ತುಮಕೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ರಚನಾ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಚಾಲನೆ

KannadaprabhaNewsNetwork |  
Published : Sep 03, 2024, 01:50 AM ISTUpdated : Sep 03, 2024, 05:09 AM IST
ಶುಭಕಲ್ಯಾಣ್ | Kannada Prabha

ಸಾರಾಂಶ

ತುಮಕೂರಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ರಚನಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಪರಿಸರದ ಮಹತ್ವವನ್ನು ಎತ್ತಿ ಹಿಡುವ ಈ ಕಾರ್ಯಕ್ರಮದಲ್ಲಿ ಮಕ್ಕಳು ಪರಿಸರ ಸ್ನೇಹಿ ಗಣೇಶನನ್ನು ನಿರ್ಮಿಸುವ ಮೂಲಕ ಪರಿಸರ ಜಾಗೃತಿ ಮೆರೆದರು.

 ತುಮಕೂರು :  ಯಾವುದೇ ವಿಘ್ನ ಎದುರಾಗದಿರಲಿ ಎಂದು ನಾವು ಮೊದಲು ಪ್ರಾರ್ಥಿಸುವುದೇ ಗಣೇಶನನ್ನು. ಗಜಮುಖ ಗಣೇಶನನ್ನು ಕಂಡರೆ ಮಕ್ಕಳಿಗೆ ಅಚ್ಚುಮೆಚ್ಚು. ಪರಿಸರಸ್ನೇಹಿ ಗಣೇಶನನ್ನು ನಿರ್ಮಿಸಿ ಅದನ್ನೇ ಪೂಜಿಸಲಿರುವುದು ವಿಶೇಷವೆನಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.

ನಗರದ ಆಲಮದರ ಪಾರ್ಕ್ ಪ್ರೆಸ್‌ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಹಾಗೂ ಪ್ರೆಸ್ ಕ್ಲಬ್ ತುಮಕೂರು ವತಿಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ರಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಕಾರ್ಯಕ್ರಮವಿರಲಿ, ಖಾಸಗಿ ಕಾರ್ಯಕ್ರಮವಿರಲಿ ವಿಘ್ನ ನಿವಾರಕನಿಗೆ ಮೊದಲ ಪೂಜೆ ಸಲ್ಲುತ್ತದೆ. ಆದಿ ಪೂಜಿತ ಗಣೇಶನಿಗೆ ವಿಶೇಷ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗಣೇಶೋತ್ಸವ ಆಚರಣೆಯಲ್ಲೇ ವಿಶೇಷ ಸಂದೇಶವಿದೆ. ಗಣೇಶನನ್ನು ಮಣ್ಣಿನಿಂದ ತಯಾರಿಸಿ ನೀರಿನಲ್ಲಿ ಬಿಡುತ್ತೇವೆ. ಅಂತೆಯೇ ನಾವು ಸಹ ಪರಿಸರದಿಂದ ಬರುತ್ತೇವೆ ಮತ್ತೆ ಪರಿಸರವನ್ನೇ ಸೇರುತ್ತೇವೆ. ಹಾಗಾಗಿ, ಇದರ ನಡುವೆ ನಮ್ಮಲ್ಲಿ ಮೂಡುವ ಅಹಂಕಾರವನ್ನು ಬಿಡಬೇಕಿದೆ ಎಂದ ಅವರು, ಪ್ರೆಸ್‌ಕ್ಲಬ್ ನವರು ಸಾಮಾಜಿಕ ಕಳಕಳಿಯ ಉತ್ತಮ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಕೈಜೋಡಿಸಿರುವ ಮಕ್ಕಳು ಹಾಗೂ ಪೋಷಕರ ಕಾರ್ಯವು ಮೆಚ್ಚುಗೆ ತರುವಂತದ್ದು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ. ಪ್ರೆಸ್‌ಕ್ಲಬ್ ಹಾಗೂ ವರ್ಣೋದಯ ಆರ್ಟ್ ಗ್ರೂಪ್ ಸಹಯೋಗದಲ್ಲಿ ಇಂತಹ ಕಾರ್ಯಗಳು ಮತ್ತಷ್ಟು ಮೂಡಿಬರಲಿ ಎಂದು ಆಶಿಸಿದರು.

ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕ್ರೀಯಾಶೀಲತೆ ಬರುವುದು ಬಾಹ್ಯ ಪ್ರಪಂಚದಿಂದ. ಪರಿಸರ ಸಂರಕ್ಷಣೆ ಪುಸ್ತಕದಲ್ಲಿದೆ. ಇದರ ಹೊರತಾಗಿಯು ಮಕ್ಕಳಲ್ಲಿ ಅರಿವು ಮೂಡಿಸುವ ಈ ಕಾರ್ಯ ಶ್ಲಾಘನೀಯ. ಭೂಮಿಯ ಮೇಲಿರುವ ಜೀವರಾಶಿಗಳಲ್ಲಿ ಶೇ.82ರಷ್ಟು ಜೀವರಾಶಿಗಳು ಸಸ್ಯವರ್ಗಕ್ಕೆ ಸೇರಿವೆ. ಬ್ಯಾಕ್ಟೀರಿಯಾಗಳು 13 ರಷ್ಟು, ಪ್ರಾಣಿ ಸಂಕುಲ 4 ರಷ್ಟಿದ್ದರೆ ಕೇವಲ 1 ರಷ್ಟು ಮಾನವ ಸಂಕುಲ ಇದೆ. ಆದರೆ, ನಾವು ಪರಿಸರಕ್ಕೆ ಮಾಡುವ ಹಾನಿ ನೋಡುವುದಾದರೆ ಮುಂದಿನ ದಿನಗಳಲ್ಲಿ ನಾವು ಪರಿಸರ ಉಳಿಸುತ್ತೇವೆಯೇ ಎಂಬ ಆಂತಕ ಮೂಡುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸಿತ್ತು. ನಮಗೆ ವರ್ಷದ ಎರಡು ಮೂರು ಹಬ್ಬಗಳಲ್ಲಿ ಗಣೇಶ ಹಬ್ಬ ಅಚ್ಚುಮೆಚ್ಚು. ಮಕ್ಕಳೇ ಮಣ್ಣಿನಲ್ಲಿ ಗಣಪನನ್ನು ಮಾಡುವ ಕಾರ್ಯ ಪರಿಸರ ಜಾಗೃತಿ ಜತೆಗೆ ಪರಿಸರ ಉಳಿಸುವ ಸಂದೇಶವನ್ನು ನೀಡಿದೆ ಎಂದು ಹೇಳಿದರು.

ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ನ ಅಧ್ಯಕ್ಷ ಕಿಶೋರ್ ಕುಮಾರ್, ಪ್ರೆಸ್‌ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು, ಖಜಾಂಚಿ ಆರ್.ಸಂಗಮೇಶ್, ಸತೀಶ್ ಶಾಸ್ತ್ರಿ, ದಾದಾಪೀರ್, ವರ್ಣೋದಯ ಟಸ್ಟ್‌ ನ ಹರ್ಷ ಹರಿಯೆಬ್ಬೆ, ಸಿ.ಭಾನುಪ್ರಕಾಶ್, ಜಿ.ಅರುಣ್, ಆರ್.ಭರತ್, ಸಿ.ಬಸವರಾಜು, ಸಿದ್ದೇಶಗೌಡ, ಉಮಾಮಹೇಶ್, ಅಚ್ಚುತಾನಂದ, ಅಶೋಕ್, ಅಚ್ಚುತಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ