ಮಕ್ಕಳಿಗೆ ನಮ್ಮ ಆಚಾರ, ವಿಚಾರ ಕಲಿಸಬೇಕು: ವಿಜಯಕುಮಾರ್

KannadaprabhaNewsNetwork | Published : Mar 24, 2025 12:34 AM

ಸಾರಾಂಶ

ನರಸಿಂಹರಾಜಪುರ, ವಿಶ್ವ ಕರ್ಮ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ನಮ್ಮ ಸಮಾಜದ ಸಂಪ್ರದಾಯ, ಆಚಾರ, ವಿಚಾರ, ಗಾಯಿತ್ರಿ ಮಂತ್ರಗಳನ್ನು ಕಲಿಸಬೇಕು ಎಂದು ಜೇಸಿ ವಲಯಾಧ್ಯಕ್ಷ ಹಾಗೂ ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಭಾರ ಪ್ರಾಂಶುಪಾಲ ವಿಜಯಕುಮಾರ್ ಆಚಾರ್ಯ ಸಲಹೆ ನೀಡಿದರು.

ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಂಘದ ವಾರ್ಷಿಕೋತ್ಸವ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿಶ್ವ ಕರ್ಮ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ನಮ್ಮ ಸಮಾಜದ ಸಂಪ್ರದಾಯ, ಆಚಾರ, ವಿಚಾರ, ಗಾಯಿತ್ರಿ ಮಂತ್ರಗಳನ್ನು ಕಲಿಸಬೇಕು ಎಂದು ಜೇಸಿ ವಲಯಾಧ್ಯಕ್ಷ ಹಾಗೂ ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಭಾರ ಪ್ರಾಂಶುಪಾಲ ವಿಜಯಕುಮಾರ್ ಆಚಾರ್ಯ ಸಲಹೆ ನೀಡಿದರು.

ಭಾನುವಾರ ಸಿಂಸೆ ವಿಶ್ವ ಕರ್ಮ ಸಭಾಭವನದಲ್ಲಿ ತಾಲೂಕು ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಂಘ, ಗಾಯಿತ್ರಿ ವಿಶ್ವ ಕರ್ಮ ಮಹಿಳಾ ಸಮಾಜ ಸಂಘ ಹಾಗೂ ವಿರಾಟ್ ವಿಶ್ವಕರ್ಮ ಚಂಡೆ ಬಳಗದ ಸಂಯುಕ್ತ ಆಶ್ರಯದಲ್ಲಿ ವಾರ್ಷಿರ್ಕೋತ್ಸವ ಹಾಗೂ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಠರಕ್ಕೆ ಆಹಾರ ಬೇಕಾಗುತ್ತದೆ. ಅದೇ ರೀತಿ ಮೆದುಳಿಗೂ ಆಹಾರವಾಗಿ ಉತ್ತಮ ಗುಣಮಟ್ಟದ ಸಂಸ್ಕಾರ ನೀಡಬೇಕು. ಮಕ್ಕಳಿಗೆ ಧರ್ಮದ ಪರಿಪಾಲನೆ ಕಲಿಸಬೇಕು. ಧಾರ್ಮಿಕ ಪಂಡಿತರನ್ನು ಸಭೆಗೆ ಕರೆಸಿ ಉಪನ್ಯಾಸ ಏರ್ಪಡಿಸಬೇಕು ಎಂದು ಸಲಹೆ ನೀಡಿದರು.

ಇಡೀ ವಿಶ್ವವನ್ನು ಸೃಷ್ಟಿ ಮಾಡಿದವರು ವಿಶ್ವ ಕರ್ಮ ಸಮಾಜದವರು. ವಿಶ್ವಕ್ಕೆ, ವಿವಿಧ ದೇವಸ್ಥಾನಗಳ ವಾಸ್ತು ಶಿಲ್ಪ, ಕೆತ್ತನೆ, ಮೂರ್ತಿಗಳ ಡಿಸೈನ್ ಮಾಡಿದವರು ವಿಶ್ವ ಕರ್ಮರು. ಆದರೆ, ಕಾಲ ಕ್ರಮೇಣ ನಮ್ಮ ಶಕ್ತಿ ಸಾಮಾರ್ಥ್ಯ ಕಡಿಮೆಯಾಗಿದ್ದು ಈಗ ಇತಿಹಾಸವಾಗಿದೆ. ಇದಕ್ಕೆ ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದೇ ಕಾರಣ ಎಂದರು.

ಭಾರತೀಯ ಮಹಿಳೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಎಲ್ಲಾ ನದಿಗಳಿಗೂ ಮಹಿಳೆ ಹೆಸರು ಇಡಲಾಗಿದೆ. ಧನ ಸಂಪತ್ತಿಗೆ ಲಕ್ಷ್ಮಿ, ವಿದ್ಯೆ ಕಲಿಯಲು ಸರಸ್ವತಿ, ಗ್ರಾಮ ದೇವತೆಗಳಿಗೂ ಹೆಣ್ಣಿನ ಹೆಸರು ಇಡಲಾಗಿದೆ. ವಿಶ್ವ ಕರ್ಮ ಸಮಾಜ ಸೇವಾ ಸಂಘದಲ್ಲೂ ಮಹಿಳಾ ಸಂಘ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ವಿಶ್ವ ಕರ್ಮ ಸಮಾಜದ ಒಗ್ಗಟ್ಟು ಕಾಪಾಡಿಕೊಳ್ಳ ಬೇಕು ಕಿವಿ ಮಾತು ಹೇಳಿದರು.

ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜಕ್ಕೆ ಸಂಘಟನೆ ಅತಿ ಮುಖ್ಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜದ ಅಭಿವೃದ್ಧಿ ಸಾದ್ಯ. ಈ ಹಿಂದೆ ಪಿಎಂ ವಿಶ್ವ ಕರ್ಮ ಸಮ್ಮಾನ್ ಯೋಜನೆಯಡಿ ಸಮಾವೇಶ ಮಾಡಲಾಗಿತ್ತು. ರಾಜ್ಯ ಪ್ರವಾಸೋದ್ಯೋಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ನೂತನವಾಗಿ ನಿರ್ಮಾಣವಾಗುತ್ತಿರುವ ಕಾಳಿಕಾಂಬ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯಿಂದ ₹10 ಲಕ್ಷ ಮಂಜೂರು ಮಾಡಿಸಿದ್ದಾರೆ. ವಿಶ್ವ ಕರ್ಮ ಸಮಾಜದ ಎಲ್ಲರೂ ದೇವಸ್ಥಾನ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಯೋಧ ಗುಡ್ಡೇಕೆರೆ ಶಂಕರ ಆಚಾರ್ಯ ಮಾತನಾಡಿ, ನಾನು 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ದೇಶ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಮಹಿಳೆಯರಿಗೂ ಈಗ ಸೇನೆಯಲ್ಲಿ ಅವಕಾಶಗಳಿವೆ. ಭಾರತೀಯ ಅಗ್ನಿವೀರ ಯೋಜನೆಯಡಿ ಕಡಿಮೆ ಅವಧಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಬದುಕಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕ ನಿವೃತ್ತ ಯೋಧರಾದ ಶಂಕರ ಆಚಾರ್ಯ, ಭಾಸ್ಕರ ಆಚಾರ್ಯ, ಆಶಾ ಕಾರ್ಯಕರ್ತೆ ಸರೋಜ ಆಚಾರ್ಯ, ಸಾರ್ವಜನಿಕ ಆಸ್ಪತ್ರೆ ನೌಕರರಾದ ರೇಖಾ ಪ್ರಕಾಶ ಆಚಾರ್ಯ, ಗಾಯಕಿ ವಿಶ್ರಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು

ಸಭೆ ಅಧ್ಯಕ್ಷತೆಯನ್ನು ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ರಾಜೇಶ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ವಿಶ್ವ ಕರ್ಮ ಬ್ರಾಹ್ಮಣ ಸೇವಾ ಸಮಾಜದ ಜಿಲ್ಲಾ ಸಂಘದ ಗೌರವಾಧ್ಯಕ್ಷ ಚೇತನ್ ಕುಮಾರ್, ಗಾಯಿತ್ರಿ ವಿಶ್ವ ಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್ಯ. ಪಾರ್ವತಿ ಟಿ.ಜಿ.ಸೌಖ್ಯ , ಅರುಣ ಆಚಾರ್ಯ ಉಪಸ್ಥಿತರಿದ್ದರು.

Share this article