ಗ್ಯಾರಂಟಿಗಳಿಗಾಗಿ ಚಿತ್ರದುರ್ಗ ಜಿಲ್ಲೆಗೆ 2,588 ಕೋಟಿ ರು.ವ್ಯಯ

KannadaprabhaNewsNetwork |  
Published : Oct 19, 2025, 01:00 AM IST
ಚಿತ್ರದುರ್ಗ ಎರಡನೇ ಪುಟದ  ಲೀಡ್   | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಗಳಿಗೆ ಚತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ 2,588 ಕೋಟಿ ರು. ವ್ಯಯ ಮಾಡಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಹೇಳಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಮಹತ್ವದ್ದಾಗಿವೆ. ಯೋಜನೆಗಳ ಸವಲತ್ತು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ. ಪಂಚಗ್ಯಾರಂಟಿ ಯೋಜನೆಗಳಿಂದ ದೇಶಕ್ಕೆ ಕರ್ನಾಟಕ ಮಾದರಿಯಾಗಿದೆ. ಈಗ ದೇಶದೆಲ್ಲೆಡೆ ಕರ್ನಾಟಕ ಮಾಡೆಲ್ ಆಗುತ್ತಿದೆ ಎಂದರು.

ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕಾಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳು ಆಧಾರವಾಗಿವೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಗಾಗಿಯೇ ಒಟ್ಟು 98,500 ಕೋಟಿ ರು. ನೀಡಿದೆ. ಇದರ ನಡುವೆಯೂ ಅಭಿವೃದ್ಧಿಗಾಗಿಯೇ ಈ ವರ್ಷ ಬಜೆಟ್‍ನಲ್ಲಿ 1.35 ಲಕ್ಷ ಕೋಟಿ ರು. ಅನುದಾನವನ್ನು ಮೀಸಲಿರಿಸಿದೆ. ರಾಜ್ಯದ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸುಮಾರು 27 ಸಾವಿರ ಕೋಟಿ ರು. ಸಾಲವನ್ನು ನೀಡುವ ಗುರಿ ಹೊಂದಲಾಗಿದೆ. ಹಣದ ಕೊರತೆಯಾಗಿದೆ ಎಂದು ಸುಳ್ಳು ಅಪಪ್ರಚಾರ ಮಾಡುವ ವಿರೋಧ ಪಕ್ಷಗಳಿಗೆ ಈ ಅಂಕಿ ಅಂಶಗಳೇ ಉತ್ತರ ಹೇಳುತ್ತವೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳು ಸುಮಾರು ಶೇ.98 ರಷ್ಟು ಅನುಷ್ಠಾನವಾಗಿದ್ದು, ಜಿಲ್ಲೆಯ ಫಲಾನುಭವಿಗಳು ಯೋಜನೆಯ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ 300 ಜನ ಗ್ಯಾರಂಟಿ ಫಲಾನುಭವಿಗಳನ್ನು ಜಿಲ್ಲಾ ಕೇಂದ್ರಕ್ಕೆ ಕರೆಯಿಸಿ, ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಂವಾದ ಹಾಗೂ ಸಮಾವೇಶವನ್ನು ಆಯೋಜಿಸಲಾಗುವುದು.

ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 57 ಸಾವಿರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. 4.83 ಕೋಟಿ ಮಹಿಳೆಯರು ಉಚಿತ ಪ್ರಯಾಣಿಸಿದ್ದು, ಇದಕ್ಕಾಗಿ 202.85 ಕೋಟಿ ರು. ಹಣವನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಪಾವತಿ ಮಾಡಿದೆ ಎಂದು ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ತಿಳಿಸಿದರು.

ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಗಲ್ಲಿ ಗಲ್ಲಿಗಳಲ್ಲಿ ಆಟೋಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಿ, ಕಳ್ಳ ಸಾಗಾಣಿಕೆ ಮಾಡುವ ಪ್ರಕರಣ ನಡೆಯುತ್ತಿದ್ದರೂ, ಅಧಿಕಾರಿಗಳು ಇದನ್ನು ಗಮನಿಸುತ್ತಿಲ್ಲ. ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಆರೋಪಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,98,083 ಫಲಾನುಭವಿಗಳಿದ್ದು, 1617.01 ಕೋಟಿ ರೂ. ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಶೇ.98ರಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಣಿಯಾದವರ ಪೈಕಿ 4966 ಮಂದಿ ಮೃತಪಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ತಿಳಿಸಿದರು.

ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3,79,140 ಗ್ರಾಹಕರು ನೋಂದಣಿಯಾಗಿದ್ದು 65.13 ಕೋಟಿ ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಇದಕ್ಕಾಗಿ ಸರ್ಕಾರ 371.80 ಕೋಟಿ ರೂ. ಸಬ್ಸಿಡಿ ಹಣವನ್ನು ಪಾವತಿ ಮಾಡಲಾಗಿದೆ. ಜಿಲ್ಲೆಯ ಶೇ.95.70 ಮಂದಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷರಾದ ನಾಗೇಶ್ ರೆಡ್ಡಿ, ನಿರಂಜನ್, ಸದಸ್ಯರಾದ ಇಂದಿರಾ, ಅಬ್ದುಲ್ ಷಾ ವಲಿ, ಶಿವಕುಮಾರ್, ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲೂಕು ಮಟ್ಟದ ಅಧ್ಯಕ್ಷರು, ಸದಸ್ಯರು ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ