ಕನ್ನಡಪ್ರಭವಾರ್ತೆ ಚಿತ್ರದುರ್ಗಬಳ್ಳಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಬಾಣಂತಿಯರ ಸಾವು ಪ್ರಕರಣ ಚಿತ್ರದುರ್ಗ ಜಿಲ್ಲೆಗೂ ಎಂಟ್ರಿ ಕೊಟ್ಟಿತಾ ಎಂಬ ಅನುಮಾನಗಳು ಮೂಡಿವೆ. ಮಂಗಳವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿ ಒಬ್ಬರು ಅಸು ನೀಗಿದ್ದು ವೈದ್ಯರ ವಿರುದ್ಧ ವ್ಯಾಪಕ ಆಕ್ರೋಶಗಳು ಕೇಳಿ ಬಂದಿವೆ. ಚಳ್ಳಕೆರೆ ತಾಲೂಕಿನ ಜಾಗನೂರಹಟ್ಟಿ ಗ್ರಾಮದ ರೋಜಮ್ಮ(25) ಮೃತ ಬಾಣಂತಿಯಾಗಿದ್ದಾರೆ. ಕಳೆದ ಅ. 31ರಂದು ಇವರಿಗೆ ಹೊಟ್ಟೆ ಭಾಗದಲ್ಲಿ ನೋವು ಕಾಣಿಸಿತ್ತು. ಹಾಗಾಗಿ ಸಿಜೇರಿಯನ್ ಮಾಡಿ ಮಗು ಹೊರ ತೆಗೆಯಲಾಗಿತ್ತು. ಹೊಲಿಗೆ ಹಾಕಿದ ಭಾಗದಲ್ಲಿ ನಂಜು ಕಾಣಿಸಿಕೊಂಡ ಕಾರಣ ಮಂಗಳವಾರ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಆಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಂಜೆಯೇ ಆಕೆ ಅಸು ನೀಗಿದ್ದು ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಸಂಬಂದಿಕರು ಆರೋಪಿಸಿದ್ದಾರೆ. ವೈದ್ಯೆ ಡಾ. ರೂಪಶ್ರೀ ಸೀಜೇರಿಯನ್ ಮಾಡಿದ್ದರು. ಸೀಜೇರಿಯನ್ ಆಪರೇಷನ್ ಆದಾಗಿನಿಂದ ಹೊಟ್ಟೆನೋವಿತ್ತು. ನಲವತ್ತು ದಿನದ ಮಗುವನ್ನು ಬಾಣಂತಿ ರೋಜಮ್ಮ ಅಗಲಿದ್ದಾರೆ. ವೈದ್ಯೆ ಡಾ. ರೂಪಶ್ರೀ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತ ರೋಜಮ್ಮಳ ಪತಿ ವೆಂಕಟೇಶ, ಸಹೋದರಿ ಶಾರದಮ್ಮ ಒತ್ತಾಯಿಸಿದ್ದಾರೆ.
ರೋಜಮ್ಮ ಅವರಿಗೆ ಹೆರಿಗೆಯಾಗಿ 40ದಿನ ಆರು ಗಂಟೆ ಕಳೆದಿದೆ. ಮಂಗಳವಾರ ವಾಂತಿ, ಬೇಧಿ, ಹೊಟ್ಟೆನೋವು ಕಾರಣಕ್ಕೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಐಸಿಯುಗೆ ಶಿಫ್ಟ್ ಮಾಡುವಷ್ಟರಲ್ಲಿ ರೋಜಮ್ಮ ಸಾವನ್ನಪ್ಪಿದ್ದಾರೆ. ರೋಜಮ್ಮ ಸಾವಿಗೆ ನಿಖರ ಕಾರಣ ಈವರೆಗೆ ಸ್ಪಷ್ಟವಾಗಿಲ್ಲ. ಪೋಸ್ಟ್ ಮಾರ್ಟಂ ಬಳಿಕ ರೋಜಮ್ಮ ಸಾವಿನ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.ಡಾ. ರವೀಂದ್ರ, ಚಿತ್ರದುರ್ಗ ಜಿಲ್ಲಾ ಸರ್ಜನ್
ಕರವೇ ಪ್ರತಿಭಟನೆಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ಕಾರಣರಾಗಿರುವ ಡಾ. ರೂಪಶ್ರಿಯನ್ನು ಸೇವೆಯಿಂದ ಅಮಾನತುಪಡಿಸಿ ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವವರು ಇಂತಿಷ್ಟು ಹಣ ವೈದ್ಯರಿಗೆ ನೀಡಲೇಬೇಕು. ಹೀಗಾದರೆ ಇಲ್ಲಿಗೆ ಬರುವ ಬಡವರ ಗತಿಯೇನು ಎಂದು ಪ್ರಶ್ನಿಸಿ, ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರವಿಕುಮಾರ ನಾಯ್ಕ, ಸಂಘಟನಾ ಕಾರ್ಯದರ್ಶಿ ಓಬಣ್ಣ, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.