ಮಕ್ಕಳೇ..! ಭಯಮುಕ್ತ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ

KannadaprabhaNewsNetwork | Published : Mar 21, 2025 12:34 AM

ಸಾರಾಂಶ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿರ್ಭಯವಾಗಿ,ನಿರಾತಂಕವಾಗಿ ಪರೀಕ್ಷೆಗಳನ್ನು ಬರೆಯಲು ಪ್ರತಿ ವರ್ಷ ಶಿಕ್ಷಣ ಪ್ರೇಮಿಗಳಾದ ವಿನಾಯಕ ಜೋಶಿ ತಂಡವು ಮಾಳಮಡ್ಡಿಯ ಕೆ.ಇ.ಬೋರ್ಡ್‌ ಶಾಲೆಯ ಬಳಿ ವಿದ್ಯಾರ್ಥಿಗಳಿಗಾಗಿ ರೆಡ್ ಕಾರ್ಪೆಟ್ ದೊಂದಿಗೆ ಸ್ವಾಗತ ಮಾಡುತ್ತದೆ

ಧಾರವಾಡ: ಒಂದು ಸಮಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌ ಬ್ಯಾಂಕ್‌ ಆಗಿದ್ದ ಧಾರವಾಡ ಜಿಲ್ಲೆಯು ಕೆಲವು ವರ್ಷಗಳಿಂದ ಪರೀಕ್ಷಾ ಫಲಿತಾಂಶದಲ್ಲಿ ತುಸು ಹಿನ್ನಡೆ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮಿಶನ್‌ ವಿದ್ಯಾಕಾಶಿ ಹೆಸರಿನಲ್ಲಿ ಫಲಿತಾಂಶ ಸುಧಾರಣೆಗೆ ಭಗೀರಥ ಪ್ರಯತ್ನ ಮಾಡಿದ್ದು, ಇದೀಗ ಮಾ. 21ರಿಂದ ಶುರುವಾಗುವ ಪರೀಕ್ಷೆಯ ಮೂಲಕ ಅದು ಸಾರ್ಥಕವಾಗಬೇಕಿದೆ.

ನಿರಂತರವಾಗಿ 10 ತಿಂಗಳಿಂದ ಮಿಷನ್ ವಿದ್ಯಾಕಾಶಿ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಸಂಜೆ ಪಾಠ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೊಬ್ಬ ಜಾಣನ ಜೋಡು, ಯುನಿಟ್ ಟೆಸ್ಟ್, ಅಭ್ಯಾಸ ಹಾಳೆ, ರೂಢಿ ಪರೀಕ್ಷೆ, ಪಾಸಿಂಗ್ ಪ್ಯಾಕೇಜ್ ಮುಂತಾದ ವಿನೂತನ ಪ್ರಯೋಗ ಮತ್ತು ವಿಶೇಷ ಪ್ರಯತ್ನಗಳ ಮೂಲಕ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಬದಲಾವಣೆ ತರಲಾಗಿದ್ದು, ಇದೀಗ ಪರೀಕ್ಷೆ ಬರೆಯುವ ಮೂಲಕ ಪರೀಕ್ಷಾರ್ಥಿಗಳು ಎಷ್ಟರ ಮಟ್ಟಿಗೆ ಸಾಧನೆ ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಯಾವ್ಯಾವ ಪರೀಕ್ಷೆಗಳು: ಮಾ. 21 ರಿಂದ ಏ. 4ರ ವರೆಗೆ ಈ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ನಡೆಯುತ್ತಿದ್ದು, ಮೊದಲ ದಿನ ಶುಕ್ರವಾರ ಪ್ರಥಮ ಭಾಷೆ, ಮಾ. 24 ರಂದು ಗಣಿತ, ಮಾ. 26 ರಂದು ದ್ವಿತೀಯ ಭಾಷೆ, ಮಾ. 29 ರಂದು ಸಮಾಜ ವಿಜ್ಞಾನ, ಏ.1 ರಂದು ಜೆ.ಟಿ.ಎಸ್.ವಿಷಯಗಳು, ಏ. 2ರಂದು ವಿಜ್ಞಾನ ಹಾಗೂ ಏ. 4ರಂದು ತೃತೀಯ ಭಾಷೆಯ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗೆ ಹುಬ್ಬಳ್ಳಿ ಶಹರ 8,492, ಧಾರವಾಡ ಶಹರ 5,343, ಧಾರವಾಡ ತಾಲೂಕು 3,871, ಹುಬ್ಬಳ್ಳಿ ತಾಲೂಕು 3,828, ಕಲಘಟಗಿ 2,577, ಕುಂದಗೋಳ 2,052 ಹಾಗೂ ನವಲಗುಂದ 2,503 ಸೇರಿದಂತೆ ಒಟ್ಟಾರೆಯಾಗಿ 28,666 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ.

ಪರೀಕ್ಷೆ ಕೇಂದ್ರಗಳಿವು: ಧಾರವಾಡ ಗ್ರಾಮೀಣ ತಾಲೂಕಿನಲ್ಲಿ 16, ಧಾರವಾಡ ಶಹರ ತಾಲೂಕಿನಲ್ಲಿ 16, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 35, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 13, ಕಲಘಟಗಿ ತಾಲೂಕಿನಲ್ಲಿ 9, ಕುಂದಗೋಳ ತಾಲೂಕಿನಲ್ಲಿ 8, ನವಲಗುಂದ ತಾಲೂಕಿನಲ್ಲಿ 9 ಪರೀಕ್ಷಾ ಕೇಂದ್ರಗಳು ಸೇರಿ ಒಟ್ಟು ಜಿಲ್ಲೆಯಾದ್ಯಂತ 106 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಪರೀಕ್ಷೆಗಳನ್ನು ವ್ಯವಸ್ಥಿವಾಗಿ, ಪಾರದರ್ಶಕವಾಗಿ ಜರುಗಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯೂ ಪರೀಕ್ಷೆಗಳ ಲೈವ್ ವೆಬ್‍ಸ್ಟ್ರಿಮಿಂಗ್‍ ನಡೆಯುತ್ತಿದ್ದು, ನಕಲು ಸೇರಿದಂತೆ ಪರೀಕ್ಷಾ ಅಕ್ರಮಗಳು ನಡೆದರೆ ಪತ್ತೆ ಹಚ್ಚಬಹುದು. ಜಿಲ್ಲೆಯಲ್ಲಿ ಒಟ್ಟು 106 ಪರೀಕ್ಷಾ ಕೇಂದ್ರಗಳಿದ್ದು, 1310 ಪರೀಕ್ಷಾ ಕೊಠಡಿಗಳಿವೆ. ಪರೀಕ್ಷಾ ಕೊಠಡಿ, ಮುಖ್ಯ ಪರೀಕ್ಷಕರ ಕೊಠಡಿ, ಕಾರಿಡಾರ್ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳು ಸೇರಿದಂತೆ 1522 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲ 106 ಪರೀಕ್ಷಾ ಕೇಂದ್ರಗಳನ್ನು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರ ವರೆಗೆ ನಿರಂತರವಾಗಿ ನಿಗಾ ವಹಿಸಲು ಅಗತ್ಯ ಸಿಬ್ಬಂದಿಗಳಿಗೆ ತರಬೇತಿ ನೀಡಿ ನೇಮಿಸಲಾಗಿದೆ ಎಂದು ಜಿಪಂ ಸಿಇಓ ಭುವನೇಶ ಪಾಟೀಲ ಪತ್ರಿಕೆಗೆ ಮಾಹಿತಿ ನೀಡಿದರು.

ಮಿಷನ್ ವಿದ್ಯಕಾಶಿಗಾಗಿ ಶಿಕ್ಷಕರು, ಅಧಿಕಾರಿಗಳು ಒಕ್ಕಟ್ಟಿಂದ ನಿರಂತರವಾಗಿ ಪ್ರಯಾಸ ಪಟ್ಟಿದ್ದಾರೆ. ಈಗ ನಿಮ್ಮೆಲ್ಲರ ಭಗೀರಥ ಪ್ರಯತ್ನದ ಸತ್ಯದ ಕ್ಷಣ ಬಂದಿದೆ. ಎದೆ ಬಡಿತ ಜಿಲ್ಲೆಯನ್ನು ಆವರಿಸಿದೆ. ಆದರೆ, ಆತಂಕ ಬೇಡ. ಫಲಿತಾಂಶ ಏನೇ ಆಗಲಿ, ನಿಮ್ಮೆಲ್ಲರ ಪ್ರಯತ್ನ ಎಲ್ಲರಿಂದ ಪ್ರಶಂಸೆ ಪಡೆದಿದೆ. ಬಹುಶಃ ಈ ಬಾರಿಯ ಎಸ್ಸೆಸ್ಲೆಲ್ಸಿ ಫಲಿತಾಂಶದಿಂದ ನೀವೆಲ್ಲ ಈ ಮಿಷನ್ನನ್ನು ಮಿಷನ್ ದಿವ್ಯ ಕಾಶಿ ಎಂದು ಮರು ನಾಮಕರಣ ಮಾಡಬೇಕಾಗುತ್ತದೆ ಎಂದು ಮಿಶನ್‌ ವಿದ್ಯಾಕಾಶಿ ಸಲಹೆಗಾರ ಡಾ.ಎಸ್‌.ಎಂ. ಶಿವಪ್ರಸಾದ ಅಭಿಪ್ರಾಯ ವ್ಯಕ್ತಪಡಿಸಿದರು.

ಪರೀಕ್ಷಾರ್ಥಿಗಳಿಗೆ ರೆಡ್‌ ಕಾರ್ಪೆಟ್‌ ಸ್ವಾಗತ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿರ್ಭಯವಾಗಿ,ನಿರಾತಂಕವಾಗಿ ಪರೀಕ್ಷೆಗಳನ್ನು ಬರೆಯಲು ಪ್ರತಿ ವರ್ಷ ಶಿಕ್ಷಣ ಪ್ರೇಮಿಗಳಾದ ವಿನಾಯಕ ಜೋಶಿ ತಂಡವು ಮಾಳಮಡ್ಡಿಯ ಕೆ.ಇ.ಬೋರ್ಡ್‌ ಶಾಲೆಯ ಬಳಿ ವಿದ್ಯಾರ್ಥಿಗಳಿಗಾಗಿ ರೆಡ್ ಕಾರ್ಪೆಟ್ ದೊಂದಿಗೆ ಸ್ವಾಗತ ಮಾಡುತ್ತದೆ. ಈ ಬಾರಿಯೂ ಪರೀಕ್ಷಾರ್ಥಿಗಳನ್ನು ಬರ ಮಾಡಲು ಗುಲಾಬಿ ಹೂ ಒಂದು ಪೆನ್ನು ಹಾಗೂ ಚಿಕ್ಕಿ (ಸ್ವೀಟ್) ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುವುದು. ಜತೆಗೆ ನಾವೆಲ್ಲರೂ ಮಿಷನ್ ವಿದ್ಯಾಕಾಶಿ ಯಶಸ್ವಿಗೊಳಿಸೋಣ ಎಂದು ಸಂಚಾಲಕ ವಿನಾಯಕ ಜೋಶಿ ತಿಳಿಸಿದ್ದಾರೆ.

ಉಚಿತ ಬಸ್ ಸಂಚಾರಕ್ಕೆ ಅವಕಾಶ

ಪ್ರಸಕ್ತ ಶೈಕ್ಷಣಿಕ ವರ್ಷದ ಮಾ.21 ರಿಂದ ಏ.4ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ನಡೆಯುವ ದಿನಗಳಂದು ವಿದ್ಯಾರ್ಥಿಗಳಿಗೆ ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಪರೀಕ್ಷೆ ಪ್ರವೇಶ ಪತ್ರ ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್ಸಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸಗಳ ಸಂಚಾರ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೋರಿಕೆ ನಿಲ್ಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರಿ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಶೈಕ್ಷಣಿಕ ವೈಭವ ಮತ್ತು ಸಾಧನೆ ಮರು ಸ್ಥಾಪಿಸಲು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ, ಶಿಕ್ಷಣ ಇಲಾಖೆ ಮತ್ತು ತಜ್ಞರು ಈ ವರ್ಷ ವಿಶೇಷ ಪ್ರಯತ್ನ ಮಾಡಿದ್ದಾರೆ. ಮಿಷನ್ ವಿದ್ಯಾಕಾಶಿ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ಭರವಸೆ, ಆತ್ಮ ವಿಶ್ವಾಸ ತುಂಬಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಧಾರವಾಡ ಕಳೆದ ಬಾರಿಗಿಂತ ಈ ಸಲ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ತಿಳಿಸಿದ್ದಾರೆ.

ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಬರುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವಾಗಿದ್ದು, ಖಂಡಿತವಾಗಿ ಅದರ ಸಮೀಪಕ್ಕಾದರೂ ಬರುತ್ತೇವೆ. ಕಳೆದ ಸಲ 23ನೇ ರ್‍ಯಾಂಕ್‌ ನಲ್ಲಿ ಇದ್ದ ನಮ್ಮ ಜಿಲ್ಲೆ ಈ ಸಲ ರಾಜ್ಯದಲ್ಲಿಯೇ ಉತ್ತಮ ಫಲಿತಾಂಶ ಪಡೆಯುತ್ತದೆ. ನನಗೆ ಬಲವಾದ ನಂಬಿಕೆ ಇದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

Share this article