ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಕ್ಕಳ ನಡುವಿನ ಚಿಕ್ಕ ಜಗಳವು ಪೋಷಕರ ನಡುವೆ ದೊಡ್ಡ ಜಗಳವಾಗಿ ಮಾರ್ಪಟ್ಟು ತೌಫಿಕ್(30) ಎಂಬಾತನ ಸಾವಿಗೆ ಕಾರಣವಾದ ಘಟನೆ ನಗರದಲ್ಲಿ ನಡೆದಿದೆ.ತೌಫಿಕ್ ಮತ್ತು ಫರಾನ್ ಎಂಬುವವರ ಮಕ್ಕಳು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಜ್ವರದಿಂದ ಬಳಲುತ್ತಿದ್ದ ತೌಫಿಕ್ ಅವರ ಮಗನ ಮೇಲೆ ಫರಾನ್ ಅವರ ಮಗ ತಣ್ಣೀರು ಸುರಿದಿದ್ದಾನೆ ಎಂಬ ವಿಚಾರದಿಂದ ವಾಗ್ವಾದ ಉಂಟಾಯಿತು. ಇದು ವಿಕೋಪಕ್ಕೆ ತಿರುಗಿ ತೌಫಿಕ್ ಮತ್ತು ಫರಾನ್ ಒಬ್ಬರ ಮೇಲೆ ಒಬ್ಬರು ಹಲ್ಲೆ ನಡೆಸಿದ್ದು, ತೌಫಿಕ್ ಸಾವನ್ನಪ್ಪಿದ್ದಾರೆ.ಘಟನೆ ವಿವರ:
ಆ. 25ರಂದು ತೌಫಿಕ್ ತಮ್ಮ ಮಗನಿಗೆ ಹೋಟೆಲ್‌ನಿಂದ ಇಡ್ಲಿ ತರಲು ಹೋಗಿದ್ದಾಗ ಫರಾನ್ ಎದುರಾಗಿದ್ದಾರೆ. ಈ ವೇಳೆ “ನಿನ್ನ ಮಗನು ನನ್ನ ಮಗನಿಗೆ ಹುಷಾರಿಲ್ಲದ ಸಮಯದಲ್ಲಿ ತಣ್ಣೀರು ಸುರಿದಿದ್ದಾನೆ, ಅವನಿಗೆ ಬುದ್ಧಿ ಹೇಳು " ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಫರಾನ್ ತನ್ನ ಕಡೆಯವರಾದ ಆರ್ಮಿನ್, ಫೈರೋಜ್, ಇರ್ಮಾನ್, ಸಲ್ಮಾನ್, ಆಟೋ ಅಡ್ಡು, ಗೌಸ್, ನೂರ್, ಮುನ್ನ ಎಂಬುವವರನ್ನು ಕರೆತಂದು ತೌಫಿಕ್‌ರ ಮೇಲೆ ಹಲ್ಲೆ ನಡೆಸಿದರು. ಹಲ್ಲೆ ವೇಳೆ ತೌಫಿಕ್ ಮೆಟ್ಟಿಲುಗಳಿಂದ ಬಿದ್ದು ತಲೆಗೆ ಗಂಭೀರ ಗಾಯವಾಯಿತು. ತಕ್ಷಣ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ನಿಮ್ಹಾನ್ಸ್‌ಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ನಿಧನರಾದರು.ಮನೆ ಜಖಂ, ಕಾರಿಗೆ ಬೆಂಕಿ:
ತೌಫಿಕ್‌ರ ಸಾವಿನಿಂದ ರೊಚ್ಚಿಗೆದ್ದ ಸಂಬಂಧಿಕರು ಮತ್ತು ಸ್ನೇಹಿತರು ಫರಾನ್‌ರ ಮನೆಗೆ ದಾಳಿ ಮಾಡಿ ಕಿಟಕಿ ಗಾಜುಗಳನ್ನು ಮುರಿದು, ಕಾರಿಗೆ ಬೆಂಕಿ ಹಚ್ಚಿದ್ದಾರೆ. ಮುಜಾವರ್ ಮೊಹಲ್ಲಾದಲ್ಲಿ ಪರಿಸ್ಥಿತಿ ಉದ್ವಿಘ್ನವಾಗಿದ್ದು, ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.ತೌಫಿಕ್‌ರ ಸಹೋದರ ತನೀರ್ ಅವರು ಫರಾನ್ ಮತ್ತು ಅವನ ತಂಡದವರ ವಿರುದ್ಧ ದೂರು ದಾಖಲಿಸಿದ್ದಾರೆ. ಈವರೆಗೆ 9 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಮಾರಣಾಂತಿಕ ಹಲ್ಲೆ ನಡೆದರೂ, ಕೇಸ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದು, ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕಿಡಿಕಾರಿದ್ದಾರೆ.ಇನ್ಸ್‌ಪೆಕ್ಟರ್ ವಿರುದ್ಧ ಆಕ್ರೋಶ:
ಸ್ಥಳೀಯರು ನಗರಠಾಣೆ ಇನ್ಸ್‌ಪೆಕ್ಟರ್ ರಾಘವೇಂದ್ರ.ಜಿ.ಕೆ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರು ನೀಡಿದರೂ ಕ್ರಮವಿಲ್ಲ. ಬದಲಿಗೆ ಕೌಂಟರ್ ಕೇಸ್ ಹಾಕಿ ಆರೋಪಿಗಳನ್ನು ಬಿಡಲಾಗಿದೆ ಎಂದು ಆರೋಪಿಸಿ, ಬೇಜವಾಬ್ದಾರಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂಬ ಆಗ್ರಹಿಸಿದ್ದಾರೆ.ಘಟನೆ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್, ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಆದರೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
===ಫೊಟೋ: ಮೃತ ತೌಫಿಕ್