41 ದಿನ ರಜೆ ಮುಗಿಸಿ ಮತ್ತೆ ಶಾಲೆಗೆ ಮಕ್ಕಳು

KannadaprabhaNewsNetwork |  
Published : Jun 01, 2024, 01:46 AM ISTUpdated : Jun 01, 2024, 10:34 AM IST
ಹೆಬ್ಬಾಳದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಸಿಹಿ ಹಂಚಿಕೆ ಮಾಡಲಾಯಿತು. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಮಂಜುನಾಥ್‌ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ ವರ್ಗ ಉಪಸ್ಥಿತರಿದ್ದರು. | Kannada Prabha

ಸಾರಾಂಶ

2024-25ನೇ ಶೈಕ್ಷಣಿಕ ಸಾಲು ಆರಂಭಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೆ ಶುಕ್ರವಾರ ಮಕ್ಕಳು ಮರಳಿದರು. ಇದರೊಂದಿಗೆ 41 ದಿನಗಳ ಬೇಸಿಗೆ ರಜೆ ಮುಕ್ತಾಯದ ಬಳಿಕ ಶಾಲೆಗಳಲ್ಲಿ ಮಕ್ಕಳಿಂದಾಗಿ ಮತ್ತೆ ಕಳೆಗಟ್ಟಿದ ವಾತಾವರಣ ನಿರ್ಮಾಣವಾಗಿದೆ.

 ಬೆಂಗಳೂರು ;  2024-25ನೇ ಶೈಕ್ಷಣಿಕ ಸಾಲು ಆರಂಭಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೆ ಶುಕ್ರವಾರ ಮಕ್ಕಳು ಮರಳಿದರು. ಇದರೊಂದಿಗೆ 41 ದಿನಗಳ ಬೇಸಿಗೆ ರಜೆ ಮುಕ್ತಾಯದ ಬಳಿಕ ಶಾಲೆಗಳಲ್ಲಿ ಮಕ್ಕಳಿಂದಾಗಿ ಮತ್ತೆ ಕಳೆಗಟ್ಟಿದ ವಾತಾವರಣ ನಿರ್ಮಾಣವಾಗಿದೆ.

ಸರ್ಕಾರದ ಆದೇಶದಂತೆ ಎಲ್ಲೆಡೆ ಶಾಲೆಗಳನ್ನು ತಳಿರು ತೋರಣದಿಂದ ಸಿಂಗರಿಸಿ, ರಂಗೋಲೆ ಬಿಡಿಸಿ ‘ಶಾಲಾ ಪ್ರಾರಂಭೋತ್ಸವ’ ಆಯೋಜಿಸಲಾಗಿತ್ತು. ಮಕ್ಕಳಿಗೆ ಗುಲಾಬಿ, ಸಿಹಿ ನೀಡಿ ಸ್ವಾಗತಿಸಲಾಯಿತು. ಈ ಬಾರಿ ಶಾಲೆಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ತಲುಪಿರುವ ಹಿನ್ನೆಲೆಯಲ್ಲಿ ಮೊದಲ ದಿನವೇ ಅವುಗಳನ್ನು ಹಂಚಿಕೆ ಮಾಡಲಾಯಿತು. ಮೊದಲ ದಿನ ಬಹುತೇಕ ಶಾಲೆಗಳಲ್ಲಿ ಶೇ.50ರಷ್ಟು ಮಕ್ಕಳು ಹಾಜರಾಗಿದ್ದರು ಎಂದು ವಿವಿಧ ಶಾಲೆಗಳ ಶಿಕ್ಷಕರು ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಗುಲಾಬಿ ಹೂ, ಸಿಹಿ ನೀಡಿ ಬರಮಾಡಿಕೊಂಡದ್ದು ಎಲ್ಲೆಡೆ ಕಂಡುಬಂತು. ನಂತರ ಪ್ರಾರ್ಥನೆ ಮುಗಿಸಿ, ಮಕ್ಕಳಿಗೆ ಕ್ಷೀರಭಾಗ್ಯದಡಿ ಹಾಲು, ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು. ಬಳಿಕ ಶಾಲೆಯ ಸುತ್ತಮುತ್ತಲ ಪ್ರದೇಶದ ರಸ್ತೆಗಳಲ್ಲಿ ಮಕ್ಕಳು ಜಾಥಾ ನಡೆಸಿ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವಂತೆ ಪೋಷಕರನ್ನು ಜಾಗೃತಿಗೊಳಿಸುವ ಕೆಲಸ ಮಾಡಿದರು.

ಜಾಥಾ ಮುಗಿಸಿ ಶಾಲೆಗೆ ಮರಳಿದ ಮಕ್ಕಳಿಗೆ ಕೆಲ ಗಂಟೆಗಳ ಕಾಲ ತರಗತಿಗಳನ್ನು ನಡೆಸಲಾಯಿತು. ಆದರೆ, ಮೊದಲ ದಿನ ಯಾವುದೇ ಪಠ್ಯಬೋಧನೆ ನಡೆದಿಲ್ಲ. ಬದಲಿಗೆ ಮಕ್ಕಳೊಂದಿಗೆ ಹರಟೆ, ರಜೆ ಹೇಗೆ ಕಳೆದೆವು ಎಂಬ ಬಗ್ಗೆ ಪರಸ್ಪರ ಅಭಿಪ್ರಾಯ ಹಂಚಿಕೆ, 1ನೇ ತರಗತಿಗೆ ಬಂದ ಮಕ್ಕಳ ಪರಿಚಯ, ಆಕಸ್ತಿದಾಯಕ ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಯಿತು ಎಂದು ಶಿಕ್ಷಕರು ತಿಳಿಸಿದರು.

ಬೆಂಗಳೂರಿನ ಹೆಬ್ಬಾಳದ ಕರ್ನಾಟಕ ಪಬ್ಲಿಕ್‌ ಶಾಲೆ, ಮೈಸೂರು ರಸ್ತೆಯ ಬ್ಯಾಟರಾಯನಪುರ ಸರ್ಕಾರಿ ಶಾಲೆ, ರಾಗಿಗುಡ್ಡ ಸರ್ಕಾರಿ ಪ್ರೌಢ ಶಾಲೆ, ರಾಜಾಜಿನಗರದ ಕರ್ನಾಟಕ ಪಬ್ಲಿಕ್‌ ಶಾಲೆ ಸೇರಿದಂತೆ ನಗರದ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು ಬೆಳಗ್ಗೆ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಬರಮಾಡಿಕೊಂಡರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ