ಆರತಿ ಎತ್ತಿ, ಪುಷ್ಪ ನೀಡಿ ಮಕ್ಕಳಿಗೆ ಸ್ವಾಗತ

KannadaprabhaNewsNetwork |  
Published : Jun 02, 2026, 02:15 AM IST
ಆರತಿ ಎತ್ತಿ, ಪುಷ್ಪ ನೀಡಿ ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಿದ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. | Kannada Prabha

ಸಾರಾಂಶ

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಶಾಶ್ವತ ಸಂತೋಷ ಹಾಗೂ ಸಂಸ್ಕಾರ ನೀಡಬೇಕು. ಶಿಕ್ಷಣವು ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರಗೆಡುವುತ್ತದೆ.

ಧಾರವಾಡ:

ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲೆಗಳು ಸೋಮವಾರದಿಂದ ಶುರುವಾಗಿದ್ದು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮೊದಲ ದಿನ ಮಕ್ಕಳಿಗೆ ತರಹೇವಾರಿ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತು.

ಧಾರವಾಡ ಗ್ರಾಮೀಣ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹೂ ಹಾಗೂ ಕಿರೀಟ ತೊಡಿಸಿ ವಿಶೇಷವಾಗಿ ಸ್ವಾಗತಿಸಲಾಯಿತು. ಜತೆಗೆ ಪಠ್ಯ-ಪುಸ್ತಕ, ಸಮವಸ್ತ್ರ ಇತರೆ ಸೌಲಭ್ಯಗಳನ್ನು ಸಾಂಕೇತಿಕವಾಗಿ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ದಾಖಲಾದ ಮಕ್ಕಳನ್ನು ಬಲೂನು, ಬಣ್ಣದ ಕಾಗದಗಳಿಂದ ಅಲಂಕರಿಸಿದ ವಾದ್ಯಮೇಳದೊಂದಿಗೆ ಶಾಲೆಗೆ ಕರೆತರಲಾಯಿತು.

ಸ್ವತಃ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಮಕ್ಕಳಿಗೆ ಆರತಿ ಎತ್ತಿ, ಪುಷ್ಪ ನೀಡಿ ಸ್ವಾಗತಿಸಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಶಾಶ್ವತ ಸಂತೋಷ ಹಾಗೂ ಸಂಸ್ಕಾರ ನೀಡಬೇಕು. ಶಿಕ್ಷಣವು ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆ ಹೊರಗೆಡುವುತ್ತದೆ. ಅದು ಮಗುವಿನ ದೈಹಿಕ ಮತ್ತು ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುತ್ತದೆ ಎಂದರು.

ಶಿಕ್ಷಣದಿಂದ ಶಿಸ್ತು, ಸಂಯಮ, ಸಹಕಾರ, ಸ್ವಾವಲಂಬನೆ, ಗೌರವ ಪಡೆಯಬಹುದು. ಮಕ್ಕಳೊಂದಿಗೆ ಭಾವನಾತ್ಮಕ ಗುಣಗಳು ಬೆಳೆಯುತ್ತವೆ. ಶಿಕ್ಷಣದಿಂದ ಆರೋಗ್ಯ ವೃದ್ಧಿಸುತ್ತದೆ. ಕಲಿಕೆಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಸೂಕ್ತವಾಗಿ ಮಾರ್ಗದರ್ಶನ ನೀಡಿ ಅವರ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಜಿಪಂ ಸಿಇಒ ಭುವನೇಶ ಪಾಟೀಲ್ ಮಾತನಾಡಿ, ಸತತ ಮೂರು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯಲ್ಲಿ ಹಲವು ಉಪಕ್ರಮ ಆಯೋಜಿಸಿದ್ದರ ಫಲವಾಗಿ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಪ್ರಸ್ತುತ ವರ್ಷ ಜಿಲ್ಲೆಯು 5ನೇ ಸ್ಥಾನಕ್ಕೆ ಬರುವಂತೆ ಸಾಮೂಹಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಉಪನಿರ್ದೇಶಕ ಉಮೇಶ ಬಮ್ಮಕ್ಕನವರ ಮಾತನಾಡಿ, ಸಮಾಜದಲ್ಲಿ ಸರ್ಕಾರಿ ಶಾಲೆಗಳೆಂದರೆ ಆಲಸ್ಯವಿದೆ. ಇಂದಿನ ಸಮಾಜದಲ್ಲಿ ಉತ್ತಮ ಸಾಧನೆ ಮಾಡಿರುವ ಬಹುತೇಕರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು ಎಂಬುದೇ ಹೆಮ್ಮೆಯ ವಿಚಾರ ಎಂದರು. ಡಿವೈಪಿಸಿ ಎಸ್‌.ಎಂ. ಹುಡೇದಮನಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ವಂದಿಸಿದರು. ಶಿಕ್ಷಣ ಇಲಾಖೆಯ ಆಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿವೇಶನ ಹಂಚಿಕೆಗಾಗಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ
ಜಿಲ್ಲಾದ್ಯಂತ ಶಾಲೆಗಳ ಪ್ರಾರಂಭೋತ್ಸವ