ಕನ್ನಡಪ್ರಭ ವಾರ್ತೆ ಮಂಗಳೂರು
ಮಗುವಿನ ಕಳ್ಳಸಾಗಣೆ ಪ್ರಕರಣ ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ (ವಿಶೇಷ) ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನಾಲ್ವರು ಅಪರಾಧಿಗಳಿಗೆ ೧೦ ವರ್ಷಗಳ ಕಠಿಣ ಸಜೆ ಹಾಗೂ ಅಪರಾಗಳಿಗೆ ತಲಾ ೫ ಸಾವಿರ ರು. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.ಪಜೀರು ಸರ್ಕದಬೈಲು ನಿವಾಸಿಗಳಾದ ಲಿನೆಟ್ ವೇಗಸ್ (೩೮), ಬಾದಾಮಿ ನಿವಾಸಿ ರಂಗವ್ವ ಯಾನೆ ಗೀತಾ(೪೫), ಜೊಸ್ಸಿ ವೇಗಸ್ (೫೮), ಜೊಸ್ಸಿಯ ತಾಯಿ ಲೂಸಿವೇಗಸ್ (೬೫) ಶಿಕ್ಷೆಗೊಳಗಾದ ಅಪರಾಗಳು. ಇವರಲ್ಲಿ ಆರೋಪಿ ರಂಗವ್ವ ಅನಾರೋಗ್ಯದಿಂದ ಕೆಲವು ವರ್ಷದ ಹಿಂದೆ ಮೃತಪಟ್ಟಿದ್ದಾರೆ.ಉತ್ತರ ಕರ್ನಾಟಕ ನಿವಾಸಿಯಾಗಿರುವ ರಂಗವ್ವ ಮತ್ತು ಆತನ ಗಂಡ ಪಜೀರಿನ ಕಲ್ಲಿನ ಕೋರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಂಗವ್ವನ ನಾಲ್ಕನೇ ಮಗುವಿನ ತಾಯಿಯಾಗುವ ಬಗ್ಗೆ ಮಾಹಿತಿ ಪಡೆದ ಲಿನೆಟ್ ವೇಗಸ್ ಆಕೆಯನ್ನು ಭೇಟಿಯಾಗಿ ಮಗುವನ್ನು ಮಾರಾಟ ಮಾಡಿದರೆ ಹಣ ನೀಡುತ್ತೇನೆ, ನಿಮ್ಮ ಮಗು ದುಬಾಯಿಯ ಒಳ್ಳೆಯ ಕುಟುಂಬ ಸೇರಲಿದೆ ಎಂದು ಆಮಿಷ ಒಡ್ಡಿದ್ದಳು. ಇದಕ್ಕೆ ರಂಗವ್ವ ಒಪ್ಪಿಗೆ ನೀಡಿದ್ದು, ಕೆಲವು ಸಮಯದ ನಂತರ ಮಗುವಿನ ಜನನವೂ ಆಗಿತ್ತು. ಎರಡೂವರೆ ವರ್ಷದ ಮಗುವನ್ನು ಲಿನೆಟ್ ವೇಗಸ್ ತನ್ನ ಮನೆಗೆ ಕೊಂಡೊಯ್ದು ಸಾಕುತ್ತಿದ್ದಳು.ಪ್ರಕರಣದ ೪ನೇ ಆರೋಪಿ, ಜೊಸ್ಸಿಯ ತಾಯಿ ಲೂಸಿವೇಗಸ್ ಪಜೀರು ಅಂಗನವಾಡಿ ಶಿಕ್ಷಕಿ ರೆಹಾನಾ ಬಳಿ ಹೋಗಿ ಮಗುವಿಗೆ ಆಧಾರ್ ಕಾರ್ಡ್ ದಾಖಲೆ ಮಾಡಿಸಿಕೊಡುವಂತೆ ಹೇಳಿದ್ದಳು. ಈ ಬಗ್ಗೆ ಅನುಮಾನಗೊಂಡ ರೆಹಾನಾ ಅವರು ಚೈಲ್ಡ್ ಲೈನ್ ಗಮನಕ್ಕೆ ತರುತ್ತಾರೆ.ಮಕ್ಕಳ ಕಳ್ಳಸಾಗಾಣಿಕೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಯೋಜನೆ ರೂಪಿಸಿ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಮತ್ತು ಇಕ್ಬಾಲ್ ಅವರು ಮಗುವನ್ನು ಖರೀದಿಸುವ ದಂಪತಿಗಳಾಗಿ ನಟಿಸಲು ನಿರ್ಧರಿಸುತ್ತಾರೆ. ವಿದ್ಯಾ ದಿನಕರ್ ಅವರು ಜೋಹ್ರಾ ಎಂದು ಪರಿಚಯಿಸಿ ಲೆನೆಟ್ ಜತೆ ಸುಮಾರು ೩ ಸುತ್ತು ಮಾತುಕತೆ ನಡೆಸಿ ಮಗುವನ್ನು ಖರೀದಿಸುವ ನಟನೆ ಮಾಡುತ್ತಾರೆ. ಅದರಂತೆ ಲಿನೆಟ್ ಮತ್ತು ರಂಗವ್ವ ೨೦೧೩ರ ಜು.೨೬ರಂದು ಸಂಜೆ ೬.೩೦ಕ್ಕೆ ಜೊಸ್ಸಿ ವೇಗಸ್ ಜತೆಗೆ ತೊಕ್ಕೊಟ್ಟಿನ ಚಿಲ್ಡ್ರನ್ ಕ್ಲಿನಿಕ್‌ಗೆ ಮಗುವನ್ನು ಹಿಡಿದುಕೊಂಡು ಬರುತ್ತಾರೆ. ಆರೋಪಿ ಲಿನೆಟ್ ವಿದ್ಯಾ ದಿನಕರ್ ಮೂಲಕ ೯೦ ಸಾವಿರ ರು.ಗೆ ರಂಗವ್ವಗೆ ಕೊಟ್ಟು ಮಗುವಿನ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ. ಈ ಸಂದರ್ಭ ಚೈಲ್ಡ್ ಲೈನ್ ಸಿಬ್ಬಂದಿ, ಸಿಸಿಬಿ ಮತ್ತು ಉಳ್ಳಾಲ ಪೊಲೀಸರು ಸಿನಿಮೀಯ ಶೈಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಈ ವೇಳೆ ೯೪,೩೨೫ ರು. ಮತ್ತು ೫ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಚೈಲ್ಡ್ ಲೈನ್ ಅಸುಂತಾ ಡಿಸೋಜಾ ಅವರ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.ಈಗ ಮಗು ಎಲ್ಲಿ?:
ಆರೋಪಿಗಳ ಬಂಧನ ಬಳಿಕ ಮಗುವನ್ನು ಮಕ್ಕಳ ರಕ್ಷಣಾ ಸಮಿತಿ (ಸಿಡಬ್ಲ್ಯುಸಿ) ಸುಪರ್ದಿಗೆ ನೀಡಲಾಗಿತ್ತು. ಆದರೆ ಈಗ ಮಗು ಎಲ್ಲಿದೆ? ಯಾರ ಸುಪರ್ದಿಯಲ್ಲಿದೆ? ಅಥವಾ ಮತ್ತೆ ಕಳ್ಳಸಾಗಾಣಿಕೆಗೆ ಒಳಗಾಗಿದೆಯೇ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮಗುವನ್ನು ಸಿಡಬ್ಲ್ಯುಸಿ ಸ್ವೀಕರಿಸಿದ ಬಳಿಕ ಮಠವೊಂದಕ್ಕೆ ಮಕ್ಕಳ ದತ್ತು ಕೇಂದ್ರಕ್ಕೆ ನೀಡಲಾಗಿತ್ತು. ಇದಾದ ಕೆಲವು ಸಮಯದ ಬಳಿಕ ತಾಯಿ ರಂಗವ್ವಳಿಗೆ ಜಾಮೀನು ಸಿಕ್ಕಿದ್ದು, ಆಕೆಯ ಬೇಡಿಕೆಯಂತೆ ಸಿಡಬ್ಲ್ಯುಸಿ ಮತ್ತೆ ಆರೋಪಿ ಕೈಗೆ ಮಗುವನ್ನು ನೀಡಿತ್ತು. ಆದರೆ ಈಗ ಮಗುವಿನ ಬಗ್ಗೆ ಯಾವುದೇ ಮಾಹಿತಿ ಯಾರ ಬಳಿಯೂ ಇಲ್ಲ. ಇದರಲ್ಲಿ ಸಿಡ್ಲ್ಯುಸಿ ನಿರ್ಲಕ್ಷ್ಯ ಸಾಬೀತಾಗಿದೆ.