ದಾವಣಗೆರೆ : ಮಕ್ಕಳ ದಿನಾಚರಣೆ - ಜಿಲ್ಲೆಯ ಆಟದಲ್ಲೂ, ಪಾಠದಲ್ಲೂ ಸೈ ಎನಿಸಿಕೊಂಡ ವಿಶೇಷ ಪ್ರತಿಭೆಗಳು

KannadaprabhaNewsNetwork |  
Published : Nov 14, 2024, 12:56 AM ISTUpdated : Nov 14, 2024, 12:13 PM IST
ಮಂದಿರಾ 13ಕೆಡಿವಿಜ3, 4, 5...............ಚಿನ್ಮಯ್‌ 13ಕೆಡಿವಿಜಿ6, 7, 8, 9...............ಶ್ರೇಯ 13ಕೆಡಿವಿಜಿ10, 11, 12 | Kannada Prabha

ಸಾರಾಂಶ

ಆಟದಲ್ಲೂ, ಪಾಠದಲ್ಲೂ ಸೈ ಎನಿಸಿಕೊಂಡಿರುವ ಪಾರ್ಥ ಜಿ. ಜೋಯ್ಸ್‌ ಕಲೆ, ಕ್ರೀಡೆ, ಶಿಕ್ಷಣದಲ್ಲಿ ತನ್ನ ಅಭ್ಯಾಸವನ್ನು ನಿರಂತರ ಮುಂದುವರಿಸಿದ್ದಾನೆ.

  ದಾವಣಗೆರೆ : ಆಟದಲ್ಲೂ, ಪಾಠದಲ್ಲೂ ಸೈ ಎನಿಸಿಕೊಂಡಿರುವ ಪಾರ್ಥ ಜಿ. ಜೋಯ್ಸ್‌ ಕಲೆ, ಕ್ರೀಡೆ, ಶಿಕ್ಷಣದಲ್ಲಿ ತನ್ನ ಅಭ್ಯಾಸವನ್ನು ನಿರಂತರ ಮುಂದುವರಿಸಿದ್ದಾನೆ.

ದಾವಣಗೆರೆ ಕ್ರಿಕೆಟ್ ಕೋಚ್‌, ಜೆಜೆಎಂ ವೈದ್ಯಕೀಯ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ಹಾಗೂ ಅಂತಾರಾಷ್ಟ್ರೀಯ ಭರತ ನಾಟ್ಯ ಕಲಾವಿದೆ ಮಾಧವಿ ದಂಪತಿ ಪುತ್ರ ಈ ಪಾರ್ಥ ಜಿ. ಜೋಯ್ಸ್‌. ಬಾಲ್ಯದಿಂದಲೂ ಕ್ರೀಡೆ, ಕಲೆಯಲ್ಲಿ ಆಸಕ್ತಿ ಮೈಗೂಡಿಸಿಕೊಂಡವನು.

ಅಪ್ಪ ಗೋಪಿ ಅವರ ಕ್ರಿಕೆಟ್ ಗೀಳು ಸಹಜವಾಗಿಯೇ ಮಗನಲ್ಲೂ ಆಸಕ್ತಿ ಬೆಳೆಸಿತು. ಕ್ರಿಕೆಟ್ ತರಬೇತಿ ಪಡೆಯುವ ಜೊತೆಗೆ ಪಾರ್ಥ ಜೋಯಿಸ್‌ ಒಂದು ಸಲ ಸೇಪಕ್ ಟಕ್ರಾ, ಮೂರು ಸಲ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾನೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪಂದ್ಯಾವಳಿಯಲ್ಲಿ ತುಮಕೂರು ವಲಯದ 16 ವರ್ಷದೊಳಗಿನ ತಂಡವನ್ನು ಪ್ರತಿನಿಧಿಸಿದ್ದಾನೆ.

ಇಲ್ಲಿನ ಅಮೃತ ವಿದ್ಯಾಲಯಂ ಶಾಲೆಯಲ್ಲಿ10ನೇ ತರಗತಿ ಓದುತ್ತಿರುವ ಪಾರ್ಥ ಶಾಲೆಯ ಹೆಡ್ ಬಾಯ್ ಸಹ ಆಗಿದ್ದಾನೆ. ತನ್ನ ಶಿಸ್ತು, ವಿನಯತೆ, ಶಾಲೆಯಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾನೆ. ಓದಿನಲ್ಲೂ ಮುಂದಿರುವ ಬಾಲಕ. ಶಾಲೆಯ ಶಿಕ್ಷಕರು, ಕ್ರಿಕೆಟ್‌, ಸೇಪಕ್ ಟಕ್ರಾ ತರಬೇತುದಾರರ ನೆಚ್ಚಿನ ಶಿಷ್ಯನಾಗಿ, ಹಿರಿಯ ಕ್ರೀಡಾಪಟುಗಳ ನೆರಳಿನಲ್ಲಿ ಕ್ರಿಕೆಟ್‌ನಲ್ಲಿ ಭವಿಷ್ಯ ಕಂಡುಕೊಳ್ಳುವ ಗುರಿ ಹೊಂದಿದ್ದಾನೆ.

ಓದು, ಕ್ರೀಡೆಯ ಜೊತೆಗೆ ಅಮ್ಮ ಭರತ ನಾಟ್ಯ ಕಲಾವಿದೆ ಆಗಿದ್ದರಿಂದ ತಾನು ಕರ್ನಾಟಕ ಸಂಗೀತ ಹಾಗೂ ಕೀ ಬೋರ್ಡ್ ಅಭ್ಯಾಸ ಮಾಡುತ್ತಿರುವ ಪಾರ್ಥ ಜಿ. ಜೋಯಿಸ್ ಕನಸು ದೊಡ್ಡದಿದೆ. ಸದಾ ಹಸನ್ಮುಖಿ ಹುಡುಗ ಅಂತಲೇ ಹಿರಿಯರು ಗುರುತಿಸುವಷ್ಟರ ಮಟ್ಟಿಗೆ ಹೆಸರಾಗಿದ್ದಾನೆ.

 ಭರತನಾಟ್ಯದ ಉದಯೋನ್ಮುಖ ಪ್ರತಿಭೆ ಮಂದಿರ

 ದಾವಣಗೆರೆ : ಭರತನಾಟ್ಯವನ್ನು ಬಾಲ್ಯದಿಂದಲೇ ಅಭ್ಯಾಸ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರತ ನಾಟ್ಯ ಪ್ರದರ್ಶನ ನೀಡುತ್ತಾ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಎಂ. ಮಂದಿರ ಸಾಧನೆ ದಿನದಿನಕ್ಕೂ ಗಮನ ಸೆಳೆಯುವಂತಿದೆ.

ದಾವಣಗೆರೆ ನಗರದ ಎಸ್.ಎಸ್‌. ಲೇಔಟ್‌ನ ಬಿ ಬ್ಲಾಕ್‌ ನಿವಾಸಿ ಮಲ್ಲೇಶ್‌, ಮೀನಾ ಹಿರೇಮಲ್ಲನಹೊಳೆ ದಂಪತಿ ಪುತ್ರಿಯಾಗಿದ್ದಾರೆ. ಎಂ.ಮಂದಿರಾ ಅವರು ಅಮೃತಾಮಯಿ ಪಿಯು ಕಾಲೇಜಿನಲ್ಲಿ ಪ್ರಥಮ ದರ್ಜೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಸತತ 5 ವರ್ಷಗಳಿಂದ ಭರತ ನಾಟ್ಯವನ್ನು ಇಲ್ಲಿನ ನಮನ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದ್ದು, ನೃತ್ಯ ಗುರು ಡಿ.ಕೆ.ಮಾಧವಿ ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ ಸಾಧನೆ ಮಾಡುತ್ತಿದ್ದಾರೆ.

ವಿಯಟ್ನಾಂನಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಯಮ ಕಾರ್ಯಕ್ರಮ, ಇಂಡೋ-ಶ್ರೀಲಂಕಾ ಸಾಂಸ್ಕೃತಿಕ ವಿನಿಯಮ ಕಾರ್ಯಕ್ರಮ, ಸುವರ್ಣ ಸಂಭ್ರಮ ಕಾರ್ಯಕ್ರಮ, ತಿರುಪತಿಯಲ್ಲಿ ಬ್ರಹ್ಮೋತ್ಸವ ಹೀಗೆ ನಾನಾ ಕಡೆ ಭರತ ನಾಟ್ಯ ಪ್ರದರ್ಶಿಸಿ, ನೋಡುಗರು, ಕಲಾ ಸಾಧಕರು, ಕಲಾ ಪ್ರೋತ್ಸಾಹರ ಪ್ರಶಂಸೆಗೆ ಪಾತ್ರವಾಗಿದ್ದಾರೆ ಮಂದಿರ. ದೊಡ್ಡ ಬುಳ್ಳಾಪುರದ ಶ್ರೀ ಮಹರ್ಷಿ ಗುರುಕುಲ ಪೀಠದಿಂದ ರಾಜ್ಯಮಟ್ಟದ ವಾಲ್ಮೀಕಿ ಸೇವಾ ರತ್ನ ಪ್ರಶಸ್ತಿ- 2024 ಅನ್ನು ಮುಡಿಗೇರಿಸಿಕೊಂಡ ಮಂದಿರ, ಸಾಕಷ್ಟು ಪ್ರಶಸ್ತಿ, ಸನ್ಮಾನ, ಗೌರವಕ್ಕೆ ಪಾತ್ರವಾಗಿರುವ ಪ್ರತಿಭೆ ಆಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ಮಂದಿರ ಉನ್ನತ ಹುದ್ದೆಯ ಗುರಿ ಹೊಂದಿದ್ದಾರೆ. ಅದೇ ರೀತಿ ಭರತ ನಾಟ್ಯದಲ್ಲಿ ಉನ್ನತಮಟ್ಟದ ಸಾಧನೆ ಮಾಡಬೇಕೆಂಬ ಕನಸು ಸಹ ಇದೆ. ಈ ನಿಟ್ಟಿನಲ್ಲಿ ನಿರಂತರ ನೃತ್ಯಾಭ್ಯಾಸದಲ್ಲಿ ವಿಧೇಯ ವಿದ್ಯಾರ್ಥಿನಿಯಾಗಿ ತೊಡಗುತ್ತಿರುವುದು ಮಂದಿರ ಕಲಾಸಕ್ತಿಗೆ ಸಾಕ್ಷಿಯಾಗಿದೆ.

 ಭರತನಾಟ್ಯ ಪ್ರತಿಭೆ ಶ್ರೇಯ ಹಿಮಾಚಲ

 ದಾವಣಗೆರೆ : ದಾವಣಗರೆಯ ಜಿ.ಎಂ.ಹಿಮಾಚಲ, ಕೆ.ಎಂ.ಭವ್ಯ ದಂಪತಿ ಪುತ್ರಿ ಜಿ.ಎಂ. ಶ್ರೇಯ ಇಲ್ಲಿನ ಚಾಣಕ್ಯ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ನಮನ ಅಕಾಡೆಮಿಯ ವಿದುಷಿ, ನೃತ್ಯಗುರು ಡಿ.ಕೆ.ಮಾಧವಿ ಬಳಿ ಭರತನಾಟ್ಯ ತರಬೇತಿ ಪಡೆಯುವ ಮೂಲಕ ಸಾಧನೆ ಮಾಡುತ್ತಿರುವ ಸಾಧಕಿ.

ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಜೂನಿಯರ್ ವಿಭಾಗದಲ್ಲಿ ತೇರ್ಗಡೆಯಾದ ಶ್ರೇಯ ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿಯ ಪ್ರಾರಂಭಿಕ, ಪ್ರಾವೇಶಿಕ ಪ್ರಥಮ, ಪ್ರಾವೇಶಿಕ ಪೂರ್ಣ ಮಾಡಿದ್ದಾರೆ. 10ನೇ ವರ್ಷದಿಂದಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ 20ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿರುವ ಭರವಸೆಯ ಕಲಾವಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದಾವಣಗೆರೆ ಜಿಲ್ಲಾಮಟ್ಟದ 2023- 2024ನೇ ಸಾಲಿನ ಅಸಾಧಾರಣ ಪ್ರತಿಭೆ ಪ್ರಶಸ್ತಿಗೆ ಪಾತ್ರರಾದ ಶ್ರೇಯ, 28ನೇ ಅಂತರ ರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ, ಮಂಗಳೂರು, ಥೈಲ್ಯಾಂಡ್‌ನಲ್ಲಿ 30ನೇ ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ಇಂಡೋ-ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ತಿರುಪತಿಯಲ್ಲಿ ಬ್ರಹ್ಮೋತ್ಸವ ನೃತ್ಯ ಪ್ರದರ್ಶನ. ಮೈಸೂರು ದಸರಾ 2024ರಲ್ಲಿ ನೃತ್ಯ ಪ್ರದರ್ಶನ, ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಕಡೆ ನೃತ್ಯ ಪ್ರದರ್ಶನ ನೀಡಿ, ಸೈ ಅನಿಸಿಕೊಂಡಿದ್ದಾರೆ. ಓದಿನ ಜೊತೆಗೆ ಕಲೆಯನ್ನೂ ರೂಢಿಸಿಕೊಂಡ ಸಾಧಕ ವಿದ್ಯಾರ್ಥಿನಿಯಾಗಿ ಶ್ರೇಯಾ ಹೊರಹೊಮ್ಮುತ್ತಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ