ಗದಗ: ಮಕ್ಕಳು ಸಾಹಿತ್ಯ ಓದು ಬೆಳೆಸಿಕೊಳ್ಳಬೇಕು, ಇದು ಅವರ ವೈಯಕ್ತಿಕ ಬೆಳವಣಿಗೆಗೆ ಹಾಗೂ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ, ಆ ನಿಟ್ಟಿನಲ್ಲಿ ಬಾಲ ಕವಿಯತ್ರಿ ಪ್ರಣತಿ ಗಡಾದ ಅವರ ಕವನ ಸಂಕಲನ ಇನ್ನಿತರರಿಗೆ ಉತ್ತಮ ಪ್ರೇರಣೆಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.
ಮಳೆಗೆ ಇಳೆಯು ಬೇಕು, ಹಾಗೆ ಇಳೆಗೆ ಮಳೆ ಬೇಕು, ಮಕ್ಕಳ ಸಾಹಿತ್ಯಕ್ಕೆ ಬಹುದೊಡ್ಡ ಇತಿಹಾಸವಿದೆ. ನಾವು ಮಕ್ಕಳ ಸಾಹಿತ್ಯವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ದೊಡ್ಡವರು ಮಕ್ಕಳಿಗಾಗಿ ಬರೆಯುವ ಕವಿತೆಗಳು ಬೇರೆ, ಮಕ್ಕಳೇ ಮಕ್ಕಳಿಗಾಗಿ ಬರೆಯುವುದು ಬೇರೆ. ದೊಡ್ಡವರ ಕವಿತೆಗಳನ್ನು ವಿಮರ್ಶಿಸಬೇಕು, ಆದರೆ ಮಕ್ಕಳ ಕವಿತೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಖ್ಯಾತ ಮಕ್ಕಳ ಕವಿ, ರಾಷ್ಟ್ರ ಪ್ರಶಸ್ತಿ ವಿಜೇತ, ಶಿಕ್ಷಕ ಸಾಹಿತಿ ಡಾ. ನಿಂಗು ಸೊಲಗಿ ನಾನು ಮಳೆಯಾದರೆ ಪುಸ್ತಕ ಕುರಿತು ಮಾತನಾಡಿ, ಮಕ್ಕಳ ಪದ್ಯಗಳಲ್ಲಿ ನಿರೀಕ್ಷಿಸಬಹುದಾದ ಎಲ್ಲ ಧನಾತ್ಮಕ ಅಂಶಗಳು ಇಲ್ಲಿ ಮೂಡಿಬಂದಿದ್ದು, ಅನೇಕ ಪದ್ಯಗಳಲ್ಲಿ ಗೇಯತೆ ಸಹಜವಾಗಿ ಮೂಡಿ ಬಂದಿದೆ. ಜತೆ ಜತೆಗೆ ಪ್ರಾಸಗಳು ಹಾಸುಹೊಕ್ಕಿವೆ. ವಿಷಯಗಳ ಆಯ್ಕೆಯಲ್ಲಿ ವೈವಿಧ್ಯತೆ ಇರುವುದು ಪ್ರಣತಿಯ ಕಾವ್ಯದ ಹೆಚ್ಚುಗಾರಿಕೆ.ನಾನು ಮಳೆಯಾದರೆ... ಕವಿತೆ ತುಂಬಾ ಮೌಲಿಕವಾಗಿ ಮೂಡಿಬಂದಿದ್ದು, ಇದರಲ್ಲಿ ಅನೇಕ ಭಾವನೆಗಳು ಅಡಗಿಕೊಂಡಿವೆ. ಹೂವುಗಳು, ಹೆಂಗ ಇರುತ್ತಿತ್ತು ಅಜ್ಜ, ಒಂದೇ ಒಂದು ದಿನ, ಹಸಿವು, ಹೀಗೇಕೇ ಮೊದಲಾದ ಕವಿತೆಗಳಲ್ಲಿ ಬಂದಿರುವ ಮೌಲ್ಯಗಳು ತುಂಬಾ ಉತ್ಕೃಷ್ಟವಾಗಿದ್ದು, ಇವು ಓದಿದ ಮೇಲೂ ಬಹಳ ಕಾಲದವರೆಗೆ ಕಾಡುವಂತ ಕವಿತೆಗಳಾಗಿವೆ ಎಂದರು.
ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಗದಗ ಮಕ್ಕಳ ಸಾಹಿತ್ಯ ಪರಿಸರದಲ್ಲಿ ಅರಳು ಮೊಗ್ಗು ಎಂದರೆ ಅದು ಪ್ರಣತಿ ಗಡಾದ. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಸಾಧಕಿ ಅವಳಾಗಿದ್ದು, ಆಕೆಯ ಸಾಹಿತ್ಯ ಪಥ ಸುಗಮವಾಗಲಿ ಎಂದರು.ಅಧ್ಯಕ್ಷತೆ ವಹಿಸಿ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಖುಷಿ ಮಡಿವಾಳರ ಪ್ರಾರ್ಥಿಸಿದರು. ನಯನಾ ಶಿರಹಟ್ಟಿ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರಾಜೇಂದ್ರ ಗಡಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಕ್ಷಾ ಪಾಟೀಲ ನಿರೂಪಿಸಿದರು, ದಾನೇಶ್ವರಿ ಭೂಮಾ ವಂದಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಡಿಡಿಪಿಐ ಎಂ.ಎ. ಗಾಂಜಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಅರ್ಜುನ ಗೊಳಸಂಗಿ, ಪ್ರಣತಿ ಗಡಾದ, ಪ್ರೊ. ಚಂದ್ರಶೇಖರ ವಸ್ತ್ರದ, ಡಾ.ನಿಂಗು ಸುಲಗಿ ಅವರನ್ನು ಸನ್ಮಾನಿಸಲಾಯಿತು.