ಬಿಸಿಲ ಝಳಕ್ಕೆ ಅಂಗನವಾಡಿಯಲ್ಲಿ ಕುದಿಯುತ್ತಿವೆ ಕಂದಮ್ಮಗಳು

KannadaprabhaNewsNetwork | Published : Apr 4, 2025 12:47 AM

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನ ಸೂರ್ಯ ತನ್ನ ಪ್ರಖರತೆಯಿಂದ ಕೊತ ಕೊತ ಕುದಿಯುವಂತೆ ಮಾಡಿರುತ್ತಾನೆ. ಹೀಗಾಗಿ, ಸರ್ಕಾರ ಈ ಭಾಗ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಮತ್ತು ಶಾಲಾ ಸಮಯವನ್ನು ಬೆಳಗ್ಗೆ 8ಕ್ಕೆ ಪ್ರಾರಂಭಿಸಿ ಮಧ್ಯಾಹ್ನ 1.30ಕ್ಕೆ ಬಂದ್ ಮಾಡುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನಲೆ ಸರ್ಕಾರಿ ಕಚೇರಿ ಮತ್ತು ಶಾಲೆಗಳ ಸಮಯ ಬದಲಾವಣೆ ಮಾಡಲಾಗಿದೆ. ಆದರೆ, ಪುಟಾಣಿ ಕಂದಮ್ಮಗಳು ಇರುವ ಅಂಗನವಾಡಿಗಳ ಸಮಯದ ಬದಲಾವಣೆ ಮಾಡದೆ ಇರುವುದು ವ್ಯಾಪಕ ಟೀಕಿಗೆ ಗುರಿಯಾಗಿದೆ.

ಕಚೇರಿಗೆ ಹೋಗುವ ಅಮ್ಮ, ಅಪ್ಪ, ಶಾಲೆಗೆ ಹೋಗುವ ಅಣ್ಣಂದಿರು, ಅಕ್ಕಂದಿರು ಸಹ ಮಧ್ಯಾಹ್ನಕ್ಕೆ ಮನೆಗೆ ಬರುತ್ತಾರೆ. ಆದರೆ, ನಾವೇನು ಮಾಡಿದ್ದೇವೆ, ನಮ್ಮ ಅಂಗನವಾಡಿ ಸಮಯ ಏಕೆ ಬದಲಾವಣೆ ಮಾಡಿಲ್ಲ ಎಂದು ಪುಟಾಣಿಗಳು ಪ್ರಶ್ನಿಸುವಂತೆ ಆಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಧ್ಯಾಹ್ನ ಸೂರ್ಯ ತನ್ನ ಪ್ರಖರತೆಯಿಂದ ಕೊತ ಕೊತ ಕುದಿಯುವಂತೆ ಮಾಡಿರುತ್ತಾನೆ. ಹೀಗಾಗಿ, ಸರ್ಕಾರ ಈ ಭಾಗ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಮತ್ತು ಶಾಲಾ ಸಮಯವನ್ನು ಬೆಳಗ್ಗೆ 8ಕ್ಕೆ ಪ್ರಾರಂಭಿಸಿ ಮಧ್ಯಾಹ್ನ 1.30ಕ್ಕೆ ಬಂದ್ ಮಾಡುತ್ತಿದ್ದಾರೆ. ಹೀಗಾಗಿ, ಮಧ್ಯಾಹ್ನದ ವೇಳೆಗೆ ಎಲ್ಲರೂ ಸಹ ಮನೆ ಸೇರುತ್ತಾರೆ. ಇನ್ನು ಹೊಲದಲ್ಲಿ ಕೆಲಸ ಮಾಡುವ ಪಾಲಕರು ಸಹ ಮಧ್ಯಾಹ್ನ 12ಕ್ಕೆ ಮನೆಗೆ ಬರುತ್ತಾರೆ. ಆದರೆ, ಅಂಗನವಾಡಿಗಳು ಮಾತ್ರ ಸಾಮಾನ್ಯ ದಿನಗಳಂತೆಯೇ ಈ ಉರಿ ಬಿಸಿಲನಲ್ಲಿಯೂ ನಡೆಸುತ್ತಿರುವುದರಿಂದ 2.5 ವರ್ಷದಿಂದ 5.5 ವರ್ಷದ ವರೆಗಿನ ಪುಟಾಣಿ ಮಕ್ಕಳು ಈ ಕುದಿಯುವ ಸಮಯದಲ್ಲಿಯೇ ಅಂಗನವಾಡಿಗಳಲ್ಲಿ ಇರಬೇಕಾಗಿದೆ.

ತಗಡಿನ ಶೆಡ್‌:

ಕೆಲವೊಂದು ಅಂಗನವಾಡಿಗಳು ತಗಡಿನ ಶೆಡ್‌ನಲ್ಲಿ ಇರುವುದರಿಂದ ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿರುತ್ತದೆ. ಸನ್ ಸ್ಟ್ರೋಕ್ ಆಗುತ್ತದೆ ಎಂದು ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆದಿರುವ ಸರ್ಕಾರಕ್ಕೆ ಅಂಗನವಾಡಿಗಳಲ್ಲಿ ಮಕ್ಕಳು ಕುದಿಯುತ್ತಿವೆ ಎನ್ನುವ ಪರಿಕಲ್ಪನೆ ಬಾರದೆ ಇರುವುದು ಅಚ್ಚರಿಯಾಗಿದೆ.

ಪ್ರಸ್ತಾವನೆ:

ರಾಜ್ಯಾದ್ಯಂತ ಅಂಗನವಾಡಿ ಮಕ್ಕಳಿಗೆ ಬಿರುಬೇಸಿಗೆಯಿಂದ ಸಮಸ್ಯೆಯಾಗುತ್ತಿದ್ದು ಮಕ್ಕಳಿಗಾಗಿ ಅಂಗನವಾಡಿ ಬೆಳಗ್ಗೆ ನಡೆಸುವುದು ಸೂಕ್ತ. ಹೀಗಾಗಿ, ಸಮಯ ಬದಲಾವಣೆ ಮಾಡುವಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ಸರ್ಕಾರಕ್ಕೆ ಪ್ರಸ್ತಾವನೆಯೂ ಹೋಗಿದೆ. ಸರ್ಕಾರ ಈ ಕಂದಮ್ಮಗಳ ಕುರಿತು ಕರುಣೆ ತೋರಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ಕುಸಿದ ಹಾಜರಾತಿ:

ಬಿಸಿಲಿನ ಝಳಕ್ಕೆ ಈಗಾಗಲೇ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾಗಿ ತೀವ್ರ ಕುಸಿದಿದೆ. ಶೇ. 30ರಿಂದ 40ರಷ್ಟು ಮಕ್ಕಳು ಅಂಗನವಾಡಿಗಳಿಗೆ ಬರುತ್ತಲೇ ಇಲ್ಲ. ಆದರೂ ಸರ್ಕಾರಕ್ಕೆ ಈ ಸಮಸ್ಯೆಯ ತೀವ್ರತೆ ಅರ್ಥವಾಗಿಲ್ಲ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಸಹ ಮಕ್ಕಳನ್ನು ಬಿಸಿಲಿನಲ್ಲಿ ಅಂಗನವಾಡಿಗಳಲ್ಲಿ ಕೂಡಿಸುವುದು ಸರಿಯಲ್ಲ. ದೊಡ್ಡವರಿಗೆ ವಿನಾಯಿತಿ ನೀಡಿರುವ ಸರ್ಕಾರ ಪುಟ್ಟ ಕಂದಮ್ಮಗಳಿಗೆ ವಿನಾಯಿತಿ ನೀಡದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದೆ. ಕೂಡಲೇ ಸರ್ಕಾರ ಈ ದಿಸೆಯಲ್ಲಿ ಕ್ರಮವಹಿಸುವಂತೆ ಕೋರಿದೆ.ಸರ್ಕಾರಿ ಕಚೇರಿ ಮತ್ತು ಶಾಲೆಗಳ ಸಮಯ ಬದಲಾವಣೆ ಮಾಡಿರುವ ಸರ್ಕಾರ ಅಂಗನವಾಡಿಗಳ ಸಮಯ ಬದಲಾವಣೆ ಮಾಡದಿರುವುದು ಸರಿಯಲ್ಲ. ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗಿಂತ ಮೊದಲೇ ಅಂಗಡನವಾಡಿಗಳ ಸಮಯ ಬದಲಾವಣೆ ಮಾಡಬೇಕಾಗಿತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

Share this article