ಮಕ್ಕಳಿಗೆ ಮೌಲ್ಯಯುತ ಶಿಕ್ಷಣದಂತಹ ಆಸ್ತಿ ನೀಡಬೇಕು: ಶಾಸಕ ಶಾಸಕ ಪುಟ್ಟರಂಗಶೆಟ್ಟಿ

KannadaprabhaNewsNetwork | Published : Aug 19, 2024 12:49 AM

ಸಾರಾಂಶ

ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ, ಆದರೆ ಅವರಿಗೆ ಮೌಲ್ಯಯುತ ಶಿಕ್ಷಣ ಎಂಬ ಆಸ್ತಿ ಕೊಡಿಸಿ ಅವರನ್ನು ಭವ್ಯ ಭಾರತದ ಪ್ರಜೆಯಾಗಿ ರೂಪಿಸಿ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಕೊಳ್ಳೇಗಾಲದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಭಾ ಪುರಸ್ಕಾರ । ಉಪ್ಪಾರ ನೌಕರರ ಕ್ಷೇಮಾಭಿವೖದ್ಧಿ ಸಂಘದ ವತಿಯಿಂದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಉಪ್ಪಾರ ಸಮಾಜದ್ದು ಭಗೀರಥ ಪ್ರಯತ್ನವಾಗಿದ್ದು, ನಾವು ಅಭಿವೖದ್ಧಿಯಾಗಬೇಕಾದರೆ ನಿರಂತರ ಪ್ರಯತ್ನ ಇರಲೆಬೇಕು. ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ, ಆದರೆ ಅವರಿಗೆ ಮೌಲ್ಯಯುತ ಶಿಕ್ಷಣ ಎಂಬ ಆಸ್ತಿ ಕೊಡಿಸಿ ಅವರನ್ನು ಭವ್ಯ ಭಾರತದ ಪ್ರಜೆಯಾಗಿ ರೂಪಿಸಿ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ಕೊಳ್ಳೇಗಾಲ, ಹನೂರು ಉಪ್ಪಾರ ಸರ್ಕಾರಿ ನೌಕರರ ಕ್ಷೇಮಾಭಿವೖದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಉಪ್ಪಾರ ಸಮಾಜ ಇನ್ನು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದಿದ್ದು, ಭಗೀರಥ ಪ್ರಯತ್ನದ ಮೂಲಕವೇ ಸಬಲರಾಗಬೇಕು ಎಂದು ಹೇಳಿದರು.

ಕೊಳ್ಳೇಗಾಲದಲ್ಲಿ ಒಂದು ತಿಂಗಳೊಳಗೆ ಜಾಗ ನೋಂದಣಿ ಮಾಡಿಸಿಕೊಂಡರೆ ಭವನ ನಿಮಾ೯ಣಕ್ಕೆ 20 ಲಕ್ಷ ಅನುದಾನ ನೀಡುವೆ. ಉಪ್ಪಾರ ಸಮಾಜದ ಉನ್ನತಿ ಸಾಧಿಸಬೇಕು ಎಂಬುದು ನನ್ನ ಅಭಿಲಾಷೆ ಎಂದ ಅವರು, ರಾಜ್ಯಾದ್ಯಂತ ಈ ಬಾರಿ ಉನ್ನತ ಶ್ರೇಣಿಯಲ್ಲಿ ಉಪ್ಪಾರ ಸಮಾಜದ ವಿದ್ಯಾಥಿ೯ಗಳು ತೇರ್ಗಡೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಚಾಮರಾಜನಗರದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಮೂರು ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಸಮಾಜದ ವಿದ್ಯಾರ್ಥಿಗಳ ಪ್ರಗತಿಗಾಗಿ ಸ್ಪಂದಿಸುತ್ತಿದ್ದು, ಉತ್ತಮ ರೀತಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧನಿದ್ದೇನೆ. ಹಾಗಾಗಿ ಸಮಾಜದ ಮುಖಂಡರು ಹೆಣ್ಣುಮಕ್ಕಳಿಗೆ ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗೆ ಅಂಟಿಕೊಳ್ಳದೆ ಶಿಕ್ಷಣ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಉಪ್ಪಾರ ಅಭಿವೖದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ಹೆಣ್ಣುಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸುವ ಸಂಕಲ್ಪವನ್ನು ಸಮಾಜದ ಬಂಧುಗಳು ಮಾಡಬೇಕಿದೆ. ನಾವೆಲ್ಲರೂ ಸಂಘಟಿತರಾಗುವ ಮೂಲಕ ಸವಲತ್ತು, ಸ್ಥಾನಮಾನ ಪಡೆದುಕೊಳ್ಳಬೇಕು ಎಂದರು.

10ನೇ ತರಗತಿ, ದ್ವೀತಿಯ ಪಿಯುಸಿಯಲ್ಲಿ ಶೇಕಡ 80ಕ್ಕಿಂತ ಅಂಕಗಳಿಸಿದ ಚೇತನ್, ಹಂಸಐಸಿರಿ, ಐಶ್ವರ್ಯ, ಪುಷ್ಪಲತಾ ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಕೊಯಮತ್ತೂರು ಕೆನರಾ ಬ್ಯಾಂಕ್ ರಿಜನಲ್ ಮ್ಯಾನೇಜರ್ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ಅಭಿವೖದ್ಧಿ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಗ್ರಾಪಂನ ಮಾಜಿ ಸದಸ್ಯ ಸೋಮಣ್ಣ ಉಪ್ಪಾರ್, ಉಪ್ಪಾರ ಕ್ಷೇಮಾಭಿವೖದ್ಧಿ ಸಂಘದ ಗೋವಿಂದರಾಜು, ಮುಳ್ಳೂರು ಮಹೇಶ, ರಾಜು, ಮಾದೇಶ್, ಮುಖಂಡರಾದ ಚಿಕ್ಕತಾಂಡಶೆಟ್ಟಿ, ಪ್ರಸಾದ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇದ್ದರು.

ಉಪ್ಪಾರ ಸಮಾಜದ ಜನರು ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ತಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಬೇಕು. ಉಪ್ಪಾರ ಸಮಾಜ ಹೆಚ್ಚು ಹೆಚ್ಚು ಜ್ಞಾನವಂತರಾಗಬೇಕು, ಸಮುದಾಯ ಸಮಾಜದ ಜನರನ್ನು ಆಳುವ ಜನಪ್ರತಿನಿಧಿಗಳಾಗಬೇಕಾದರೆ, ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟಿತರಾಗಬೇಕು.

- ಎ.ಆರ್. ಕೃಷ್ಣಮೂರ್ತಿ. ಶಾಸಕ.

Share this article