ರೋಣ: ಪರೀಕ್ಷಾ ದೃಷ್ಟಿಯಿಂದ ಮಕ್ಕಳು ಕೇವಲ ಅಂಕ ಗಳಿಸುವುದೇ ಶಿಕ್ಷಣವಾಗದೇ, ಮೌಲ್ಯಯುತ ವ್ಯಕ್ತಿತ್ವ ನಿರ್ಮಿಸುವಲ್ಲಿ ನೈತಿಕ ಶಿಕ್ಷಣ ಅತೀ ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಶರಣರ ಶಿಕ್ಷಣ ಸಂಸ್ಥೆಯ ನ್ಯೂ ಲಿಟಲ್ ಫ್ಲಾವರ್ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ಶರಣರ ಶಿಕ್ಷಣ ಸಮಿತಿ ಬೆಳ್ಳಿ ಮಹೋತ್ಸವ ಹಾಗೂ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನದ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಮೂಲಭೂತ ವ್ಯವಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಉದ್ದೇಶವಿದೆ. ಶಿಕ್ಷಣ ಸಂಸ್ಥೆಗಳಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಮಕ್ಕಳಿಗೆ ಸಂಸ್ಕಾರ ಬಹಳ ಮುಖ್ಯವಾಗಿದೆ. ಕೇವಲ ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವುದು ಮಾತ್ರ ಗುಣಮಟ್ಟದ ಶಿಕ್ಷಣವಲ್ಲ. ಗುಣಮಟ್ಟದ ಶಿಕ್ಷಣವೆಂದರೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವುದು ಹಾಗೂ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದು ಮುಖ್ಯವಾಗಿರುತ್ತದೆ. ಈ ದಿಶೆಯಲ್ಲಿ ಶರಣರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು, ಸಾನಿಧ್ಯ ವಹಿಸಿದ್ದ ಬಳಗಾನೂರ ಶಿವಶಾಂತವೀರ ಶರಣರು ಮಾತನಾಡಿ, ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ಸರ್ವಾಂಗೀಣ ಪ್ರಗತಿಗೆ ನ್ಯೂ ಲಿಟಲ್ ಫ್ಲಾವರ್ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಶಿಕ್ಷಕರು ಅವಿರತ ಶ್ರಮ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಪಠ್ಯ ಚಟುವಟಿಕೆಗಳು, ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ. ಪಾಲಕರು ಸಹ ಇಂತಹ ಮಹತ್ತರವಾದ ಕಾರ್ಯಕ್ಕೆ ಸಹಾಯ ಸಹಕಾರ ನೀಡಬೇಕು ಎಂದರು.ಅಧ್ಯಕ್ಷತೆಯನ್ನು ಶರಣರ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಎಸ್.ಬಿ. ಲಕ್ಕೋಳ ಮಾತನಾಡಿದರು. ವಾರ್ಷಿಕ ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜಣ್ಣ ಗಿರಡ್ಡಿ, ತೋಟಪ್ಪ ನವಲಗುಂದ, ಬಸವರಾಜ ಸುಂಕದ, ಮುತ್ತಣ್ಣ ಸಂಗಳದ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರುದ್ರಪ್ಪ ಹುರಳಿ, ಬಿ.ಎನ್. ಬಳಗಾನೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪಿ.ಎಸ್. ಬಳಗಾನೂರ ಸ್ವಾಗತಿಸಿ, ವಂದಿಸಿದರು.