ಸಿ.ಕೆ. ನಾಗರಾಜ ದೇವನಕೊಂಡ
ಬಹುತೇಕ ಓಣಿಯಲ್ಲಿ ಮಕ್ಕಳೇ ಕಾಮಣ್ಣನ ಮೂರ್ತಿ ಸಿದ್ಧಪಡಿಸಿ ಪ್ರತಿಷ್ಠಾಪಿಸುತ್ತಾರೆ. ಹಳೆಯ ಅಂಗಿ ಅಥವಾ ನಿಲುವಂಗಿ, ಪ್ಯಾಂಟ್ ತಂದು ಅದರಲ್ಲಿ ಒಣ ಬತ್ತದ ಹುಲ್ಲು ತುಂಬಿ, ಕಟ್ಟಿಗೆ ಸಿಕ್ಕಿಸಿ ಕಾಮನ ಮೂರ್ತಿ ಸಿದ್ಧಪಡಿಸುತ್ತಾರೆ. ಮುಖಕ್ಕೆ ಗಡಿಗೆ ತಂದು ಅದಕ್ಕೆ ಕಣ್ಣು, ಮೂಗು, ಕಿವಿ, ಬಾಯಿ, ಮೀಸೆ ಬರೆಯುತ್ತಾರೆ. ಇನ್ನು ಕೆಲವರು ಚಿತ್ರಕಲಾವಿದರಿಂದ ಕಾಮನ ಮುಖದ ಚಿತ್ರ ಬರೆಯಿಸಿ ಗಡಿಗಿಗೆ ಅಂಟಿಸುತ್ತಾರೆ. ಕೊರಳಲ್ಲಿ ಹೂವಿನಹಾರ ಹಾಕಿಕೊಂಡು ಈ ರೀತಿಯಲ್ಲಿ ತಯಾರಾದ ಕಾಮನಮೂರ್ತಿ ಹೊತ್ತು ಹುಡುಗರು ಖುಷಿಯಿಂದ ಹಲಗೆ ಹೊಡೆಯುತ್ತಾ ತಿರುಗಾಡುತ್ತಾರೆ.ಓಣಿಯಲ್ಲಿ ಹುಡುಗರು ಬೆಳಗ್ಗೆಯಿಂದ ರಾತ್ರಿ ವರೆಗೂ ಹಲಗೆ ಬಾರಿಸುವ ಸಂಭ್ರಮದಲ್ಲಿದ್ದಾರೆ. ಶಾಲೆ ಮುಗಿಸಿ ಬರುವ ಹುಡುಗರು ಹಲಗೆ ಹಿಡಿದು ಗಲ್ಲಿಗಲ್ಲಿ ಸುತ್ತಿದ್ದಾರೆ. ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ಹಲಗೆ ಬಾರಿಸುವ ಹುಡುಗರು ಮತ್ತೆ ಶಾಲೆ ಮುಗಿಸಿ ವಾಪಸಾಗುತ್ತಿದ್ದಂತೆ ಮತ್ತೆ ಹಲಗೆ ವಾದನ ರಾತ್ರಿ 10 ಗಂಟೆವರೆಗೂ ಬಾರಿಸುತ್ತಾರೆ.ಕಾಮಣ್ಣನಮೂರ್ತಿ ಹೊತ್ತು ಬಿಸಿಲು ಎನ್ನದೇ ಹಲಗೆ ಬಡಿಯುತ್ತಾ ಓಣಿಯಲ್ಲಿ ತಿರುಗಾಡಿದರೂ ಕಿಂಚತ್ತೂ ಬೇಸರ ಮತ್ತು ದಣಿವು ಹುಡುಗರ ಮುಖದಲ್ಲಿ ಕಂಡು ಬರುವುದಿಲ್ಲ. ಮನೆ ಮುಂದೆ ಹೋಗಿ ಮನೆಯವರಿಗೆ ಕಾಮಣ್ಣನ ಪಟ್ಟಿ (ದೇಣಿಗೆ) ಕೊಡ್ರಿ ಎಂದು ಮನೆ ಬಾಗಿಲಿಗೆ ಬಂದು ನಿಂತು, ಹೊಡಿರಿ ಹಲಗಿ ಹೊಯ್ಕೊಳ್ರೋ.... ಎಂದು ಕೂಗುತ್ತಾ ಹಲಗೆ ಬಾರಿಸುತ್ತಾ, ಮನೆಯವರು ಕೊಟ್ಟಷ್ಟು ಕಾಮನ ಪಟ್ಟಿ ಪಡೆದು ಮತ್ತೆ ಮುಂದಿನ ಮನೆಗೆ ತೆರಳುತ್ತಾರೆ.ಸಂಗ್ರಹಿಸಿದ ಕಾಮನಪಟ್ಟಿಯ ಹಣದಲ್ಲಿ ಕಾಮದಹನ ಮಾಡುವಾಗ ಪೂಜಾ ಸಾಮಗ್ರಿ, ಮಂಡಕ್ಕಿ ಅಥವಾ ಮಡ್ಡಿಕ್ಕಿ ಒಗ್ಗರಣೆ ಮಾಡಿಸಿ ಓಣಿಯಲ್ಲಿರುವ ಎಲ್ಲರನ್ನು ಸೇರಿಕೊಂಡು ಲಘು ಉಪಾಹಾರ ಸವಿಯುತ್ತಾರೆ. ಇನ್ನು ಉಳಿದ ಹಣದಲ್ಲಿ ಓಕಳಿಯ ದಿನ ಬಣ್ಣ ಖರೀದಿಸಿ ತಮ್ಮ ಓಣಿಯ ಹುಡುಗರಿಗೂ ಬಣ್ಣ ನೀಡಿ ಓಕುಳಿಯಾಡುತ್ತಾರೆ.ಮಾ. 24ರಂದು ರಾತ್ರಿ ಕಾಮದಹನ ನಡೆಯಲಿದೆ. ಇದಕ್ಕಾಗಿ ಹುಡುಗರು ಕಟ್ಟಿಗೆ ಸಂಗ್ರಹಿಸುತ್ತಿದ್ದಾರೆ.ಮಾ. 25ರಂದು ಬೆಳಗ್ಗೆ ಹೋಳಿಯ ರಂಗಿನಾಟಕ್ಕೆ ಮರಿಯಮ್ಮನಹಳ್ಳಿ ಸೇರಿದಂತೆ ಹೋಬಳಿಯ ಪ್ರತಿಯೊಂದು ಗ್ರಾಮಗಳಲ್ಲಿ ರಂಗಿನಾಟಕ್ಕೆ ಹುಡುಗರು, ಯುವಕರು ಮತ್ತು ಮಹಿಳೆಯರು ತುದಿಗಾಲಲ್ಲಿ ನಿಂತಿದ್ದಾರೆ.