ಕನ್ನಡಪ್ರಭ ವಾರ್ತೆ, ತುಮಕೂರುಮಕ್ಕಳು ಕಲೆಯನ್ನು ಕಲಿತು ಭವಿಷ್ಯದ ಪ್ರತಿಭೆಗಳಾಗಿ ರೂಪುಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ ಕರೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಾವಗಡ ತಾಲೂಕು ಗುಜ್ಜನಡು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಲಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಲಾಖೆ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ವರ್ಗದ ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳಿಗೆ ಅವರಿಗೆ ಆಸಕ್ತಿ ಇರುವ ಕಲೆಯನ್ನು ಆಯ್ಕೆ ಮಾಡಿ ನುರಿತ ಗುರುಗಳಿಂದ ಆರು ತಿಂಗಳ ಕಾಲ ಕಲೆಯನ್ನು ಕಲಿಸಲು ಅವಕಾಶ ಕಲ್ಪಿಸಿದೆ ಎಂದರು. ವಿದ್ಯಾಭ್ಯಾಸದೊಂದಿಗೆ ಆರೋಗ್ಯಕರ ಹವ್ಯಾಸಗಳಾದ ಕಲೆ, ಸಾಹಿತ್ಯ, ಕ್ರೀಡೆ, ಯೋಗದಂತಹ ಹವ್ಯಾಸಗಳನ್ನು ರೂಢಿಸಿಕೊಂಡಲ್ಲಿ ಆಧುನಿಕ ಜಗತ್ತಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಲೋಕೇಶ್ ಪಾಳೇಗಾರ್ ಮಾತನಾಡುತ್ತಾ, ಜಿಲ್ಲೆಯ ಗಡಿಭಾಗವಾದ ಪಾವಗಡ ತಾಲೂಕಿನಲ್ಲಿ ಉತ್ತಮ ಗ್ರಾಮೀಣ ಕಲೆಗಳಿದ್ದು, ಇವುಗಳ ಏಳಿಗೆಗೆ ಇಲಾಖೆ ನೆರವು ನೀಡಲು ಹಾಗೂ ಐತಿಹಾಸಿಕವಾಗಿ ತನ್ನದೇ ಆದ ಇತಿಹಾಸವನ್ನು ಹೊಂದಿರುವ ನಿಡಗಲ್‌ನ ಸವಿನೆನಪಿಗಾಗಿ ನಿಡಗಲ್ ಉತ್ಸವವನ್ನು ಸರ್ಕಾರದ ವತಿಯಿಂದ ಪ್ರತಿ ವರ್ಷವು ಆಚರಿಸುವಂತೆ ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಕುಮಾರ್ ಮಾತನಾಡುತ್ತಾ, ತುಮಕೂರು ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದ್ದು, ಇಲ್ಲಿ ಸೋಮನಕುಣಿತ, ಗಾರುಡಿಗೊಂಬೆ, ಕೋಲಾಟ, ಗೊರವರಕುಣಿತ, ನಾಸಿಕ್ ಡೋಲು, ಚಿಟ್ಟಿಮೇಳ, ವೀರಗಾಸೆ ಮೊದಲಾದ ಹಲವು ಕಲೆಗಳು ಪ್ರಚಲಿತವಾಗಿದ್ದು, ಇಲಾಖೆ ಇಂತಹ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ವಹಿಸುತ್ತಿರುವುದು ಅತ್ಯಂತ ಶ್ಲಾಘನೀಯ, ಪ್ರತಿ ವರ್ಷವು ಈ ಗ್ರಾಮದಲ್ಲಿ ಒಂದಲ್ಲ ಒಂದು ಕಲಾ ಸಂಸ್ಥೆಯು ಇಲಾಖೆಯ ನೆರವು ಪಡೆದು ದೊಡ್ಡ ಮಟ್ಟದಲ್ಲಿ ಕಲೆಗಳ ಪ್ರದರ್ಶನ ನೀಡುತ್ತಾ ಸಾರ್ವಜನಿಕರ ಜನಮನ್ನಣೆಗೆ ಪಾತ್ರವಾಗಿರುತ್ತದೆ. ಇದೇ ರೀತಿ ಮುಂದಿನ ದಿನಗಳಲ್ಲೂ ಕಲೆಗಳ ಪ್ರದರ್ಶನ ಹೆಚ್ಚಾಗಿ ನಡೆಯಲಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರುಗಳಾದ ವೆಂಕಟರಮಣ, ಶಿವಣ್ಣ, ಕಲಾ ಸಂಘಟಕ ನಾಗೇಶ್, ಚಿತ್ತನಗಿರಿಯಪ್ಪ, ಚಿಕ್ಕನಾಗಪ್ಪ, ನಾಗಪ್ಪ, ಡೋಳಪ್ಪ, ಗೋಪಾಲಪ್ಪ, ಸಿ.ಕೆ ತಿಪ್ಪೇಸ್ವಾಮಿ, ಬಲರಾಮ ಮತ್ತು ಕಲಾತರಬೇತಿಯ ಗುರುಗಳಾದ ಮಹೇಂದ್ರ ಮೊದಲಾದವರು ಪಾಲ್ಗೊಂಡಿದ್ದರು.