ಉತ್ತಮ ಊಟ-ಆಟ-ಪಾಠದೊಂದಿಗೆ ಮಕ್ಕಳ ಪ್ರಗತಿ: ನ್ಯಾ. ಎಂ.ಎಸ್. ಸಂತೋಷ್

KannadaprabhaNewsNetwork |  
Published : Dec 10, 2025, 12:30 AM IST
ಪೋಟೋ: 09ಎಸ್‌ಎಂಜಿಕೆಪಿ01ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಚಿಗುರು 2025 ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ಧಿಯೆಡೆ ಕೊಂಡೊಯ್ಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಕ್ಕಳು ಉತ್ಸಾಹದ ಚಿಲುಮೆಗಳಾಗಿದ್ದು, ಉತ್ತಮ ಊಟ-ಆಟ-ಪಾಠದೊಂದಿಗೆ ಪ್ರಗತಿ ಹೊಂದಿ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ಧಿಯೆಡೆ ಕೊಂಡೊಯ್ಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಚಿಗುರು- 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳ ಉತ್ಸಾಹ-ಹುರುಪು ನೋಡಿದರೆ ನಮಗೆ ಮತ್ತೊಮ್ಮೆ ಬಾಲ್ಯಾವಸ್ಥೆಗೆ ಹೋಗಬೇಕು ಎನ್ನಿಸುತ್ತಿದೆ ಎಂದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಮುಖ್ಯವಾಗಿ ಜೀವಿಸುವ, ರಕ್ಷಣೆಯ, ಭಾಗವಹಿಸುವ ಮತ್ತು ಪ್ರಗತಿ ಹೊಂದುವ ಈ ನಾಲ್ಕು ಹಕ್ಕುಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಹೀಗೆ ಈ ಅಂಶಗಳನ್ನೊಳಗೊಂಡು ಮುನ್ನಡೆಯಲು ಮಕ್ಕಳು ಸಮರ್ಪಕ ಆಹಾರ, ದೇಹ ದಣಿಯುವ ಆಟ ಮತ್ತು ಪಾಠದಲ್ಲೂ ಮುಂದಿರಬೇಕು. ಈ ರೀತಿಯಾಗಿ ಮಕ್ಕಳು ತಾವು ಪ್ರಗತಿ ಹೊಂದುವ ಜೊತೆಗೆ ಇಡೀ ಸಮಾಜವನ್ನು ಅಭಿವೃದ್ಧಿಯೆಡೆ ಕೊಂಡೊಯ್ಯಬಹುದು ಎಂದರು.

ಇಂದಿನ ಚಿಗುರು ಕಾರ್ಯಕ್ರಮದಲ್ಲಿನ ಸ್ಪರ್ಧೆಗಳು ಆಟ ಅನ್ನುವ ಅಂಶಕ್ಕೆ ಸೇರಿದ್ದು, ಸ್ಪರ್ಧಾತ್ಮಕ ಮನೋಭಾವದಿಂದ ಮಕ್ಕಳು ಪಾಲ್ಗೊಳ್ಳಬೇಕು. ಗಮನ ಕೇಂದ್ರೀಕರಿಸಿ ಭಾಗವಹಿಸುವ ಪ್ರತಿ ಸ್ಪರ್ಧಾಳು ವಿಜೇತರಾದಂತೆ ಎಂದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿರಿ ಎಂದು ಮಕ್ಕಳಿಗೆ ಕರೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅಭಿಷೇಕ್.ವಿ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ವಿವಿಧ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಮಕ್ಕಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ರಾಷ್ಟ್ರಮಟ್ಟದವರೆಗೆ ಗುರುತಿಸಿಕೊಂಡು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹಾರೈಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಮಾತನಾಡಿ, ಚಿಗುರು ಕಾರ್ಯಕ್ರಮದಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು, ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಮತ್ತು ಕರ್ನಾಟಕ ವಾದ್ಯ ಸಂಗೀತ, ಸುಗಮ ಸಂಗೀತ, ಜಾನಪದಗೀತೆ, ಸಮೂಹ ನೃತ್ಯ, ಯಕ್ಷಗಾನ, ಏಕಪಾತ್ರರಾಭಿನಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಇಂದಿನ ಚಿಗುರು ಕಾರ್ಯಕ್ರಮದಲ್ಲಿ ಸುಮಾರು 60 ರಿಂದ 70 ಮಕ್ಕಳು ಪಾಲ್ಗೊಂಡಿದ್ದಾರೆಂದರು.

ರಂಗಾಯಣದ ಆಡಳಿತಾಧಿಕಾರಿ ಎ.ಸಿ.ಶೈಲಜಾ , ಶಿವಮೊಗ್ಗ ತಾಲೂಕು ಸಿಡಿಪಿಓ ಗಂಗಾಬಾಯಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಸ್ಪರ್ಧಾಳುಗಳು, ವಿದ್ಯಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ