ಮಹಮ್ಮದ ರಫೀಕ್ ಬೀಳಗಿ
ಹುಬ್ಬಳ್ಳಿ: ಮಕ್ಕಳು ತಮ್ಮ ತಾಯಂದಿರು ಮತ್ತು ಭೂಮಿ ತಾಯಿಯ ಗೌರವಾರ್ಥವಾಗಿ ಮರ ನೆಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ "ಏಕ್ ಪೇಡ್ ಮಾ ಕೆ ನಾಮ್ " (ತಾಯಿಯ ಹೆಸರಿನಲ್ಲಿ ಒಂದು ವೃಕ್ಷ )2.0 " ಅನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರದ ವಿಶಿಷ್ಟ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ರಾಜ್ಯದ 24477 ಶಾಲೆಗಳಲ್ಲಿ 3,64,401 ಸಸಿಗಳನ್ನು ನೆಡಲಾಗಿದೆ.ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜೂನ್ 5ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ವಿಶ್ವಾದ್ಯಂತ ಹವಾಮಾನ ಬದಲಾವಣೆಯು ಗಂಭೀರ ಸಮಸ್ಯೆಯಾಗಿದೆ. ಪರಿಸರವನ್ನು ರಕ್ಷಿಸುವಲ್ಲಿ ಪ್ರತಿಯೊಬ್ಬರೂ ಪಾತ್ರ ವಹಿಸಬೇಕು ಎಂಬ ಕಾರಣಕ್ಕೆ ಎಲ್ಲರ ಸಹಕಾರ ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಉಪಕ್ರಮ ತೆಗೆದುಕೊಂಡಿದೆ.
ಇಲಾಖೆಯ ಮೂಲದ ಪ್ರಕಾರ ಆ. 20ರ ವರೆಗೆ ಬೆಳೆಗಾವಿಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 1665 ಶಾಲೆಗಳಲ್ಲಿ ಅತೀ ಹೆಚ್ಚು 55790 ಸಸಿ ನೆಡಲಾಗಿದೆ. 2ನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿದ್ದು, 1504 ಶಾಲೆಗಳಲ್ಲಿ 45828 ಸಸಿಗಳನ್ನು ನೆಟ್ಟಿದ್ದಾರೆ. ಹಾಸನ 1808 ಶಾಲೆಗಳಲ್ಲಿ 37375, ಮೈಸೂರು 1626 ಶಾಲೆಗಳಲ್ಲಿ 30509, ಉಡುಪಿಯ 636 ಶಾಲೆಗಳಲ್ಲಿ 23257 ಸಸಿಗಳನ್ನು ನೆಡಲಾಗಿದೆ. ಅದರಂತೆ ಜಿಲ್ಲೆಯ ಸುಮಾರು 544 ಶಾಲೆಗಳಲ್ಲಿ 6951 ಸಸಿಗಳನ್ನು ನೆಡಲಾಗಿದೆ.ಪ್ರತಿ ಶಾಲೆಯ ವತಿಯಿಂದ ಕನಿಷ್ಠ 70 ಸಸಿಗಳನ್ನು ನೆಡಲು ಸೂಚಿಸಲಾಗಿದೆ. ಅದರಂತೆ ಮಕ್ಕಳು ತಮ್ಮ ತಾಯಿಯೊಂದಿಗೆ ಸಸಿ ನೆಟ್ಟು ಆಗ ತೆಗೆದ ಭಾವಚಿತ್ರವನ್ನು https://ecoclubs.education.gov.in ಗೆ ಅಪ್‌ಲೋಡ್ ಮಾಡಬೇಕು. ಬಳಿಕ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ನಲ್ಲಿ ಪ್ರಮಾಣಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ತಾಯಿಯೊಂದಿಗೆ ಸಸಿ ನೆಡುತ್ತಿದ್ದಾರೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಸಹಾಯಕ ಯೋಜನಾ ಸಂಯೋಜಕಿ ರೇಣುಕಾ ಅಮಲಜರಿ ಈ ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು, ಅವರಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಬೆಳೆಸುವುದು ಮತ್ತು ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಉದ್ದೇಶದಿಂದ "ಮಿಷನ್ ಲೈಫ್ " ಯೋಜನೆಯಡಿ ರಾಜ್ಯದ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಕಡ್ಡಾಯವಾಗಿ ಪರಿಸರ ಕ್ಲಬ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಕ್ಲಬ್‌ಗಳ ಮೂಲಕ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಿದ್ಧರಾಗುತ್ತಿದ್ದಾರೆ. ಅಭಿಯಾನಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಸಕ್ರಿಯವಾಗಿ ಭಾಗವಹಿಸಲು ನಾವು ಎಲ್ಲ ಶಾಲೆಗಳಿಗೆ ಸೂಚನೆ ನೀಡಿದ್ದು, ಎಲ್ಲ ಶಾಲೆಗಳಲ್ಲೂ ಮಕ್ಕಳು ಉತ್ಸಾಹದಿಂದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.ಅಭಿಯಾನದ ಅಡಿಯಲ್ಲಿ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು, ಏಕ ಬಳಕೆಯ ಪ್ಲಾಸ್ಟಿಕ್ ತಿರಸ್ಕರಿಸುವುದು, ನೀರು ಉಳಿಸಿ ಇತ್ಯಾದಿ ಥೀಮ್‌ಗಳ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಅಭಿಯಾನದಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ತಿಳಿಸಿದ್ದು, ಅವರಿಗೆ ಫೋಟೋ ತೆಗೆದು ಅಪ್ಲೋಡ್ ಮಾಡುವ ವಿಧಾನದ ಕುರಿತು ತರಬೇತಿ ನೀಡಲಾಗಿದೆ. ಮಕ್ಕಳೂ ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಶಾಲೆಯ ಆವರಣ, ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ತಾಯಿಯ ಹೆಸರಲ್ಲಿ ಸಸಿ ನಾಟಿ ಮಾಡುವ ಮೂಲಕ ಪರಿಸರ ಕಾಳಜಿ ತೋರುತ್ತಿದ್ದಾರೆ ಎಂದು ಕಲಘಟಗಿ ನೋಡಲ್ ಅಧಿಕಾರಿ ಸುಜಾತಾ ಚವ್ಹಾಣ ಹೇಳಿದರು.ಮಕ್ಕಳು ಪರಿಸರ ಕಾಳಜಿಯಿಂದ ಸಸಿಗಳ ನಾಟಿ ಮಾಡುವುದಷ್ಟೇ ಅಲ್ಲ ಅವುಗಳನ್ನು ಜೋಪಾನ ಮಾಡುವಂತೆಯೂ ತಿಳಿವಳಿಕೆ ಮೂಡಿಸಲಾಗುತ್ತಿದೆ. ಗ್ರಾಪಂಗಳು, ಅರಣ್ಯ ಇಲಾಖೆಗಳು, ಎನ್‌ಜಿಒಗಳೂ ಈ ಅಭಿಯಾನದಲ್ಲಿ ಪಾಲ್ಗೊಂಡು ಪರಿಸರ ಕಾಳಜಿ ಮೆರೆಯಲಿ ಎಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಸಹಾಯಕ ಯೋಜನಾ ಸಂಯೋಜಕಿ ರೇಣುಕಾ ಅಮಲಜರಿ ಹೇಳಿದರು.ಶೈಕ್ಷಣಿಕ ಜಿಲ್ಲೆ ಶಾಲೆಗಳ ಸಂಖ್ಯೆ ನೆಟ್ಟ ಸಸಿಗಳು
ಚಿಕ್ಕೋಡಿ ಶೈಕ್ಷಣಿಕ 1665 55790ದಕ್ಷಿಣ ಕನ್ನಡ 1504 45828
ಹಾಸನ 180837375ಮೈಸೂರು 162630509
ಉಡುಪಿ 636 23257ಉತ್ತರಕನ್ನಡ829 18938
ಬೆಳಗಾವಿ85112927ಧಾರವಾಡ 544 6951