ಕನ್ನಡಪ್ರಭ ವಾರ್ತೆ, ತುಮಕೂರುವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಯಂತ್ರಗಳಾಗಬಾರದು. ಅವರು ಜೀವಂತಿಕೆ ತುಂಬಿರುವ ಸಾಂಸ್ಕೃತಿಕ ಚೈತನ್ಯಗಳಾಗಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೇಳಿದರು.. ನಗರದ ಅಮಾನಿಕೆರೆ ಆವರಣದ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದ್ದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಹಿರಿಯರು ನಾಡಿಗೆ ನೀಡಿದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಪರಿಚಯವನ್ನು ಮಕ್ಕಳು ಮಾಡಿಕೊಳ್ಳಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಮಹತ್ವವನ್ನು ಸಾರುವುದೇ ಈ ಗೋಷ್ಠಿಯ ಮುಖ್ಯ ಉದ್ದೇಶವಾಗಿದೆ ಎಂದರು.ಜಿಲ್ಲೆಯ 10 ತಾಲೂಕುಗಳಿಂದ ಆಯ್ಕೆಯಾದ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಿ ಕನ್ನಡ ನಾಡಿನ ಹಿರಿಮೆಯನ್ನು ಗೋಷ್ಠಿಯಲ್ಲಿ ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಶಿಕ್ಷಣವಲ್ಲದೆ, ಸಾಮಾಜಿಕ ಜ್ಞಾನ ಮತ್ತು ಜೀವನದ ಮೌಲ್ಯಗಳನ್ನು ಕಲಿಸುವ ಸಾಹಿತ್ಯದ ಅವಶ್ಯಕತೆ ಇದೆ ಎಂದರು.ಕನ್ನಡವನ್ನು 9ನೇ ಶತಮಾನದ ಆದಿಕವಿ ಪಂಪನಿಂದ ಹಿಡಿದು ರಾಷ್ಟ್ರಕವಿ ಕುವೆಂಪುವರೆಗೆ ನೂರಾರು ಸಾಹಿತಿಗಳು ಕನ್ನಡವನ್ನು ಬೆಳೆಸಿದ್ದಾರೆ. 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡೆದ ಸಾಹಿತ್ಯ ಕ್ರಾಂತಿಯಲ್ಲಿ ತುಮಕೂರು ಜಿಲ್ಲೆಯವರ ಪಾತ್ರ ದೊಡ್ಡದಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು. ಡಾ. ರಾಜ್‌ಕುಮಾರ್ ಹಾಗೂ ನರಸಿಂಹರಾಜು ಅವರಂತಹ ಶ್ರೇಷ್ಠ ನಟರನ್ನು ಜಗತ್ತಿಗೆ ಪರಿಚಯಿಸಿದ ಡಾ. ಗುಬ್ಬಿ ವೀರಣ್ಣ ಅವರು ನಮ್ಮ ಜಿಲ್ಲೆಯವರು. ನಟಿ ಮಂಜುಳಾ ಮತ್ತು ಉಮಾಶ್ರೀ ಅವರೂ ಜಿಲ್ಲೆಯವರೇ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ನಮ್ಮ ದೈನಂದಿನ ಆಚಾರ-ವಿಚಾರಗಳು, ನಾವು ಆಚರಿಸುವ ಹಬ್ಬ-ಹರಿದಿನಗಳು ಹಾಗೂ ನಮ್ಮ ಸಾಮಾಜಿಕ ಸಂಬಂಧಗಳಲ್ಲಿ ಕನ್ನಡ ಭಾಷೆಯು ಹಾಸುಹೊಕ್ಕಾಗಿದೆ. ನಾವು ತೊಡುವ ಉಡುಗೆ-ತೊಡುಗೆ, ಗ್ರಾಮೀಣ ಕ್ರೀಡೆಗಳು ಹಾಗೂ ವೈವಿಧ್ಯಮಯ ಜನಪದ ಕಲೆಗಳಲ್ಲಿ ನಮ್ಮ ಭಾಷೆಯ ಅಸ್ತಿತ್ವ ಅಡಗಿದೆ. ಭಾಷೆ ಎನ್ನುವುದು ಕೇವಲ ಸಂವಹನ ಮಾಧ್ಯಮವಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದ ಅವರು, ಮಕ್ಕಳ ಮನಸ್ಸಿನಲ್ಲಿ ಕನ್ನಡ ಭಾಷೆಯ ಸಂಸ್ಕಾರ, ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಮೂಡಿಸಿ, ಅವುಗಳ ಬೇರುಗಳು ಗಟ್ಟಿಯಾಗಿ ಇಳಿಯುವಂತೆ ಮಾಡಿದರೆ ಮಾತ್ರ ಭಾಷೆ ಸುಸ್ಥಿರವಾಗಿ ಉಳಿಯಲು ಸಾಧ್ಯ ಎಂದು ಹೇಳಿದರು. ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಡಾ: ಕರೀಗೌಡ ಬೀಚನಹಳ್ಳಿ, ವೃತ್ತಿ ತರಬೇತಿ ನಿಗಮ ಮಂಡಳಿಯ ಅಧ್ಯಕ್ಷ ಮುರುಳಿಧರ ಹಾಲಪ್ಪ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಘುಚಂದ್ರ, ಮಧುಗಿರಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾಧವ ರೆಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.