ಚಿತ್ರದುರ್ಗ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಆಗ್ರಹ

KannadaprabhaNewsNetwork |  
Published : Feb 27, 2024, 01:33 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಚಿತ್ರದುರ್ಗ ಘಟದವತಿಯಿಂದ ಸೋಮವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಚಿತ್ರದುರ್ಗ ಘಟದವತಿಯಿಂದ ಸೋಮವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಮುಖಂಡ ರವಿಕುಮಾರ್, ಜಿಲ್ಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳ ಬೆಳವಣಿಗೆ ಆಗುತ್ತಿಲ್ಲ. ಬೇಸಿಗೆಯಲ್ಲಿ ಜನರು ಕುಡಿಯುವ ನೀರಿಗೆ ಪರದಾಡುವಂತಾಗುತ್ತದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿರುವ ಭದ್ರಾ ಮೇಲ್ದಂಡೆ ಯೋಜನೆಗಾಗಿ ಜಿಲ್ಲೆಯ ಜನತೆ ರಾಮನಿಗಾಗಿ ಶಬರಿ ಕಾದಂತೆ ಕಾಯುತ್ತಿದ್ದಾರೆ. 10 ವರ್ಷಗಳ ಹಿಂದೆಯೇ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ ಆಳ್ವಿಕರ ಇಚ್ಛಾಶಕ್ತಿಯ ಕೊರತೆಯಿಂದ ಅದು ಕುಂಟುತ್ತಲೇ ಸಾಗಿದೆ ಎಂದು ದೂರಿದರು.

ಜನರ ಆರೋಗ್ಯಕ್ಕೆ ಪೂರಕವಾಗುವ ವೈದ್ಯಕೀಯ ಕಾಲೇಜು ಇತ್ತೀಚೆಗೆ ಮಂಜೂರಾಗಿ ಕಾರ್ಯರಂಭ ಮಾಡಿದ್ದರೂ ಪೂರ್ಣ ಪ್ರಮಾಣದ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿಲ್ಲ. ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗ ಜರೂರಾಗಿ ಆಗಬೇಕು ಎಂಬ ಕೂಗು ವ್ಯಾಪಕವಾಗಿದ್ದರೂ ತ್ವರಿತವಾಗಿ ಕೆಲಸ ನಡೆಯುತ್ತಿಲ್ಲ. ಜನರಿಂದ ಸುಂಕ ಸಂಗ್ರಹಿಸಲು ಅನುಕೂಲವಾಗುವ ರಸ್ತೆಗಳನ್ನು ವೇಗವಾಗಿ ನಿರ್ಮಿಸುವ ಸರ್ಕಾರಗಳು, ಜನರಿಗೆ ಅನುಕೂಲವಾಗುವ ರೈಲ್ವೆ ಮಾರ್ಗ ನಿರ್ಮಿಸಲು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಹಾಗೂ ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ಈ ಯೋಜನೆಗಳನ್ನು ಜರೂರಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಎಸ್‍ಯುಸಿಐ ಚಿತ್ರದುರ್ಗ ಘಟಕದ ಸದಸ್ಯೆ ಸುಜಾತ ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ರೈತರು-ಕೃಷಿ ಕೂಲಿ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಬರಪರಿಹಾರ ನೀಡಿಲ್ಲ. ಬರ ನಿರ್ವಹಣೆ ಕಾಮಗಾರಿ ಆರಂಭಿಸುವ ಕುರಿತು ಯಾವುದೇ ಯೋಜನೆ ಕೈಗೆತ್ತಿಕೊಂಡಿಲ್ಲ. ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ಸರ್ಕಾರಿ ಕಾಲೇಜು ಮತ್ತು ವಿದ್ಯಾಲಯಗಳು ಇದ್ದರೂ ಅವುಗಳ ಅಗತ್ಯಕ್ಕೆ ತಕ್ಕಷ್ಟು ಮೂಲ ಸೌಕರ್ಯಗಳ ಹಾಗೂ ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಆಗಿಲ್ಲ. ಬಹುತೇಕ ಅತಿಥಿ ಬೋಧಕರ ಮೂಲಕ ಅವು ನಡೆಯುತ್ತಿವೆ. ನಗರದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಹಾಗೂ ಸರ್ಕಾರಿ ಮಹಿಳಾ ಕಾಲೇಜಿಗೆ ಹೊಸ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಕುಮುದಾ ಮಾತನಾಡಿ, ನಗರದಲ್ಲಿ ಮೊದಲು ಐದು ದಿನಕ್ಕೊಮ್ಮೆ ನೀರು ಬಿಡಲಾಗುತಿತ್ತು. ಈಗ 10-12 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಅದೂ ಜನರ ಅವಶ್ಯಕತೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ನಗರಸಭೆಯಿಂದ ಕೇವಲ 100 ಮೀಟರ್ ದೂರದಲ್ಲಿರುವ ಖಾಜಿಮೊಹಲ್ಲಾ ಬಡಾವಣೆ, ಬಸವ ಮಂಟಪ ರಸ್ತೆ, ದೊಡ್ಡಪೇಟೆ ಬಡಾವಣೆಗಳಿಗೆ ನೀರು ಬಿಟ್ಟು 24 ದಿನಗಳಾಗಿವೆ. ಬೇಸಿಗೆ ಪ್ರಾರಂಭದಲ್ಲೇ ಪರಿಸ್ಥಿತಿ ಹೀಗಾದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ. ನೀರಿನ ಸಮರ್ಪಕ ಪೂರೈಕೆಗಾಗಿ ನಗರಾಡಳಿತ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು. ನಗರದಲ್ಲಿ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕೊಳಚೆ ನೀರನ್ನು ಮಲ್ಲಾಪುರ ಕೆರೆಗೆ ಬಿಡಲಾಗುತ್ತಿದ್ದು, ಅದು ಸಂಪೂರ್ಣ ಮಲೀನಗೊಂಡಿದೆ. ಇದರಿಂದ ಕೆರೆಯ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೊಳಚೆ ನೀರನ್ನು ಮಲ್ಲಾಪುರ ಕೆರೆಗೆ ಹರಿಸುವುದನ್ನು ನಿಲ್ಲಿಸಿ, ಕೆರೆ ಮತ್ತು ಅಲ್ಲಿನ ಜೀವಸಂಕುಲ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಹಲವು ಗಂಭೀರ ಸಮಸ್ಯೆಗಳು ಇದ್ದರೂ ರಾಜಕೀಯ ನಾಯಕರಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಅವುಗಳ ಪರಿಹಾರಕ್ಕಾಗಿ ತುಡಿತ ಕಾಣುತ್ತಿಲ್ಲ. ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರವನ್ನು ವಿತರಿಸಬೇಕು. ನರೇಗಾ ಕೂಲಿಯನ್ನು 600 ರು. ಹಾಗೂ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ನಗರದ ನಗರ ಸಾರಿಗೆ ವಿವಿಧ ಮಾರ್ಗಗಳ ಮತ್ತು ಬಸ್‌ಗಳ ಓಡಾಟದ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಸ್‍ಯುಸಿಐ(ಸಿ) ಸದಸ್ಯರಾದ ನಾಗರಾಜು, ಹರಿಪ್ರಸಾದ್ ನಾಗರಿಕರಾದ ರೇಷ್ಮಾ, ಮುನ್ನು, ರಮ್ಯಾ, ರಜಿಯಾ, ತರನುಮ್ ಬಾನು, ಷಾನ, ಸೈಯದಾ ಫಾತೀಮಾ ಪ್ರತಿಭಟನೆ ನೇತೃತ್ವವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ