ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಲ್ನಾಡು ಹಾಕಿ ಕ್ಲಬ್ ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಬಲ್ಲಮಾವಟಿ, ದೊಡ್ಡಪುಲಿಕೋಟು, ನೆಲಜಿ ಮತ್ತು ಪೇರೂರು ಗ್ರಾಮಗಳ ಆಸಕ್ತ ಸಮಾನ-ಮನಸ್ಕರು ಹಾಕಿ ಕ್ಲಬ್ ಹುಟ್ಟುಹಾಕಿದ್ದು, ಹಲವು ವರ್ಷಗಳ ಕಾಲ ನಾಲ್ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ನಾಲ್ಕುನಾಡು ವ್ಯಾಪ್ತಿಯ ಹಾಕಿ ಪಂದ್ಯಾಟಕ್ಕೆ ಕಳೆದ ವರ್ಷ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಪುನಶ್ಚೇತನ ನೀಡಿದ್ದು, ಹಾಕಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಉತ್ಸವದೊಂದಿಗೆ ಆಸಕ್ತರಿಗೆ ತರಬೇತಿ ನೀಡುವ ಉದ್ದೇಶದಿಂದ ಉಚಿತ ತರಬೇತಿ ಶಿಬಿರವು 5-12 ಮತ್ತು 13-21 ವಯೋಮಿತಿಯವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ ಎಂದರು.ರಾಷ್ಟ್ರೀಯ ತೀರ್ಪುಗಾರ, ಹಿರಿಯ ಹಾಕಿ ಆಟಗಾರರಾದ ಕಾಟುಮಣಿಯಂಡ ಉಮೇಶ್ ಮತ್ತು ಗಣ್ಯರು ಹಾಕಿ ಸ್ಟಿಕ್‌ನಿಂದ ಚೆಂಡು ಹೊಡೆಯುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ನುರಿತ ತರಬೇತುದಾರರಿಂದ ಶಿಬಿರಾರ್ಥಿಗಳಿಗೆ ತರಬೇತಿ ನಡೆಯಿತು.ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಕ್ಲಬ್ ಉಪಾಧ್ಯಕ್ಷ ಕೈಬುಲಿರ ಉಮೇಶ್ ಉತ್ತಪ್ಪ, ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಖಜಾಂಚಿ ಚೀಯಂಡಿರ ದಿನೇಶ್ ಗಣಪತಿ, ಸಹಕಾರ್ಯದರ್ಶಿ ಮಚ್ಚುರ ಯದುಕುಮಾರ್, ತರಬೇತುದಾರರಾದ ಅಂಜಪರವಂಡ ರೋಷನ್ ಮಾದಪ್ಪ, ಅಲ್ಲಾರಂಡ ಅಪ್ಪಣ್ಣ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಕರವಂಡ ಅಪ್ಪಣ್ಣ ಮತ್ತು ಪೋಷಕರು ಗ್ರಾಮಸ್ಥರು ಉಪಸ್ಥಿತರಿದ್ದರು.