ತೃತೀಯ ವರ್ಷದ ಮಕ್ಕಳಿಗೆ ಬೀಳ್ಕೊಡುಗೆ ‘ಐಕ್ಯಂ-2024’ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನಸಾಮಾನ್ಯ ಕುಟುಂಬದಿಂದ ಬಂದು ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡುವುದು ಸುಲಭದ ಮಾತಲ್ಲ. ಉದ್ಯೋಗ ಪಡೆಯುವಂತಹ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಉದಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಆರ್.ರಮೇಶ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ‘ಐಕ್ಯಂ-೨೦೨೪’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಣ್ಣ ಸಣ್ಣ ರೀತಿಯಲ್ಲಿ ಬಂಡವಾಳ ಹೂಡಿ ಆರಂಭಿಸಿದ ವ್ಯವಹಾರಗಳೇ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ಉದ್ಯಮಗಳಾಗಿವೆ. ಹಾಗೆಯೇ ಸರ್ಕಾರಿ, ಸರ್ಕಾರೇತರ ಮತ್ತು ಕೇಂದ್ರದಲ್ಲಿ ಅನೇಕ ಉದ್ಯೋಗಾವಕಾಶಗಳಿಗೆ ಅವುಗಳನ್ನು ಗುರುಯಾಗಿಸಿಕೊಂಡು ಓದಬೇಕು. ಓದುವುದರೊಂದಿಗೆ ಕುಟುಂಬ, ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಜು ಡಿ.ಎಸ್. ಮಾತನಾಡಿ, ಕಾಲೇಜಿನಿಂದ ಏನನ್ನು ಗಳಿಸಿದ್ದೀರಿ ಎಂಬುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಗುರು, ವಿನಯ ಇದ್ದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಹೇಳುವ ಮೂಲಕ ವಿವೇಕಾನಂದರ ನುಡಿಗಳನ್ನು ಸ್ಮರಿಸಿದರು.ಪರೀಕ್ಷಾ ನಿಯಂತ್ರಕರಾದ ಡಾ. ಕೆ.ಡಿ. ಮುರುಳೀಧರ್, ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ದೇವರಾಜು ಎಚ್.ಡಿ. ಮಾತನಾಡಿ, ವಿದ್ಯಾರ್ಥಿಗಳು ವಿದ್ಯೆಯನ್ನು ತಮ್ಮದಾಗಿಸಿಕೊಳ್ಳುತ್ತ ಮಾಗಬೇಕು. ಹಿರಿಯರು-ಕಿರಿಯರು ಮತ್ತು ಕುಟುಂಬದವರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಬೇಸರ ಮೂಡಿಸುವಂತಹ ವಿಚಾರಗಳೇ ಸಮಾಜದಲ್ಲಿ ನೆಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಜಾಗರೂಕರಾಗಿರಬೇಕು ಎಂದು ಹೇಳಿದರು.ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಚನ್ನಯ್ಯ, ವಿದ್ಯಾರ್ಥಿಗಳು ಸುಳ್ಳನ್ನು ಆಡಬಾರದು. ಗ್ರಂಥಾಲಯವನ್ನು ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸವಿತಾ ಮಾತನಾಡಿ, ಹೆಚ್ಚಿನ ಅಭ್ಯಾಸದಿಂದ ಎಲ್ಲವೂ ಸಾಧ್ಯ. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಬೇಕು ಎಂದು ಕಿವಿಮಾತು ಹೇಳಿದರು.ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್ ಮಾತನಾಡಿ, ಗುರು ಎಂದರೆ ಆಲದ ಮರವಿದ್ದ ಹಾಗೆ. ಇಂದು ವಾಣಿಜ್ಯ ವಿಭಾಗದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ತಂದೆ-ತಾಯಿ ಮತ್ತು ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು.ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವರಾಜ್‌ಕುಮಾರ್, ಸಮಾಜಶಾಸ್ತ್ರ ವಿಭಾಗದ ಮಂಜುನಾಥ್, ವಾಣಿಜ್ಯ ಸ್ನಾತಕೋತ್ತರ ವಿಭಾಗದ ಕಿರಣ್‌ಕುಮಾರ್, ಗೋಪಾಲ್, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು, ವಿವಿಧ ವಿಭಾಗಗಳ ಉಪನ್ಯಾಸಕರು ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಭುವನ್ ಎಲ್ಲರನ್ನು ಸ್ವಾಗತಿಸಿದರು. ತೃತೀಯ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾರಂಭದ ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.