮುಖ್ಯ, ತಾಲೂಕು ಆಡಳಿತವು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಹೆಚ್ಚಿನ ಬದ್ಧತೆಯನ್ನು ತೋರಬೇಕು,

ಇತ್ತೀಚಿಗೆ ರಾಜ್ಯ ಸರ್ಕಾರ ಮಕ್ಕಳ ಸ್ನೇಹಿಯಾದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ, ಪಂಚಾಯತ್ ರಾಜ್ ಇಲಾಖೆಯು ನ.14 ರಿಂದ ಜ.24ರವರೆಗೆ ಮಕ್ಕಳಿಗೆ ಸ್ಪಂದಿಸುವ ಗ್ರಾಪಂ ಅಭಿಯಾನ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ, ಅನೇಕ ಸುತ್ತೋಲೆಗಳು ಬಂದರೂ ಕೂಡ ತಳಮಟ್ಟದ ಅಧಿಕಾರಿಗಳು ಅನುಷ್ಠಾನ ಗೊಳಿಸದೆ ಹೋದರೆ ಸುತ್ತೋಲೆಗಷ್ಟೇ ಸೀಮಿತಿವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ್, ತಾ.ಪಂ ಇಒ ಅಪೂರ್ವಾ, ಸಿಪಿಐ ಸುರೇಶ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನುಷಾ, ಜಿಲ್ಲಾ ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರಾ, ಸಿಡಿಪಿಒ ಅಂಬಿಕಾ, ವಲಯ ಅರಣ್ಯಾಧಿಕಾರಿ ರವಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.ಸಾರಿಗೆ ಇಲಾಖೆ ಬಸ್‌ಗಳ ಸಂಖೈ ಹೆಚ್ಚಿಸಬೇಕು:

ರಾಜ್ಯದಲ್ಲಿ ಗ್ರಾಮೀಣ ಭಾಗದ ಸಾರಿಗೆ ಬಸ್ ಸಂಪರ್ಕವಿಲ್ಲದೆ ಮಕ್ಕಳು ಬಸ್‌ಗಾಗಿ ಪರದಾಡುತ್ತಿರುವುದು ಜೊತೆಗೆ ಕಡಿಮೆ ಬಸ್ ಸಂಪರ್ಕ ಇರುವ ಪ್ರದೇಶಗಳಲ್ಲಿ ಬಸ್‌ನಿಂದ ಮಕ್ಕಳ ಗಾಯಗೊಂಡು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಸುಮುಟೋ ಕೇಸ್ ದಾಖಲಿಸಿದ್ದೇವೆ, ಕೊರಟಗೆರೆ ತಾಲೂಕಿನ ಗ್ರಾಮೀಣ ಮಕ್ಕಳು ಕೂಡ ಬಸ್ಸಿನ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಂತೆ ತಿಳಿಸಿದ್ದೇವೆ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ:

ಆಕಸ್ಮಿಕವಾಗಿ ಬೆಳಿಗ್ಗೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಕ್ಕಳ ವಾರ್ಡ್ ಪರಿಶೀಲನೆಯ ನಂತರ ಎನ್‌ಆರ್‌ಸಿ ವಾರ್ಡ್‌ಗೆ ಹೋದಾಗ ಬೀಗ ಹಾಕಿತ್ತು, ನಂತರ ಓಪನ್ ಮಾಡಸಿ ನೋಡಿದರೆ ದೂಳು ತುಂಬಿಕೊಂಡಿದ್ದನ್ನು ಕಂಡು ಸ್ಥಳದಲ್ಲೇ ತನಿಖಾಧಿಕಾರಿಗೆ ವಾರ್ಡ್‌ನ್ನು ಶುಚಿ ಮಾಡುವಂತೆ ತಿಳಿಸಿದ್ದು, ಬಾಣಂತಿಯರ ವಾರ್ಡ್‌ಗೂ ಹೋದ ವೇಳೆ ಬಿಸಿ ನೀರಿನ ವ್ಯವಸ್ಥೆ ಇಲ್ಲಾ ಎಂದು ಬಾಣಂತಿಯರು ಹೇಳಿದ ಕೂಡಲೇ ಇದರ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗೆ ತಿಳಿಸಲಾಗಿದೆ ಎಂದು ಹೇಳಿದರು.

Share this article